ಕನ್ನಡಪ್ರಭ ವಾರ್ತೆ ಹಾರೋಹಳ್ಳಿ
ನಮ್ಮ ಮೇಲೆ ವಿಶ್ವಾಸ, ನಂಬಿಕೆ ಇಟ್ಟು ಜನ ಸೇವೆ ಮಾಡಲು ಅವಕಾಶ ನೀಡಿರುವ ಹಾರೋಹಳ್ಳಿ ಜನರ ಋಣ ತೀರಿಸುವ ಕಾರ್ಯಕ್ಕೆ ವಿರೋಧಿಗಳು ನಡೆಸುವ ಪ್ರತಿಭಟನೆಗಳಿಗೆ ನಾವು ಹೆದರುವುದಿಲ್ಲ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.ಪಟ್ಟಣದ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ನೂತನ ತಾಲೂಕು ಕಚೇರಿ ಕಟ್ಟಡ ಶಂಕುಸ್ಥಾಪನೆ ಹಾಗೂ ಪಟ್ಟಣ ಪಂಚಾಯಿತಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಹಾರೋಹಳ್ಳಿ ತಾಲೂಕು ರಚನೆಯಾಗಿದೆ ಅಷ್ಟೆ. ಕಚೇರಿ ಸೇರಿದಂತೆ ಅಧಿಕಾರ ನಡೆಸಲು ಯಾವುದೇ ಮೂಲಭೂತ ಸೌಲಭ್ಯವಿಲ್ಲದ ಕಾರಣ ಪಟ್ಟಣದ ಹೊರ ವಲಯದಲ್ಲಿ ಸುಸಜ್ಜಿತ ಹಾಗೂ ಭವ್ಯವಾದ ತಾಲೂಕು ಆಡಳಿತ ಸಂಕೀರ್ಣ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಇದನ್ನು ಸಹಿಸದ ವಿರೋಧಿಗಳು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ. ಇವರ ಪ್ರತಿಭಟನೆಗಳಿಗೆಲ್ಲ ಹೆದರುವುದಿಲ್ಲ ಎಂದರು.ಈ ಹಿಂದೆ ಶಾಸಕರಾಗಿ ಹಾಗೂ ಮುಖ್ಯಮಂತ್ರಿಗಳಾಗಿ ಅಧಿಕಾರ ನಡೆಸಿದವರು ಹಾರೋಹಳ್ಳಿ ಅಭಿವೃದ್ಧಿಗೆ ಶ್ರಮಿಸಲಿಲ್ಲ. ಅವರನ್ನು ಪ್ರಶ್ನಿಸಬೇಕಾದವರು ಇಂದು ಪ್ರತಿಭಟನೆಗೆ ಇಳಿದಿರುವುದು ನಾಚಿಕೆಗೇಡಿನ ಸಂಗತಿ. ಅಭಿವೃದ್ಧಿಗೆ ಅಡ್ಡಿಪಡಿಸುವ ಇಂತಹವರನ್ನು ಜನ ಎಂದೂ ಕ್ಷಮಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಚ್.ಡಿ.ಕುಮಾರಸ್ವಾಮಿರವರು ಅಧಿಕಾರ ಇದ್ದಾಗ ಹಾರೋಹಳ್ಳಿ ತಾಲೂಕು ಘೋಷಣೆ ಮಾಡಿದರು ಅಷ್ಟೆ. ಅದಕ್ಕೆ ಬೇಕಾಗುವ ಅನುದಾನ, ಸೌಲಭ್ಯಗಳನ್ನು ನೀಡದೆ ಅತಂತ್ರ ಮಾಡಿ ಹೋಗಿದ್ದರು. ಇದಕ್ಕೆ ನಾವು ಹೊಸ ರೂಪ ನೀಡುವ ಕಾಯಕಲ್ಪದಲ್ಲಿ ತೊಡಗಿದ್ದೇವೆ. ಅಭಿವೃದ್ಧಿ ಕೆಲಸಗಳಿಂದ ಕ್ಷೇತ್ರದ ಮತದಾರರ ಋಣ ತೀರಿಸುವ ಸಂಕಲ್ಪ ಮಾಡಿದ್ದೇನೆ ಎಂದು ಹೇಳಿದರು.ಹಾರೋಹಳ್ಳಿಯಲ್ಲಿ 33 ಕೋಟಿ ರು. ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ. ಮೊದಲ ಹಂತದಲ್ಲಿ ತಾಲೂಕು ಕಚೇರಿ ಕಟ್ಟಡ ನಿರ್ಮಾಣಕ್ಕೆ 8 ಕೋಟಿ 60 ಲಕ್ಷ ಬಿಡುಗಡೆಯಾಗಿದೆ. ಸರ್ಕಾರದಲ್ಲಿ ಹಂತಹಂತವಾಗಿ ಅನುದಾನ ಪಡೆದು ಒಂದೇ ಸೂರಿನಡಿ ಸರ್ಕಾರಿ ಕಚೇರಿಗಳ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಹಾರೋಹಳ್ಳಿ ವೇಗವಾಗಿ ಬೆಳೆಯುತ್ತಿದೆ. ಪಟ್ಟಣವನ್ನು ಮಾದರಿಯಾಗಿ ಮಾಡಬೇಕಾಗಿದೆ, ಮುಖ್ಯ ರಸ್ತೆ ಅಗಲೀಕರಣ, ಕಾಲೇಜು, ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಹಾರೋಹಳ್ಳಿ- ಮರಳವಾಡಿ ರಸ್ತೆ ಅಭಿವೃದ್ಧಿಗೆ 20 ಕೋಟಿ ರು. ಬಿಡುಗಡೆಯಾಗಿದೆ. ಒಂದೂವರೆ ವರ್ಷದಲ್ಲಿ ತಾಲೂಕು ಸಂಕೀರ್ಣ ಕಾಮಗಾರಿ ಮುಗಿಯಲಿದೆ. ನಾವು ಹಾರೋಹಳ್ಳಿಗೆ ಮೆಟ್ರೋ ಸಂಪರ್ಕ ಕಲ್ಪಿಸಲು ಮನವಿ ಮಾಡಿದ್ದೇವೆ. 108 ಕೋಟಿ ರು. ವೆಚ್ಚದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕೆಲಸ, 320 ಕೋಟಿ ರು. ವೆಚ್ಚದಲ್ಲಿ ಕುಡಿಯಲು ಕಾವೇರಿ ನೀರಿನ ಸರಬರಾಜು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ರೈತರಿಗೆ ಸಾಗುವಳಿ ಚೀಟಿ ನೀಡುವ ಮೂಲಕ ಜನರ ಋಣ ತೀರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.ವಿಧಾನ ಪರಿಷತ್ ಸದಸ್ಯ ಎಸ್.ರವಿ ಮಾತನಾಡಿ, ಹಾರೋಹಳ್ಳಿಯಲ್ಲಿ ಇದೊಂದು ಮಹತ್ತರ ಅಭಿವೃದ್ಧಿಗೆ ಕೊಡುಗೆಯಾದ ದಿನವಾಗಿದೆ. ಕುಮಾರಸ್ವಾಮಿ ಕುಟುಂಬದವರೇ ಪ್ರಧಾನಮಂತ್ರಿ, ಮುಖ್ಯಮಂತ್ರಿ, ಶಾಸಕರು, ಸಚಿವರು ಆಗಿದ್ದ ವೇಳೆ ಕುಮಾರಸ್ವಾಮಿಯವರು ಹಾರೋಹಳ್ಳಿಗೆ ಯಾವುದೇ ಅಭಿವೃದ್ಧಿ ಮಾಡಲಿಲ್ಲ. ಅವರು ಅಧಿಕಾರದಲ್ಲಿದ್ದಾಗ ಇಂತಹ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಕೊಡಲಾಗದೆ ಕಾರ್ಯಕರ್ತರನ್ನು ಎತ್ತಿಕಟ್ಟಿ ಅಭಿವೃದ್ಧಿಗೆ ಅಡ್ಡಿಪಡಿಸುವ ಕೆಲಸ ಮಾಡುತ್ತಿದ್ದಾರೆ. ಬಹುದಿನಗಳ ಬೇಡಿಕೆಗಳನ್ನು ಶಾಸಕ ಇಕ್ಬಾಲ್ ಹುಸೇನ್ ನೂರಾರು ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೆ ಮುಂದಾಗಿದ್ದಾರೆ, ನಿಮ್ಮ ಸಹಕಾರ ಅಗತ್ಯವಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅನುದಾನದಲ್ಲಿ ವಿಶೇಷ ಚೇತನರಿಗೆ ದ್ವಿಚಕ್ರ ವಾಹನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಲಾಯಿತು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು, ತಾಲೂಕು ಅಧ್ಯಕ್ಷ ಅಶೋಕ್, ಬಮೂಲ್ ನಿರ್ದೇಶಕ ಹರೀಶ್, ತಹಸೀಲ್ದಾರ್ ಹರ್ಷವರ್ಧನ್, ಅಪೂರ್ವ, ಪಟ್ಟಣ ಪಂಚಾಯಿತಿ ಅಧಿಕಾರಿ ಶ್ವೇತಬಾಯಿ, ಮುಖಂಡರಾದ ಮೋಹನ್ ಹೊಳ್ಳ, ಭುಜಂಗಯ್ಯ, ಕೀರಣೆಗೆರೆ ಜಗದೀಶ್, ರಾಂಪುರ ನಾಗೇಶ್ ಮತ್ತಿತರರು ಹಾಜರಿದ್ದರು.