ಕನ್ನಡಪ್ರಭ ವಾರ್ತೆ ಕುಶಾಲನಗರನಾನು ಸಂಸದ ಸ್ಥಾನದ ಆಕಾಂಕ್ಷಿ ಅಲ್ಲ. ಅದರ ಬಗ್ಗೆ ಪದೇ ಪದೇ ಚರ್ಚೆ ಮಾಡುವುದು ಸರಿಯಲ್ಲ ಎಂದ ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಸ್ಪಷ್ಟ ಪಡಿಸಿದ್ದಾರೆ.ಕುಶಾಲನಗರದ ಬಳಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
ನಿಮ್ಮನ್ನು ಮತ್ತೆ ಬಿಜೆಪಿಗೆ ಕರೆತರುವ ಯತ್ನ ನಡೆದಿದೆಯಾ ಎಂದ ಪ್ರಶ್ನೆಗೆ ಶೆಟ್ಟರ್ ನನ್ನನ್ನು ಯಾರು ಕರೆದಿಲ್ಲ. ಕರೆದರೂ ಹೋಗುವ ಪ್ರಶ್ನೆ ಇಲ್ಲ ಎಂದು ಹೇಳಿದರು.ಯಡಿಯೂರಪ್ಪ ಸರ್ಕಾರದ ವಿರುದ್ಧ ಯತ್ನಾಳ್ 40,000 ಕೋಟಿ ಅಕ್ರಮ ಆರೋಪ ವಿಚಾರ ಬಗ್ಗೆ ಉತ್ತರಿಸಿದ ಶೆಟ್ಟರ್ ಭ್ರಷ್ಟಾಚಾರದ ಬಗ್ಗೆ ಬಿಜೆಪಿಯವರಿಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಇದೀಗ ಎಲ್ಲಾ ಹೊರಗೆ ಬರುತ್ತಿದೆ. ಈಗಾಗಲೇ ಸಿದ್ದರಾಮಯ್ಯರ ಸರ್ಕಾರ ತನಿಖೆ ಸಮಿತಿ ರಚಿಸಿದೆ. ತನಿಖೆ ನಡೆಯುತ್ತಿದೆ. ಯತ್ನಾಳ್ ಮಾಹಿತಿ ತೆಗೆದುಕೊಂಡು ತನಿಖೆ ಮಾಡಿದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿದೆ ಎಂದ ಶೆಟ್ಟರ್, ಯತ್ನಾಳ್ ಆರೋಪದ ಬಗ್ಗೆ ದಾಖಲೆ ಕೊಟ್ರೆ ತನಿಖೆಗೆ ಅನುಕೂಲ ಆಗಲಿದೆ ಎಂದರು.
ಕೋವಿಡ್ ಸಂದರ್ಭ ಬಿಜೆಪಿಯ 40 ಪರ್ಸೆಂಟ್ ಸರ್ಕಾರದ ಬಗ್ಗೆ ಕಾಂಗ್ರೆಸ್ ಆರೋಪ ಮಾಡಿತ್ತು ಎಂದು ನೆನಪಿಸಿದರು.ವೀರಶೈವ ಲಿಂಗಾಯತ ಮಹಾ ಅಧಿವೇಶನದಲ್ಲಿ ಧರ್ಮ ನಿರ್ಣಯ ವಿಚಾರ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಶೆಟ್ಟರ್ ಲಿಂಗಾಯತ ವೀರಶೈವ ಸಮುದಾಯ ಸಂಖ್ಯೆ ಕುಟುಂಬದ ಬಗ್ಗೆ ಮಾಹಿತಿ ಕಲೆ ಹಾಕಬೇಕು. ನೆರೆಯ ರಾಜ್ಯಗಳಲ್ಲಿ ಎಷ್ಟಿದ್ದಾರೆ ಅನ್ನುವ ಮಾಹಿತಿ ಸಂಗ್ರಹ ಆಗಬೇಕಾಗಿದೆ. ಈ ಕಾರಣಕ್ಕೆ ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ಅಂತ ಬರೆಯುವ ನಿರ್ಣಯ ಮಾಡಿದ್ದಾರೆ, ಸಮಾಜದ ಬಂಧುಗಳು ಯಾವ ರೀತಿ ಸ್ಪಂದಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ ಎಂದರು.
ಕನ್ನಡಪರ ಸಂಘಟನೆಗಳ ಕನ್ನಡ ಬೋರ್ಡ್ ಗಲಾಟೆ ವಿಚಾರದ ಬಗ್ಗೆ ಮಾತನಾಡಿದ ಶೆಟ್ಟರ್ ಕನ್ನಡದ ಬಗ್ಗೆ ಜಾಗೃತಿ ಆಗಬೇಕು ಅದು ಜನರ ಮನಸ್ಸಿನಲ್ಲಿ ಬರಬೇಕು. ಉದ್ಯಮಿಗಳಿಗೆ ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮಾಡಬೇಕಾಗಿದೆ ತಮಿಳುನಾಡಿನ ಜನರು ಈ ವಿಚಾರದಲ್ಲಿ ಈಗಾಗಲೇ ಜಾಗೃತರಾಗಿದ್ದಾರೆ ಎಂದರು.ಕನ್ನಡ ಪರ ಸಂಘಟನೆ ಸರ್ಕಾರದ ಗಮನಕ್ಕೆ ತಂದು ಜಾಗೃತಿ ಮಾಡುವ ಬೇಕಾಗಿದೆ. ಕಾನೂನನ್ನು ನೇರವಾಗಿ ಕೈಗೆ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಅವರು ಹೇಳಿದರು.
ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಇದ್ದರು.