ಸಾಂಸ್ಕೃತಿಕ ಮನಸ್ಸು ಇಲ್ಲದಿರುವುದೇ ಯುದ್ಧಕ್ಕೆ ಕಾರಣ

KannadaprabhaNewsNetwork |  
Published : May 13, 2026, 12:15 AM IST
9999 | Kannada Prabha

ಸಾರಾಂಶ

ಮಧ್ಯ ಪ್ರಾಚ್ಯ ಬಿಕ್ಕಟ್ಟಿಗೆ ಅಮೇರಿಕಾ, ಇಸ್ರೇಲ್ ಮತ್ತಿತರರ ರಾಷ್ಟ್ರಗಳಲ್ಲಿ ಇರುವ ತಾಯಿ ಹೃದಯದ ಮನಸ್ಸುಗಳು ಇಲ್ಲದಿರುವುದೇ ಕಾರಣ ಎಂದು ಕನ್ನಡಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಮನಸ್ಸುಗಳು ಅಧಿಕಾರದಲ್ಲಿ ಇದ್ದರೆ, ಯುದ್ಧದಂತಹ ಮನುಷ್ಯ ವಿರೋಧಿ ಕೃತ್ಯಗಳಿಗೆ ಅವಕಾಶ ಇರುವುದಿಲ್ಲ. ಇಂದಿನ ಮದ್ಯ ಪ್ರಾಚ್ಯ ಬಿಕ್ಕಟ್ಟಿಗೆ ಅಮೇರಿಕಾ, ಇಸ್ರೇಲ್ ಮತ್ತಿತರರ ರಾಷ್ಟ್ರಗಳಲ್ಲಿ ಇರುವ ತಾಯಿ ಹೃದಯದ ಮನಸ್ಸುಗಳು ಇಲ್ಲದಿರುವುದೇ ಕಾರಣ ಎಂದು ಕನ್ನಡಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.ನಗರದ ಶ್ರೀಸಿದ್ದಗಂಗಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನ ಡಾ.ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್, ಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯಕಾಲೇಜಿನ ಕನ್ನಡ ವಿಭಾಗ ಹಾಗೂ ಸಿದ್ದಗಂಗಾ ಮಹಿಳಾ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ನವರ ಬದುಕು-ಬರಹ ಮತ್ತು ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಯಾವ ವಿಭಾಗವೇ ಆಗಲಿ ತನ್ನಲ್ಲಿ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ದೃಷ್ಟಿಕೋನ ಅಳವಡಿಸಿಕೊಳ್ಳದಿದ್ದರೆ, ಆ ವಿಭಾಗ ಹಳ್ಳ ಹಿಡಿದಂತೆಯೇ ಸರಿ. ಇತ್ತೀಚಿನ ಟ್ರಂಪ್, ನ್ಯಾತನಾನೋ ಅವರ ಆಡಳಿತವೇ ಇದಕ್ಕೆ ಸಾಕ್ಷಿ.165 ಜನ ಮುಗ್ಧ ಮಕ್ಕಳನ್ನು ಕೊಲೆ ಮಾಡಿದಾಗ, ಕನಿಷ್ಠ ಪಾಪ ಪ್ರಜ್ಞೆ ಕಾಡದಿರುವುದು ದುರಂತವೇ ಸರಿ ಎಂದರು.ಸಾಹಿತಿಯಾಗಿ,ವಿಮರ್ಶಕರಾಗಿ,ಆಡಳಿತಾಧಿಕಾರಿಯಾಗಿ,ಉಪನ್ಯಾಸಕರಾಗಿ ಬಹುಮುಖ್ಯ ವ್ಯಕ್ತಿತ್ವದ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ತಾಯಿಯ ಅಂತಃಕರಣ ಹೊಂದಿದ್ದವರು. ಕ್ರಿಯೆ ಇಲ್ಲದ ಅರಿವು ಪ್ರಯೋಜನಕ್ಕೆ ಬಾರದು. ಆದರೆ ನಿರಂತರ ಅಧ್ಯಯನ ಶೀಲರಾಗಿದ್ದ ಅವರ ಭಾಷಾ ಪಾಂಡಿತ್ಯ, ವಿದ್ವತ್, ಅಧ್ಯಾಪನ ಕ್ರಮ ಎಲ್ಲವೂ ಇಂದಿನವರಿಗೆ ಮಾದರಿ.ಈ ಮಾದರಿ ವ್ಯಕ್ತಿತ್ವವನ್ನು ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಸಾಹಿತ್ಯ ಪರಿಷತ್ತಿ ವತಿಯಿಂದ ಆಯೋಜಿಸಲಾಗಿದೆ ಎಂದು ತಿಳಿಸಿದರು.ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಅವರ ಕಾವ್ಯಾವಲೋಕನ ಕುರಿತು ಮಾತನಾಡಿದ ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ, ಕಾವ್ಯಕ್ಕೆಎಲ್ಲಾ ಸಮಸ್ಯೆಗಳಿಗೆ ಮದ್ದಾಗಿ ಕೆಲಸ ಮಾಡುವ ಶಕ್ತಿ ಇದೆ. ಇಡೀ ಜಗತ್ತೇ ಪ್ರಕ್ಷುಬ್ದ ವಾತಾವರಣದಲ್ಲಿ ಇರುವ ಸಂದರ್ಭದಲ್ಲಿ ಕಾವ್ಯದ ಅಗತ್ಯತೆ ಇದೆ. ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಅವರದ್ದು ಬಹುಮುಖ ವ್ಯಕ್ತಿತ್ವ. ಕಾವ್ಯ, ಗದ್ಯ, ವಚನ, ಆಡಳಿತಾಧಿಕಾರಿ ಹೀಗೆ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದವರು. ನೈತಿಕತೆ ಮತ್ತು ಪ್ರಾಮಾಣಿಕತೆಯಲ್ಲಿ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಪ್ರಶ್ನಾತೀತರು ಎಂದು ನುಡಿದರು.

ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ನವರ ಬದುಕು ಮತ್ತು ಆಡಳಿತಾಗಾರರಾಗಿ ಎಂಬ ವಿಷಯ ಕುರಿತು ಮಾತನಾಡಿದ ಸಾಹಿತಿ ಪ್ರೊ. ಲಕ್ಷ್ಮಿನಾರಾಯಣ, ಶಾಸ್ತ್ರ,ಕಾವ್ಯ,ವಿಮರ್ಶೆ,ವಚನಗಳ ಅವಲೋಕನ ಹಾಗೂ ಆಡಳಿತಗಾರರಾಗಿ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಅಪರೂಪದ ವ್ಯಕ್ತಿತ್ವ ಹೊಂದಿದ್ದವರು. ಶಿಕ್ಷಣ ಇಲಾಖೆಯ ಸಮಸ್ಯೆಗಳಿಗೆ ಪರಿಹಾರ ಒದಗಿಸಿದವರು. ಅವರ ಕಾಲದಲ್ಲಿ ಹಿರಿತನಕ್ಕೆ ಹೆಚ್ಚಿನ ಅದ್ಯತೆ ನೀಡಿ, ಕಾಲೇಜು ಶಿಕ್ಷಣ ಆಡಳಿತ ಸುಧಾರಿಸಲು ಕಾರಣರಾದರು ಎಂದರು.ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಅವರ ವಚನ ಸಾಹಿತ್ಯಕುರಿತು ಮಾತನಾಡಿದ ಪ್ರಾಧ್ಯಾಪಕರಾದ ಪ್ರೊ.ನಾಗಭೂಷಣ್.ಸಿ, ಸಂಶೋಧಕರಾಗಿ ನಡುಗನ್ನಡದ ಸಾಹಿತ್ಯಕ್ಕೆ ಹೆಚ್ಚಿನ ಬೆಳಕು ಚಲ್ಲಿದವರು.ವಚನ ಸಾಹಿತ್ಯದಲ್ಲಿ, ಅದರಲ್ಲಿಯೂ ಶೂನ್ಯ ಸಂಪಾದನೆಯಕುರಿತು ಹಲವಾರು ಸಂಶೋಧನಾ ಪ್ರಬಂಧಗಳನ್ನು ಮಂಡಿಸುವ ಮೂಲಕ ಭೌದ್ಧಿಕ ಪರಂಪರೆಯನ್ನು ಹುಟ್ಟು ಹಾಕಿದರುಎಂದರು.ಕಾರ್ಯಕ್ರಮದಲ್ಲಿ ಕಸಾಪ ತುಮಕೂರಿನಲ್ಲಿ ಸೊಂದಲಗೆರೆ ಲಕ್ಷ್ಮಿಪತಿ ಅವರುತಮ್ಮ ಪೋಷಕರ ಹೆಸರಿನಲ್ಲಿ ಸ್ಥಾಪಿಸಿರುವ ಮಲ್ಲಮ್ಮ ಶ್ರೀ ಪಟೇಲ್ ನಾರಸೇಗೌಡದತ್ತಿ ಪ್ರಶಸ್ತಿಯನ್ನು ಸಾಹಿತಿಗಳಾದ ಯಲಚಗೆರೆಉಮೇಶ್, ಶ್ರೀಮತಿ ರೇಖಾ ಹಿಮಾನಂದ್ ಮತ್ತು ಶ್ರೀಮತಿ ಕೆ.ಬಿ.ನೇತ್ರಾವತಿ ಅವರುಗಳಿಗೆ ನೀಡಿಗೌರವಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ವಹಿಸಿದ್ದರು. ವೇದಿಕೆಯಲ್ಲಿ ಸಿದ್ದಗಂಗಾ ಪದವಿ ಕಾಲೇಜುಗಳ ಸಂಯೋಜಕ ಡಾ.ಡಿ.ಎನ್.ಯೋಗೀಶ್ವರಪ್ಪ, ಡಾ.ಟಿ.ಬಿ.ನಿಜಲಿಂಗಪ್ಪ, ಎಚ್.ಎಂ.ದಕ್ಷಿಣಮೂರ್ತಿ, ಡಾ.ಕಂಟಲಗೆರೆ ಸಣ್ಣಹೊನ್ನಯ್ಯ, ಎಂ.ಎಚ್.ನಾಗರಾಜು, ಡಾ.ಪದ್ಮಜ.ವೈ.ಎಂ, ಡಾ.ಸಿ.ವಿ.ಶಕುಂತಲ ಹಾಗೂ ಅಧ್ಯಾಪಕರುಗಳು ಉಪಸ್ಥಿತರಿದ್ದರು.

