ಪ್ರಶ್ನಿಸದೆ ಏನನ್ನೂ ಒಪ್ಪಿಕೊಳ್ಳಬಾರದು

KannadaprabhaNewsNetwork | Published : Mar 3, 2025 1:46 AM

ಸಾರಾಂಶ

ಪೋಷಕರೆ ಆಗಲಿ, ಗುರುಗಳೇ ಆಗಲಿ ಸ್ನೇಹಿತರೇ ಆಗಲಿ ಯಾರು ಏನೇ ಹೇಳಿದರೂ ಪ್ರಶ್ನೆ ಮಾಡದೇ ಏನನ್ನೂ ಒಪ್ಪಿಕೊಳ್ಳಬೇಡಿ. ಪ್ರಶ್ನಿಸದೆ ಒಪ್ಪಿಕೊಂಡರೆ ನೀವು ಕಲಿತ ವಿದ್ಯೆಗೆ ಅರ್ಥವೇ ಇರುವುದಿಲ್ಲ. ಹಾಗಾಗಿ ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎನ್ನುವಂತೆ ಪ್ರತಿಯೊಂದನ್ನೂ ಓರೆಗೆ ಹಚ್ಚುವ ಕೆಲಸವನ್ನು ನೀವು ಮಾಡಬೇಕು ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಚಿನ್ನೇನಹಳ್ಳಿ ಸ್ವಾಮಿ ಹೇಳಿದರು. ಇಂದು ವಿದ್ಯಾವಂತರೇ ಮೌಢ್ಯದ ಕೂಪಕ್ಕೆ ಬೀಳುತ್ತಿರುವುದು ದುರಂತ ಮತ್ತು ವಿಪರ್ಯಾಸದ ಸಂಗತಿಯಾಗಿದೆ. ದೇವರಲ್ಲಿ ನಂಬಿಕೆ ಇರಲಿ, ಆದರೆ ಅದರಿಂದಲೇ ಎಲ್ಲವೂ ಆಗುತ್ತದೆ ಎಂಬ ಭ್ರಮೆ ಬೇಡ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ ಪೋಷಕರೆ ಆಗಲಿ, ಗುರುಗಳೇ ಆಗಲಿ ಸ್ನೇಹಿತರೇ ಆಗಲಿ ಯಾರು ಏನೇ ಹೇಳಿದರೂ ಪ್ರಶ್ನೆ ಮಾಡದೇ ಏನನ್ನೂ ಒಪ್ಪಿಕೊಳ್ಳಬೇಡಿ. ಪ್ರಶ್ನಿಸದೆ ಒಪ್ಪಿಕೊಂಡರೆ ನೀವು ಕಲಿತ ವಿದ್ಯೆಗೆ ಅರ್ಥವೇ ಇರುವುದಿಲ್ಲ. ಹಾಗಾಗಿ ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎನ್ನುವಂತೆ ಪ್ರತಿಯೊಂದನ್ನೂ ಓರೆಗೆ ಹಚ್ಚುವ ಕೆಲಸವನ್ನು ನೀವು ಮಾಡಬೇಕು ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಚಿನ್ನೇನಹಳ್ಳಿ ಸ್ವಾಮಿ ಹೇಳಿದರು.

