ಕನ್ನಡಪ್ರಭ ವಾರ್ತೆ, ತುಮಕೂರು20ರಂದು ತುಮಕೂರಿನಲ್ಲಿ ಆಯೋಜಿಸಿರುವ ರಾಜ್ಯ ಸರ್ಕಾರದ ಬೃಹತ್ ಸಮಾವೇಶ ಕೇವಲ ಸಾಧನೆಯ ಸಂಭ್ರಮವಲ್ಲ, ಕಳೆದ 3 ವರ್ಷಗಳಲ್ಲಿ ರಾಜ್ಯ ಸರ್ಕಾರ ಮಾಡಿರುವ ಆದ್ಯತಾ ಕಾರ್ಯಕ್ರಮಗಳ ಸಾರ್ಥಕ ಸೇವೆಯ ಸಮರ್ಪಣೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಮೇ 20 ರ ಮುಖ್ಯಮಂತ್ರಿ ಕಾರ್ಯಕ್ರಮದ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಕಳೆದ 3 ವರ್ಷಗಳ ಅವಧಿಯಲ್ಲಿ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಜನರಿಗಾಗಿ ಸಾಕಷ್ಟು ಆದ್ಯತಾ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದಾಗಿ ಜನರಿಗೆ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಅವರ ಭರವಸೆಯನ್ನು ಉಳಿಸಿಕೊಂಡಿರುವ ಬಗ್ಗೆ ಉತ್ತರದಾಯಿತ್ವವಾಗಿ ಸಾರ್ಥಕ ಸೇವೆಯ ಸಮರ್ಪಣೆಯನ್ನು ೨೦ರಂದು ತುಮಕೂರಿನಲ್ಲಿ ಮಾಡಲಾಗುತ್ತಿದೆ ಎಂದರು. ಸಾರ್ವಜನಿಕರು ಒಂದು ಇಲಾಖೆಗೆ ತಮ್ಮ ಕೆಲಸಗಳಿಗಾಗಿ ಪದೇ ಪದೇ ಯಾಕೆ ಅಲೆಯಬೇಕು? ಮತ್ತು ಅವರು ಅರ್ಜಿ ಕೊಟ್ಟರೂ ಆ ಕೆಲಸಗಳು ಆಗಿವೆಯೇ ಎಂಬ ಇತ್ಯಾದಿ ವಿಷಯಗಳ ಬಗ್ಗೆ ಸರ್ಕಾರ ಗಮನ ಹರಿಸಿತು. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಬಹುಕಾಲಗಳಿಂದ ಸಾರ್ವಜನಿಕರು ಕೆಲವು ವಿಷಯಗಳಿಗಾಗಿ ಕಚೇರಿಗಳಿಗೆ ಭೇಟಿ ನೀಡುವುದನ್ನು ತಪ್ಪಿಸುವ ಉದ್ದೇಶದಿಂದ ಸಾರ್ವಜನಿಕರ ಕೆಲಸಗಳನ್ನು ಅವರಿಂದ ಅರ್ಜಿ ಪಡೆಯದೆ ಅವರ ಕೆಲಸಗಳನ್ನು ಸರಳವಾಗಿ ಮಾಡಿಕೊಡುವ ದೃಷ್ಟಿಯಿಂದ ಕೆಲವು ಆದ್ಯತಾ ಯೋಜನೆಗಳನ್ನು ಹಾಕಿಕೊಂಡಿದೆ. ಈ ವಿಷಯದಲ್ಲಿ ಸರ್ಕಾರ ಯಶಸ್ವಿಯಾಗಿದೆ. ಈ ವಿಷಯವನ್ನು ಸಾರ್ವಜನಿಕರಿಗೆ, ಫಲಾನುಭವಿಗಳಿಗೆ ಸೇವೆಯನ್ನು ಸಮರ್ಪಿಸುವ ದೃಷ್ಟಿಯಿಂದ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ಕಾರ್ಯಕ್ರಮದ ಕುರಿತು ವಿವರಿಸಿದರು.