------------------- -----------------------

ಕೋಟ್‌...

ಕಸಾಪ ನಾಲ್ವಡಿ ಕೃಷ್ಣ ರಾಜಒಡೆಯರ್‌ ಅವರ ಪರಿಕಲ್ಪನೆಗೆ ವಿರುದ್ದವಾಗಿ ನಡೆದುಕೊಳ್ಳುತ್ತಿದೆ. ಚುನಾವಣೆ ಎಂಬ ಭೂತ ಇನ್ನಿಲ್ಲದಂತೆ ಜಾತಿ, ಧರ್ಮ, ಭ್ರಷ್ಟಾಚಾರ ಎಲ್ಲವನ್ನು ಸಹ ಸಾಹಿತ್ಯ ಪರಿಷತ್ತಿಗೆ ತಂದಿದೆ.ಇದರ ಪರಿಣಾಮ ಸಾಹಿತಿಗಳಲ್ಲದವರು ಅಧಿಕಾರ ಹಿಡಿದು, ಪರಿಷತ್ತನ್ನು ಅಧೋಗತಿಯತ್ತ ತೆಗೆದುಕೊಂಡು ಹೋಗುತ್ತಿದ್ದಾರೆ. ಹಾಗಾಗಿ ಸಾಹಿತ್ಯ ಪರಿಷತ್ತಿಗೆ ಚುನಾವಣೆಯನ್ನು ತಪ್ಪಿಸಿ, ಪರ್ಯಾಯ ದಾರಿಯನ್ನು ಕಂಡುಕೊಳ್ಳುವ ಅಗತ್ಯವಿದೆ. - ಪ್ರೊ.ಎಸ್.ಜಿ.ಸಿದ್ದರಾಮಯ್ಯ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ

---------------------------------------------------------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಧನೆಯಷ್ಟೇ ಅಲ್ಲ, ಸಾರ್ಥಕ ಸೇವೆಯ ಸಮರ್ಪಣೆ
ನಿವೇಶನ ರಹಿತ ಫಲಾನುಭವಿಗಳಗ್ರಾಮ ಸಭೆಗಳಲ್ಲೇ ಆಯ್ಕೆ ಮಾಡಿ