ಜ್ಞಾನಕ್ಕೆ ಪರಿಪೂರ್ಣವಾದುದು ಯಾವುದೂ ಇಲ್ಲ: ಡಾ.ಜಯದೇವ

KannadaprabhaNewsNetwork | Published : Dec 30, 2023 1:15 AM

ಸಾರಾಂಶ

ಜ್ಞಾನ ಬೆಳಕಿನ ಸಂಕೇತ. ಮಕ್ಕಳಿಗೆ ಜ್ಞಾನದಡಿಯಲ್ಲಿ ಶಿಕ್ಷಣ ನೀಡಬೇಕು. ಜ್ಞಾನಕ್ಕೆ ಪರಿಪೂರ್ಣವಾದುದು ಜಗತ್ತಿನಲ್ಲಿ ಯಾವುದೂ ಇಲ್ಲ

ಶೃಂಗೇರಿ: ಜ್ಞಾನ ಬೆಳಕಿನ ಸಂಕೇತ. ಮಕ್ಕಳಿಗೆ ಜ್ಞಾನದಡಿಯಲ್ಲಿ ಶಿಕ್ಷಣ ನೀಡಬೇಕು. ಜ್ಞಾನಕ್ಕೆ ಪರಿಪೂರ್ಣವಾದುದು ಜಗತ್ತಿನಲ್ಲಿ ಯಾವುದೂ ಇಲ್ಲ ಎಂದು ಚಿಕ್ಕಮಗಳೂರು ಎಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಜಯದೇವ ಹೇಳಿದರು.

ಪಟ್ಟಣದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆದ 3 ದಿನಗಳ ಸುವರ್ಣ ಮಹೋತ್ಸವ, ಚುಂಚೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿ ಮಾತನಾಡಿದರು.

ವಿದ್ಯೆಯ ಜೊತೆ ವಿನಯ, ವಿವೇಕ, ಶಿಸ್ತು, ಪ್ರಾಮಾಣಿಕತೆ ಇರಬೇಕು. ಮನುಷ್ಯನು ಒಳ್ಳೆಯ ದಾರಿಯಲ್ಲಿ ನಡೆಯಲು ಶಿಕ್ಷಣ ಕಾರಣವಾಗುತ್ತದೆ. ಶಿಕ್ಷಣ ಕೇವಲ ಅಂಕಗಳಿಕೆ, ಫಲಿತಾಂಶಕ್ಕೆ ಸೀಮಿತವಾಗಿರಬಾರದು. ಭವಿಷ್ಯ ನಿರ್ಮಾಣದ ತಳಹದಿಯಾಗಿರಬೇಕು, ಸಮಾಜದಲ್ಲಿ ಉನ್ನತಿ ಸಾಧಿಸಲು ಶಿಕ್ಷಣವೇ ಬಹುಮುಖ್ಯ ಸಾಧನವಾಗಿದೆ.

ಸಮಾಜದಲ್ಲಿ ತಾಂಡವಾಡುತ್ತಿದ್ದ ನಿರುದ್ಯೋಗ, ಬಡತನ, ಅಸ್ಪಷ್ಯತೆ, ಮೂಢನಂಬಿಕೆಗಳನ್ನು ಹೋಗಲಾಡಿಸಲು ಶಿಕ್ಷಣವೇ ಏಕೈಕ ಮಾರ್ಗವೆಂದು ಮನಗಂಡ ಭಾಲಗಂಗಾಧರನಾಥ ಸ್ವಾಮಿಗಳು ಶೈಕ್ಷಣಿಕ, ವೈಜ್ಞಾನಿಕ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟುಮಾಡಿದರು. ಪ್ರತಿಯಬ್ಬರಿಗೂ ಉನ್ನತ ಶಿಕ್ಷಣ ಸಿಗುವಂತಾಗಲು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದರು. ಜಾತಿ, ಮತ, ಬೇಧಗಳಿಲ್ಲದೇ ಎಲ್ಲರಿಗೂ ಶಿಕ್ಷಣ ಸಿಗುವಂತೆ ಮಾಡಿದರು.

ಆದಿಚುಂಚನಗಿರಿ ಮಠ ಹೆಸರಿಗಷ್ಟೇ ಒಕ್ಕಲಿಗರ ಸಂಸ್ಥಾನದ ಮಠವಾಗಿದ್ದರೂ ಇದು ಎಲ್ಲಾ ಜಾತಿ, ಮತ, ಫಂಥಗಳ ವ್ಯಕ್ತಿಗಳ ಕೇಂದ್ರವಾಗಿದೆ. ಧಾರ್ಮಿಕ, ಶೈಕ್ಷಣಿಕ, ಕಲೆ, ಸಾಹಿತ್ಯ ಕ್ಷೇತ್ರಗಳಿಗೆ ಮಹತ್ತರ ಕೊಡುಗೆಗಳನ್ನು ನೀಡುತ್ತಿದೆ. ಸನಾತನ ಧರ್ಮದ ರಕ್ಷಣೆಗೂ ಮಹತ್ವ ನೀಡುತ್ತಿದೆ. 3 ದಿನಗಳ ಕಾಲ ನಡೆದ ಕಾರ್ಯಕ್ರಮ ಅದ್ಭುತವಾಗಿದೆ ಎಂದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮಂಗಳೂರು ಶಾಖೆಯ ಡಾ.ಧರ್ಮಪಾಲನಾಥ ಸ್ವಾಮೀಜಿ ಮಾತನಾಡಿ, ಬಾಲಗಂಗಾಧರನಾಥ ಸ್ವಾಮೀಜಿ ಜನರ ಮನೆ, ಮನ ಪರಿವರ್ತಿಸುವ ಕೈಂಕಾರ್ಯ ಮಾಡಿದರು. ತಾರತಮ್ಯವಿಲ್ಲದೇ ಎಲ್ಲವನ್ನು ಸಮಾಜಕ್ಕೆ ಧಾರೆಯೆರೆದರು. ಧಾರ್ಮಿಕ ಸೇವೆಯ ಜೊತೆ ಸಾಮಾಜಿಕ ಸೇವೆಯ ಮೂಲಕ ಜನರ ಹೃದಯದಲ್ಲಿ ನೆಲೆಸುವಂತಹ ಕೆಲಸ ಮಾಡಿದರು. ಶಿಕ್ಷಣ, ಧಾರ್ಮಿಕ, ಸಾಮಾಜಿಕ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ಸಲ್ಲಿಸಿದ್ದರು ಎಂದರು.

ಶೃಂಗೇರಿ ಆದಿಚುಂಚನಗಿರಿ ಶಾಖಾ ಮಠದ ಗುಣನಾಥ ಸ್ವಾಮೀಜಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಪೂಜ್ಯ ಡಾ.ಎಂ.ಬೈರೆಗೌಡ, ತಮ್ಮಣ್ಣ ಗೌಡ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಡಾ.ನೆಲ್ಲಿಕಟ್ಟೆ ಸಿದ್ದೇಶ್‌ ವಿರಚಿತ ವಿಸ್ಮಯ, ದೇವರು ಯಾರು, ದುಡುಕಿದ ಮನಗಳು, ಮರದೊಡಲು ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ನಾಟಕ, ಯಕ್ಷಗಾನ ಪ್ರದರ್ಶನ ನಡೆಯಿತು. ಚುಂಚಾದ್ರಿ ತಂಡದಿಂದ ಸಾಂಸ್ಕ್ರತಿ ವೈಭವ ನಡೆಯಿತು.

Share this article