ಸಾರ್ವಜನಿಕರ ಆದ್ಯತಾ ವಿಷಯಗಳ ಬಗ್ಗೆ ಉದಾಹರಿಸಿದ ಸಚಿವರು, ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿ ಅವರ ನ್ಯಾಯಾಲಯಗಳಲ್ಲಿ ಬಾಕಿಯಿದ್ದ ಹಲವಾರು ಪ್ರಕರಣವನ್ನು ಇತ್ಯರ್ಥಪಡಿಸಲಾಗಿದೆ. ಉದಾಹರಣೆಗೆ ಮೇ 2020ರಲ್ಲಿ ರಾಜ್ಯದಲ್ಲಿ ತಹಶೀಲ್ದಾರ್ ಅವರ ನ್ಯಾಯಾಲಯದ ವ್ಯಾಪ್ತಿಯಲ್ಲಿ 10,774 ಅವಧಿ ಮೀರಿದ ಪ್ರಕರಣಗಳು ಬಾಕಿ ಇದ್ದವು. ಏಪ್ರಿಲ್ 2026 ಕ್ಕೆ ಅದನ್ನು ಕೇವಲ 91 ಕ್ಕೆ ಇಳಿಸಲಾಗಿದೆ. ಅಂತೆಯೇ, ಉಪವಿಭಾಗಾಧಿಕಾರಿಗಳ ನ್ಯಾಯಾಲಯ ವ್ಯಾಪ್ತಿಯಲ್ಲಿ 73,624 ಅವಧಿ ಮೀರಿದ ಪ್ರಕರಣಗಳು ಬಾಕಿಯಿದ್ದವು. ಈವರೆಗೆ ಅವುಗಳನ್ನು ಇತ್ಯರ್ಥಗೊಳಿಸಿ ಸಧ್ಯ ರಾಜ್ಯದಲ್ಲಿ ಕೇವಲ 7,721 ಪ್ರಕರಣಗಳು ಮಾತ್ರ ಬಾಕಿ ಇವೆ. ಅಂದರೆ ತಹಸೀಲ್ದಾರ್ ನ್ಯಾಯಾಲಯದಲ್ಲಿ ಇದ್ದ ಬಾಕಿ ಪ್ರಕರಣಗಳಲ್ಲಿ ಶೇ99.9ರಷ್ಟು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಅವರು ತಿಳಿಸಿದರು. ಇದಕ್ಕೂ ಮುನ್ನ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆಯಲ್ಲಿ ಅವರು ಸಮಾವೇಶಕ್ಕೆ ಆಗಮಿಸುವ ಫಲಾನುಭವಿಗಳಿಗೆ ಯಾವುದೇ ರೀತಿಯ ಸಮಸ್ಯೆ ಆಗದಿರುವಂತೆ ನಿರ್ವಹಿಸುವ ಜವಾಬ್ದಾರಿ ಜಿಲ್ಲಾಡಳಿತದ ಮೇಲಿದೆ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಕಂದಾಯ ಇಲಾಖೆ ಅಥವಾ ಇತರೆ ಇಲಾಖೆಗಳ ಫಲಾನುಭವಿಗಳನ್ನು ಪ್ರತ್ಯೇಕ ಬಸ್ಸುಗಳಲ್ಲಿ ಕರೆ ತರುವ ಬದಲು ವಿವಿಧ ಇಲಾಖೆಗಳ ಅಧಿಕಾರಿಗಳ ಸಮನ್ವಯದೊಂದಿಗೆ ನಿಯೋಜಿತ ಮಾರ್ಗಾಧಿಕಾರಿಗಳು ವ್ಯವಸ್ಥಿತವಾಗಿ ಫಲಾನುಭವಿಗಳನ್ನು ಕರೆತರುವಂತೆ ಜವಾಬ್ದಾರಿ ನೀಡಬೇಕು. ಬಸ್ಸುಗಳು ಹೊರಡುವ ಜಾಗದಿಂದ ವಿಡಿಯೋ ಚಿತ್ರೀಕರಣ ಮಾಡಿ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಆ ಚಿತ್ರೀಕರಣವನ್ನು ಕಳಿಸಬೇಕು. ಇದರಿಂದ ಜವಾಬ್ದಾರಿಯ ನಿರ್ವಹಣೆ ಸುಲಭವಾಗಲಿದೆ ಎಂದು ಅವರು ತಿಳಿಸಿದರು. ಸಭೆಯಲ್ಲಿ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಹೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ. ಅಶ್ವಿಜ, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.