ಹೆಚ್ಚಾದ ನೀರಲ್ಲ, ನಮ್ಮ ಪಾಲಿನ ನೀರು ಕೊಡಬೇಕು: ಡಾ. ಜಾಧವ್

KannadaprabhaNewsNetwork |  
Published : Mar 20, 2024, 01:17 AM IST
ಅಫಜಲ್ಪುರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಶಿವಕುಮಾರ ನಾಟಿಕಾರ ಅವರು ನಡೆಸುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಸಂಸದ ಡಾ. ಉಮೇಶ ಜಾಧವ ಭೇಟಿ ನೀಡಿ ನಾಟಿಕಾರ ಆರೋಗ್ಯ ಪರಿಶೀಲಿಸಿದರು.  | Kannada Prabha

ಸಾರಾಂಶ

ಮಳೆಗಾಲದಲ್ಲಿ ಪ್ರವಾಹ ಬಂದಾಗ ನೀರು ಬಿಡುವುದು ಮಾತ್ರವಲ್ಲ ನಮ್ಮ ಪಾಲಿನ ನಿರು ಕೂಡ ಮಹಾರಾಷ್ಟ್ರದವರು ಕೊಡಬೇಕೆಂದು ಸಂಸದ ಡಾ. ಉಮೇಶ ಜಾಧವ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಚವಡಾಪುರ

ವಿಜಯಪುರ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ ಜೀವನದಿಯಾಗಿರುವ ಭೀಮಾ ನದಿ ಈ ಬಾರಿ ಸಂಪೂರ್ಣವಾಗಿ ಬತ್ತಿ ಹೋಗಿ ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ಮಳೆಗಾಲದಲ್ಲಿ ಪ್ರವಾಹ ಬಂದಾಗ ನೀರು ಬಿಡುವುದು ಮಾತ್ರವಲ್ಲ ನಮ್ಮ ಪಾಲಿನ ನಿರು ಕೂಡ ಮಹಾರಾಷ್ಟ್ರದವರು ಕೊಡಬೇಕೆಂದು ಸಂಸದ ಡಾ. ಉಮೇಶ ಜಾಧವ ಆಗ್ರಹಿಸಿದರು.

ಅಫಜಲ್ಪುರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ನಾಟಿಕಾರ ಹಮ್ಮಿಕೊಂಡಿರುವ ಭೀಮಾ ನದಿಗೆ ನೀರು ಹರಿಸಿ ರೈತರ ಜೀವ ಉಳಿಸಿ ಎನ್ನುವ ಘೋಷವಾಕ್ಯದೊಂದಿಗೆ ಹಮ್ಮಿಕೊಂಡಿರುವ ಅಮರಣಾಂತ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಶಿವಕುಮಾರ ನಾಟಿಕಾರ ಅವರ ಆರೋಗ್ಯ ತಪಾಸಣೆ ಮಾಡಿ ಮಾತನಾಡಿದ ಅವರು ಶಿವಕುಮಾರ ನಾಟಿಕಾರ ಅವರು ಯಾವಾಗಲೂ ಜನಪರ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದಾರೆ. ಇಂತಹ ಹೋರಾಟಗಾರರ ಅವಶ್ಯಕತೆ ನಮಗಿದೆ. ನಿಮ್ಮ ಹೋರಾಟದಲ್ಲಿ ನಾವು ಭಾಗಿಯಾಗುತ್ತೇವೆ. ಕೂಡಲೇ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಜಲಸಂಪನ್ಮೂಲ ಸಚಿವರಾದ ಡಿ.ಕೆ ಶಿವಕುಮಾರ ಅವರೊಂದಿಗೆ ಮಾತನಾಡಿಸಿ ಮಹಾರಾಷ್ಟ್ರ ಸರ್ಕಾರದೊಂದಿಗೆ ಚರ್ಚಿಸಿ ಭೀಮಾ ನದಿಗೆ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗುತ್ತದೆ ಎಂದ ಅವರು ನಾಟಿಕಾರ ಅವರ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಹೀಗಾಗಿ ಧರಣಿ ಸ್ಥಳದಲ್ಲಿ ವೈದ್ಯರು ಇದ್ದು ಆಗಾಗ ಆರೋಗ್ಯ ತಪಾಸಣೆ ಮಾಡಿ ಎಂದು ಸಲಹೆ ನೀಡಿದರು.

ಮುಖಂಡ ಲಚ್ಚಪ್ಪ ಜಮಾದಾರ ಮಾತನಾಡಿ ಎಲ್ಲಾ ಸರ್ಕಾರಗಳಿಂದಲೂ ನಮ್ಮ ಭಾಗಕ್ಕೆ ಅನ್ಯಾಯವಾಗುತ್ತಿದೆ. ಉಜನಿ ಜಲಾಶಯದಿಂದ ನೀರು ಭೀಮಾ ನದಿಗೆ ಬೀಡಬೇಕು ಎನ್ನುವ ಕಾನೂನು ಇದ್ದರೂ ಕೂಡ ನೀರು ಬಿಡುತ್ತಿಲ್ಲ. ಈ ಭಾಗದ ಜನಪ್ರತಿನಿಧಿಗಳು ನಮ್ಮ ಪಾಲಿನ ನೀರು ಕೇಳಲು ಧ್ವನಿ ಎತ್ತುತ್ತಿಲ್ಲ. ಇದು ನಮ್ಮ ದುರಂತ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಪಪ್ಪು ಪಟೇಲ, ಅವ್ವಣ್ಣ ಮ್ಯಾಕೇರಿ, ಶರಣು ಪದಕಿ, ರಮೇಶ ಹೂಗಾರ, ಶಾಮರಾವ ಪಾಟೀಲ ಸೇರಿದಂತೆ ಅನೇಕರು ಇದ್ದರು.

ಸಿಂದಗಿ ಮಾಜಿ ಶಾಸಕ ಭೂಸನೂರ ಭೇಟಿ: ನಾಟಿಕಾರ ಧರಣಿ ಸ್ಥಳಕ್ಕೆ ಪಕ್ಕದ ಸಿಂದಗಿ ತಾಲೂಕಿನ ಮಾಜಿ ಶಾಸಕರಾದ ರಮೇಶ ಭೂಸನೂರ ಕೂಡ ಭೇಟಿ ನೀಡಿ ಬೆಂಬಲ ವ್ಯಕ್ತ ಪಡಿಸಿ ಮಾತನಾಡಿ ನಾವು ಹೋರಾಟಕ್ಕೆ ಬೆಂಬಲಿಸುತ್ತೇವೆ. ನೀರು ಎಲ್ಲರಿಗೂ ಬೇಕಾದ ಅತ್ಯವಶ್ಯಕ ಮೂಲಭೂತ ಅಂಶವಾಗಿದೆ. ಭೀಮಾ ನದಿಗೆ ನ್ಯಾಯಯುತ ನೀರು ಹರಿಸುವ ಕುರಿತು ಮಹಾರಾಷ್ಟ್ರದ ಸರ್ಕಾರದೊಂದಿಗೆ ರಾಜ್ಯ ಸರ್ಕಾರ ಒತ್ತಡ ಹೇರಲಿ. ನಾವು ಸರ್ಕಾರದ ನಿಯೋಗದೊಂದಿಗೆ ಬರುತ್ತೇವೆ ಎಂದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