ಗದುಗಿನ ಸೂರ್ಯನಗರದಲ್ಲಿ ಹನಿ ನೀರಿಗೂ ಬರ!

KannadaprabhaNewsNetwork |  
Published : Mar 03, 2026, 02:00 AM IST
ಸೂರ್ಯದ ನಗರ ನಾಮಫಲಕ | Kannada Prabha

ಸಾರಾಂಶ

ಸೂರ್ಯನಗರವು ಭೌಗೋಳಿಕವಾಗಿ ತಗ್ಗು ಪ್ರದೇಶದಲ್ಲಿದೆ. ಕೇವಲ ಒಂದು ಪೈಪ್ ಲಿಂಕ್ ಮಾಡಿದರೆ ಸಾಕು, ಯಾವುದೇ ಪಂಪ್ ಗಳ ಸಹಾಯವಿಲ್ಲದೇ ಇಡೀ ಬಡಾವಣೆ ತುಂಬೆಲ್ಲ ತುಂಗಭದ್ರಾ ನದಿ ನೀರು ಪೂರೈಕೆ ಮಾಡಲು ಸಾಧ್ಯವಿದೆ.

ಶಿವಕುಮಾರ ಕುಷ್ಟಗಿ

ಗದಗ: ಜಿಲ್ಲಾಡಳಿತ ಭವನದ ಕೂಗಳತೆ ದೂರ, ಜಿಲ್ಲಾ ಕೋರ್ಟ್ ಹಿಂಭಾಗದಲ್ಲಿರುವ ನಗರದ ಪ್ರತಿಷ್ಠಿತ ಬಡಾವಣೆಯಾಗಿರುವ ಸೂರ್ಯನಗರ (ಹೊಸ ಹುಡ್ಕೋ ಕಾಲನಿ) ನಗರಸಭೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹನಿ ನೀರಿಲ್ಲದೇ ಪರದಾಡುತ್ತಿದ್ದು, ಇದಕ್ಕಾಗಿ ಭರಿಸಬೇಕಾದ ಹಣವನ್ನು 2014ರಲ್ಲಿಯೇ ಭರಣ ಮಾಡಿದ್ದರೂ ಇದುವರೆಗೂ ನೀರು ಸರಬರಾಜು ಮಾತ್ರ ಆಗಿಲ್ಲ.

ಬಡಾವಣೆಯನ್ನು ನಿರ್ಮಿಸಿರುವ ಹುಡ್ಕೋ ಸಂಸ್ಥೆಯ ದಾಖಲೆಗಳ ಪ್ರಕಾರ 2014 ಮತ್ತು 2016ರಲ್ಲಿ ಬಡಾವಣೆಯ 830 ನಿವೇಶನಗಳಿಗೆ ಕುಡಿಯುವ ನೀರು ಒದಗಿಸಲು ಗೃಹ ಮಂಡಳಿಯು ₹7.05 ಕೋಟಿ ಮೊತ್ತವನ್ನು ನಗರಸಭೆಗೆ ಠೇವಣಿ ಇಟ್ಟಿದೆ. ಅದರಲ್ಲಿ 2014ರ ​ಜೂ. 11ರಂದು ₹4.50 ಕೋಟಿ ನೀರು ಪೂರೈಕೆಗೆ ಹಾಗೂ 2016ರ ಜೂ. 26ರಂದು ₹2.55 ಕೋಟಿಯನ್ನು ಪೈಪ್‌ಲೈನ್ ಕಾಮಗಾರಿಗೆ ಸಂದಾಯ ಮಾಡಲಾಗಿದೆ. ಆದರೆ ​ಹಣ ಪಡೆದು ದಶಕ ಕಳೆದರೂ ನಗರಸಭೆ ಮಾತ್ರ ಕುಂಭಕರ್ಣ ನಿದ್ದೆಯಲ್ಲಿದೆ. ಕುಡಿಯುವ ನೀರಿಗಾಗಿ ಮೀಸಲಿಟ್ಟ ಹಣವನ್ನು ಬೇರೆ ಯೋಜನೆಗಳಿಗೆ ಬಳಸಿ, ಸೂರ್ಯನಗರದ ಜನರನ್ನು ಬಾಯಾರಿಕೆಯಲ್ಲಿಯೇ ಬದುಕುವಂತೆ ಮಾಡಿದ್ದಾರೆ.

