ದಾವಣಗೆರೆ ಸ್ಮಾರ್ಟ್ ಸಿಟಿಯಡಿ ಅಡ್ವಾನ್ಸಡ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಈಗಾಗಲೇ ಆಧುನಿಕ ತಂತ್ರಜ್ಞಾನ ಬಳಸಿಕೊ ಳ್ಳಲಾಗುತ್ತಿದೆ. ಪ್ರತಿಯೊಬ್ಬರೂ ಸಂಚಾರ ನಿಯಮ ಪಾಲನೆ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಹೇಳಿದರು.
ದಾವಣಗೆರೆ: ದಾವಣಗೆರೆ ಸ್ಮಾರ್ಟ್ ಸಿಟಿಯಡಿ ಅಡ್ವಾನ್ಸಡ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಈಗಾಗಲೇ ಆಧುನಿಕ ತಂತ್ರಜ್ಞಾನ ಬಳಸಿಕೊ ಳ್ಳಲಾಗುತ್ತಿದೆ. ಪ್ರತಿಯೊಬ್ಬರೂ ಸಂಚಾರ ನಿಯಮ ಪಾಲನೆ ಮಾಡಬೇಕು. ಪೊಲೀಸ್ ಅಧಿಕಾರಿ, ಸಿಬ್ಬಂದಿ ಸಹ ಸಂಚಾರ ನಿಯಮಗಳ ಪಾಲನೆ ಬಗ್ಗೆ ಜಾಗೃತಿ ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಹೇಳಿದರು.
ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಬಳಕೆ, ಅತ್ಯಾಧುನಿಕ ಕ್ಯಾಮೆರಾ ಬಳಸಿ ಸಿಟಿ ಸರ್ವೇಲೆನ್ಸ್‌ನಡಿ ನಗರದ 111 ಕಡೆ 215 ಕಡೆ ಕ್ಯಾಮರಾ ಅಳವಡಿಕೆ ಸೇರಿದಂತೆ ರಸ್ತೆ ಸುರಕ್ಷಾ ಸಪ್ತಾಹ-2023ರ ಅಂಗವಾಗಿ ನಗರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅಧ್ಯಕ್ಷತೆಯಲ್ಲಿ ಅಡ್ವಾನ್ಸಡ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಹಾಗೂ ರಸ್ತೆ ಸುರಕ್ಷತೆ ಕಾರ್ಯನಿರ್ವಹಣೆ ಬಗ್ಗೆ ಅರಿವು ಕಾರ್ಯಕ್ರಮ ನಡೆಯಿತು.
ವಿಶೇಷವಾಗಿ ಕೃತಕ ಬುದ್ಧಿಮತ್ತೆ ಬಳಕೆ, ಅತ್ಯಾಧುನಿಕ ಕ್ಯಾಮೆರಾ ಅಳವಡಿಸಲಾಗಿದೆ. ಜಿಲ್ಲಾ ಕೇಂದ್ರದ 23 ವೃತ್ತದಲ್ಲಿ ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಂ ಅಳವಡಿಸಿದೆ. ವಾಹನ ದಟ್ಟಣೆಗೆ ತಕ್ಕಂತೆ ಸಿಗ್ನಲ್‌ನಲ್ಲಿ ಸಮಯ ನಿಗದಿಪಡಿಸಿದೆ. ಪರಿಣಾಮ ಜನರ ಅಮೂಲ್ಯ ಸಮಯ, ಇಂಧನ ಉಳಿತಾಯವಾಗುತ್ತಿದೆ.
ಹಳೆ ಪಿಬಿ ರಸ್ತೆಯ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಈರುಳ್ಳಿ ಮಾರುಕಟ್ಟೆವರೆಗೆ 7 ಪ್ರಮುಖ ವೃತ್ತ ದಾಟಿ ಹೋಗಲು ಮುಂಚೆ 14.46 ನಿಮಿಷ ಬೇಕಿತ್ತು. ಈಗ ಕೇವಲ 8.6 ನಿಮಿಷದಲ್ಲೇ ಅಂತರ ಕ್ರಮಿಸಬಹುದು ಎಂದು ಅಧಿಕಾರಿಗಳು ವಿವರಿಸಿದರು.
ಸಿಟಿ ಸರ್ವೇಲೆನ್ಸ್‌ನಡಿ ನಗರದ 111 ಕಡೆ 215 ಕ್ಯಾಮರಾ ಅಳವಡಿಸಿದೆ. ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ ಮೆಂಟ್ ಸಿಸ್ಟಂನಡಿ 11 ಕಡೆ 45 ಕ್ಯಾಮರಾ ಅಳವಡಿಸಿದೆ. ಈ ವ್ಯವಸ್ಥೆಯಿಂದ ಅನೇಕ ಕಡೆ ಪೊಲೀಸ್ ಪ್ರಕರಣ ಇತ್ಯರ್ಥಪಡಿಸಲು ಅನುಕೂಲವಾಗಿದೆ.
ಮಾರ್ಚ್‌ನಿಂದ ಇಲ್ಲಿವರೆಗೆ 140 ಪ್ರಕರಣಗಳ ಪೈಕಿ ಶೇ.87ರಂತೆ 123 ಪ್ರಕರಣ ಬಗೆಹರಿದಿವೆ. ಸ್ಮಾರ್ಟ್ ಸಿಟಿ ಐಸಿಟಿ ಪ್ರಾಜೆಕ್ಟ್‌ನಿಂದ ಅಪರಾಧ ಪತ್ತೆಗೂ ತುಂಬಾ ಸಹಕಾರಿಯಾಗಿದೆ. ಒಟ್ಟು 123 ಪ್ರಕರಣಗಳ ಪೈಕಿ 250 ಗ್ರಾಂ ಚಿನ್ನ, 48 ಕೆ.ಜಿ. ಬೆಳ್ಳಿ, 72 ಬೈಕ್ ಜಪ್ತು ಮಾಡಲಾಗಿದೆ.
1 ಕೊಲೆ ಪ್ರಕರಣ, 22 ಅಪಘಾತ ಪ್ರಕರಣ, ನಕಲಿ ನಂಬರ್ ಪ್ಲೇಟ್‌ನ 7 ಪ್ರಕರಣ ಪತ್ತೆಗೂ ಈ ವ್ಯವಸ್ಥೆ ಆಸರೆಯಾಗಿದೆ ಎಂದು ಅವರು ಮಾಹಿತಿ ನೀಡಿದರು. ನಗರ, ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ, ಟ್ರಾಫಿಕ್ ಸಮಸ್ಯೆ ಬಗ್ಗೆ ಸಾರ್ವಜನಿಕರು ಇಲಾಖೆಗೆ ನೇರವಾಗಿ ದೂರು ಸಲ್ಲಿಸಲು ಮೊ-94808-03208 ವ್ಯವಸ್ಥೆ ಮಾಡಲಾಗಿದೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಿ.ಮಂಜುನಾಥ, ಡಿವೈಎಸ್ಪಿ ಮಲ್ಲೇಶ ದೊಡ್ಮನಿ, ಪ್ರೊಬೇಷನರಿ ಡಿವೈಎಸ್ಪಿ ಯಶವಂತ್, ನಿರೀಕ್ಷಕ ನಲವಾಗಲು ಮಂಜುನಾಥ, ಮಲ್ಲಮ್ಮ ಚೌಬೆ, ಇಮ್ರಾನ್ ಬೇಗ್, ಪಿಎಸ್ಐ ಶೈಲಜಾ, ಪೊಲೀಸ್ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿ, ಸಿಬ್ಬಂದಿ ಇದ್ದರು.