ನಾನು ತಪ್ಪು ಮಾಡಿಲ್ಲ: ಗೌರ್‍ನರ್‌ಗೆ ಸಿಎಂ ಸಿದ್ದರಾಮಯ್ಯ 70 ಪುಟಗಳ ದೀರ್ಘ ಉತ್ತರ

KannadaprabhaNewsNetwork | Updated : Aug 08 2024, 07:32 AM IST

ಸಾರಾಂಶ

‘ಮುಡಾ ನಿವೇಶನ  ವಿಚಾರದಲ್ಲಿ ನಾನು ಲೋಪ ಎಸಗಿಲ್ಲ.  ಹೀಗಾಗಿ ನನ್ನ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸಲ್ಲಿಕೆಯಾಗಿರುವ ದುರುದ್ದೇಶದ ಅರ್ಜಿಯನ್ನು ತಿರಸ್ಕರಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರಿಗೆ ನೀಡಿರುವ ಉತ್ತರದಲ್ಲಿ ಆಗ್ರಹಿಸಿದ್ದಾರೆ ಎನ್ನಲಾಗಿದೆ.

 ಬೆಂಗಳೂರು :  ‘ಮುಡಾ ನಿವೇಶನ ಹಂಚಿಕೆ ವಿಚಾರದಲ್ಲಿ ನಾನು ಯಾವುದೇ ಲೋಪ ಎಸಗಿಲ್ಲ. ಅಧಿಕಾರ ದುರ್ಬಳಕೆ, ಸ್ವಜನ ಪಕ್ಷಪಾತ ಮಾಡಿಲ್ಲ. ಹೀಗಾಗಿ ನನ್ನ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸಲ್ಲಿಕೆಯಾಗಿರುವ ದುರುದ್ದೇಶದ ಅರ್ಜಿಯನ್ನು ತಿರಸ್ಕರಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರಿಗೆ ನೀಡಿರುವ ಸುದೀರ್ಘ ಉತ್ತರದಲ್ಲಿ ಆಗ್ರಹಿಸಿದ್ದಾರೆ ಎನ್ನಲಾಗಿದೆ.

ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಅವರು ಜು.26ರಂದು ಮುಖ್ಯಮಂತ್ರಿಗಳಿಗೆ ಶೋಕಾಸ್‌ ನೋಟಿಸ್‌ ನೀಡಿದ್ದರು. ಈ ಬಗ್ಗೆ ಕಳೆದ ಶನಿವಾರವೇ 70 ಪುಟಗಳನ್ನು ಒಳಗೊಂಡ ಸುದೀರ್ಘ ಉತ್ತರವನ್ನು ಸಿದ್ದರಾಮಯ್ಯ ಅವರು ನೀಡಿದ್ದಾರೆ. ಈ ಮೊದಲು ರಾಜ್ಯಪಾಲರಿಗೆ ಸಲ್ಲಿಸಿದ್ದ ದಾಖಲೆಗಳು ಸೇರಿದಂತೆ ವಿವಿಧ ದಾಖಲೆಗಳನ್ನೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಇದರಲ್ಲಿ ಲಗತ್ತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಡಾ ನಿವೇಶನದ ಸಂಪೂರ್ಣ ದಾಖಲೆ, ಇಂತಹ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್, ಹೈಕೋರ್ಟ್ ನೀಡಿರುವ ಹಲವು ತೀರ್ಪುಗಳನ್ನು ಉಲ್ಲೇಖಿಸಿರುವ ಮುಖ್ಯಮಂತ್ರಿಗಳು, ರಾಜ್ಯಪಾಲರು ನೋಡಿರುವ ಶೋಕಾಸ್‌ ನೋಟಿಸ್‌ ಕೂಡ ಕ್ರಮಬದ್ಧವಿಲ್ಲ. ಕೂಡಲೇ ನೋಟಿಸ್‌ ಹಿಂಪಡೆಯಬೇಕು ಎಂದೂ ಕೋರಿದ್ದಾರೆ.

ನನ್ನ ವಿರುದ್ಧ ಅರ್ಜಿದಾರರು ಮಾಡಿರುವ ಎಲ್ಲಾ ಆರೋಪಗಳು ನಿರಾಧಾರ. ನಿವೇಶನ ಹಂಚಿಕೆ ಪ್ರಕ್ರಿಯೆ ನಡೆದಾಗ ನಾನು ಅಧಿಕಾರದಲ್ಲಿ ಇರಲಿಲ್ಲ. ಕಾನೂನು ಬದ್ಧವಾಗಿ ಮಲ್ಲಿಕಾರ್ಜುನ ಸ್ವಾಮಿ ಅವರು ಜಮೀನು ಖರೀದಿ ಮಾಡಿದ್ದು, ಬಳಿಕ ಭೂ ಪರಿವರ್ತನೆ ಮಾಡಿಸಿಕೊಂಡಿದ್ದಾರೆ. ನಂತರ ನನ್ನ ಪತ್ನಿಗೆ ಅರಿಶಿಣ-ಕುಂಕುಮಕ್ಕಾಗಿ 3.16 ಎಕರೆ ಜಮೀನು ನೀಡಿದ್ದಾರೆ. 

ಈ ಜಮೀನನ್ನು ಅನಧಿಕೃತವಾಗಿ ಒತ್ತುವರಿ ಮಾಡಿ ಮುಡಾದವರು ನಿವೇಶನ ಮಾಡಿ ಹಂಚಿಕೆ ಮಾಡಿದ್ದು, ತಮ್ಮ ತಪ್ಪು ಒಪ್ಪಿಕೊಂಡು ಪರಿಹಾರವಾಗಿ ನಿವೇಶನಗಳನ್ನು ನೀಡಿದ್ದಾರೆ. ಇದರಲ್ಲಿ ನನ್ನ ಪಾತ್ರ ಏನಿದೆ? ಎಂದು ಪ್ರಕರಣದ ಎಲ್ಲಾ ಹಂತಗಳನ್ನೂ ವಿವರಿಸಿ ವಿಸ್ತೃತವಾಗಿ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ಇನ್ನು ‘ನನ್ನ ಕುಟುಂಬ ನ್ಯಾಯಸಮ್ಮತವಾಗಿ ನಿವೇಶನ ಪಡೆದಿದೆ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಜುಲೈ ಮೂರನೇ ವಾರದಲ್ಲಿ ಎಲ್ಲಾ ದಾಖಲೆಗಳನ್ನೂ ನಿಮಗೆ ಸಲ್ಲಿಸಿದ್ದಾರೆ. ಹೀಗಿದ್ದರೂ ನನ್ನ ವಿರುದ್ಧದ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸಲ್ಲಿಸಿರುವ ಆಧಾರರಹಿತ ಅರ್ಜಿಯನ್ನು ಪರಿಗಣಿಸಿರುವುದು ಸರಿಯಲ್ಲ. ಎಲ್ಲಾ ದಾಖಲೆಗಳನ್ನೂ ಪರಿಶೀಲಿಸಿ ಆ ಅರ್ಜಿಯನ್ನು ತಿರಸ್ಕರಿಸಬೇಕು’ ಎಂದು ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

Share this article