12 ವರ್ಷವಾದರೂ ಆಗಿಲ್ಲ: ​ಮುಂಡರಗಿಯಿಂದ ಗದಗ ನಗರಕ್ಕೆ ಸರಬರಾಜಾಗುವ ನಿರಂತರ ಕುಡಿಯುವ ನೀರಿನ ಪೈಪ್‌ಲೈನ್ ಸೂರ್ಯನಗರದ ಪಕ್ಕದಲ್ಲೇ ಹಾದುಹೋಗಿದೆ. ​ವಿಪರ್ಯಾಸವೆಂದರೆ, ಸೂರ್ಯನಗರವು ಭೌಗೋಳಿಕವಾಗಿ ತಗ್ಗು ಪ್ರದೇಶದಲ್ಲಿದೆ. ಕೇವಲ ಒಂದು ಪೈಪ್ ಲಿಂಕ್ ಮಾಡಿದರೆ ಸಾಕು, ಯಾವುದೇ ಪಂಪ್ ಗಳ ಸಹಾಯವಿಲ್ಲದೇ ಇಡೀ ಬಡಾವಣೆ ತುಂಬೆಲ್ಲ ತುಂಗಭದ್ರಾ ನದಿ ನೀರು ಪೂರೈಕೆ ಮಾಡಲು ಸಾಧ್ಯವಿದೆ. ಆದರೆ ನಗರಸಭೆ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಈ ಸಣ್ಣ ಕೆಲಸ 12 ವರ್ಷವಾದರೂ ಪೂರ್ಣಗೊಂಡಿಲ್ಲ.

ಹಣಕಾಸಿನ ಹೊರೆ: ಈ ಬಡಾವಣೆಯಲ್ಲಿ ಸಧ್ಯ 200ಕ್ಕೂ ಅಧಿಕ ಕುಟುಂಬಗಳು ಮನೆ ನಿರ್ಮಿಸಿಕೊಂಡು ಹಲವಾರು ವರ್ಷಗಳಿಂದ ವಾಸಿಸುತ್ತಿದ್ದಾರೆ. ನಗರಸಭೆಗೆ ತೆರಿಗೆ ಹಣವನ್ನು ತಪ್ಪದೇ ಭರಿಸುತ್ತಿದ್ದಾರೆ. ಆದರೆ ಅಧಿಕಾರಿಗಳ ಉದ್ದೇಶಪೂರ್ವಕ ನಿರ್ಲಕ್ಷ್ಯದಿಂದಾಗಿ ಪ್ರತಿ ಬೇಸಿಗೆಯಲ್ಲಿ ಇಲ್ಲಿ ಟ್ಯಾಂಕರ್ ಮಾಫಿಯಾ ತಲೆ ಎತ್ತಿ ನಿಲ್ಲುತ್ತಿದ್ದು, ನೀರಿನ ಕೊರತೆಗಾಗಿ ಇಲ್ಲಿನ ನಿವಾಸಿಗಳು ಟ್ಯಾಂಕರಗಳಿಗೆ ಮೊರೆ ಹೋಗುತ್ತಿದ್ದಾರೆ. ದರದಲ್ಲಿ ತೀವ್ರ ಹೆಚ್ಚಳ ಮಾಡಿ ನಿವಾಸಿಗಳಿಂದ ಹಣ ಸುಲಿಗೆ ಮಾಡಲಾಗುತ್ತಿದ್ದು, ನಿವಾಸಿಗಳಿಗೆ ಹೊರೆಯಾಗಿದೆ.

ಕುಡಿಯಲು ಯೋಗ್ಯವಿಲ್ಲ: ನಗರಸಭೆಗೆ ಅಲೆದು ಅಲೆದು ಸುಸ್ತಾಗಿರುವ ನಿವಾಸಿಗಳು, ಅದರಲ್ಲಿಯೂ ಉಳ್ಳವರು ಕೊಳವೆಬಾವಿಗಳನ್ನು ಕೊರೆಸಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಇಲ್ಲಿನ ಕೊಳವೆಬಾವಿಯ ನೀರು ಕುಡಿಯಲು ಯೋಗ್ಯವಾಗಿಲ್ಲ. ಅತಿ ಗಡಸು ಮತ್ತು ಸವುಳಾಗಿದ್ದು, ಜಾನುವಾರುಗಳು ಸಹ ಕುಡಿಯುತ್ತಿಲ್ಲ. ತಿಂಗಳಿಗೆ ಸಾವಿರಾರು ರುಪಾಯಿ ವ್ಯಯಿಸಿ(ಸಿಹಿ ನೀರು) ಟ್ಯಾಂಕರ್ ನೀರು ಕೊಳ್ಳುವುದು ಇಲ್ಲಿನ ಮಧ್ಯಮ ವರ್ಗದ ಜನರಿಗೆ ಅನಿವಾರ್ಯವಾಗಿದೆ.

ಮಧ್ಯಪ್ರವೇಶಿಸಬೇಕಿದೆ: ಅಧಿಕಾರಿಗಳಿಗೆ ಜನರ ಸಮಸ್ಯೆಗೆ ಸ್ಪಂದಿಸುವ ಮನಸ್ಸಿಲ್ಲ. ಜನರ ತಾಳ್ಮೆ ಮೀರಿದರೆ ಬೀದಿಗಿಳಿದು ಹೋರಾಟ ಮಾಡುವುದು ನಿಶ್ಚಿತ. ​ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಬೇಕಿದೆ. ₹7.05 ಕೋಟಿ ಹಣದ ಲೆಕ್ಕ ಕೇಳಬೇಕಿದೆ. ನಮ್ಮ ಬಡಾವಣೆಯ ನೀರು ಪೂರೈಕೆಗಾಗಿ(ಸೂರ್ಯನಗರದ) ಹುಡ್ಕೋ ಸಂಸ್ಥೆಯ ನೀಡಿದ ಹಣ ಏನಾಗಿದೆ, ಯಾವ ಕಾರಣಕ್ಕಾಗಿ ನೀರು ಕೊಡಲು ಆಗುತ್ತಿಲ್ಲ ಎನ್ನುವುದು ತಕ್ಷಣವೇ ಪರಿಶೀಲನೆ ನಡೆಸಬೇಕು. ಇಲ್ಲವಾದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ನಗರರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಸೂರ್ಯನಗರದ ನಿವಾಸಿ ಸಿದ್ದಣ್ಣ ಪಲ್ಲೇದ ತಿಳಿಸಿದರು.

ಪರಿಶೀಲನೆ: ಯಾವ ಕಾರಣಕ್ಕಾಗಿ ವಿಳಂಬವಾಗಿದೆ. ತಾಂತ್ರಿಕ ಸಮಸ್ಯೆಗಳೇನಿವೆ ಎನ್ನುವುದರ ಬಗ್ಗೆ ಪರಿಶೀಲಿಸಿದ ನಂತರ ಉತ್ತರಿಸುತ್ತೇನೆ ಎಂದು ನಗರಸಭೆ ಎಇಇ ಲಕ್ಷ್ಮಣ ಎಂ.ಜೆ. ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಡಿನ ಅಭ್ಯುದಯಕ್ಕಾಗಿ ವಾಲ್ಮೀಕಿ ಸಮಾಜ ಹೋರಾಟ-ಸಚಿವ ಜಾರಕಿಹೊಳಿ
ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ: ಸಂಜೀವರೆಡ್ಡಿ