ಅವರು ಬಿಜಿವಿಎಸ್ ಹಾಸನ ನಗರ ಘಟಕ ಪ್ರೌಢ ಮತ್ತು ಪ್ರಾಥಮಿಕ ಶಾಲೆ ಹೌಸಿಂಗ್ ಬೋರ್ಡ್ ಕುವೆಂಪುನಗರ ಇಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಇಂದು ವಿದ್ಯಾವಂತರೇ ಮೌಢ್ಯದ ಕೂಪಕ್ಕೆ ಬೀಳುತ್ತಿರುವುದು ದುರಂತ ಮತ್ತು ವಿಪರ್ಯಾಸದ ಸಂಗತಿಯಾಗಿದೆ. ದೇವರಲ್ಲಿ ನಂಬಿಕೆ ಇರಲಿ, ಆದರೆ ಅದರಿಂದಲೇ ಎಲ್ಲವೂ ಆಗುತ್ತದೆ ಎಂಬ ಭ್ರಮೆ ಬೇಡ. ಕೈ ಕೆಸರಾದರೆ ಮಾತ್ರ ಬಾಯಿ ಮೊಸರಾಗುತ್ತದೆಯೇ ಹೊರತು ಮಂತ್ರದಿಂದ ಒಂದು ಅಗುಳು ಅನ್ನವೂ ಸೃಷ್ಟಿಯಾಗುವುದಿಲ್ಲ. ಹಾಗಾಗಿ ವಿಜ್ಞಾನದಿಂದ ಮಾತ್ರ ದೇಶ, ಪ್ರಪಂಚ ಮುಂದುವರಿಯಲು ಸಾಧ್ಯ ಎಂದರು.

ಶಿಕ್ಷಕಿ ಹಾಗೂ ಬಿಜಿವಿಎಸ್ ತಾಲೂಕು ಕಾರ್ಯದರ್ಶಿ ಲೋಲಾಕ್ಷಿ ವಿಜ್ಞಾನದ ಮಹತ್ವದ ಬಗ್ಗೆ ಮಾತನಾಡಿ, ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಈ ದೇಶಕ್ಕೆ ಈ ದೇಶದ ಜನರಿಗೆ ರಾಷ್ಟ್ರೀಯ ದಿನಾಚರಣೆ ಈ ನಾಲ್ಕು ಅಂಶಗಳಲ್ಲಿ ಮಹತ್ತರವಾದುದು. ಮೊದಲನೆಯದಾಗಿ ವಿಶ್ವ ಭೂಪಟದಲ್ಲಿ ಈ ದೇಶಕ್ಕೆ ಮಹತ್ತರ ಸ್ಥಾನಮಾನ ನೀಡಿದಂತಹ ದಿನ, ಇಂಗ್ಲೆಂಡ್, ಅಮೆರಿಕ, ರಷ್ಯದಂತಹ ದೇಶಗಳ ಸಾಲಿನಲ್ಲಿ ನಿಲ್ಲಿಸಿದ ದಿನ. ಕೇವಲ ಶ್ರೀಮಂತ ಬಂಡವಾಳಶಾಹಿ ರಾಷ್ಟ್ರಗಳಿಗೇ ಸೀಮಿತವಾಗಿದ್ದ ವಿಜ್ಞಾನದ ಸಾಧನೆಯ ಫಲಶೃತಿಯನ್ನು ಮೊದಲಬಾರಿಗೆ ಮೂರನೆ ಜಗತ್ತಿನ ದೇಶವೊಂದು ತನ್ನದಾಗಿಸಿಕೊಂಡ ದಿನ. ಎರಡನೆಯದಾಗಿ ಈ ದೇಶದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಬಳಸಿಕೊಂಡು ಪದವಿ, ಪಿಎಚ್‍ಡಿ ಪಡೆದು ಈ ದೇಶದಲ್ಲಿ ಏನೂ ಇಲ್ಲ, ಏನೂ ಸಾಧನೆ ಮಾಡಲಿಕ್ಕಾಗುವುದಿಲ್ಲ ಎಂದು ಸಾಗರೋಲ್ಲಂಗನ ಮಾಡುವ ಸೋಕಾಲ್ಡ್ ಪ್ರತಿಭಾವಂತರಿಗೆ ನಾಚಿಸುವಂತಹ ದಿನ, ದೇಶಪ್ರೇಮ ಎಂದರೆ ಏನು ಎಂದು ತಿಳಿಸಿ ತೋರಿಸುವ ದಿನ, ರಾಮನ್ ಎಂದರೆ ಏನು ಮತ್ತು ಯಾರು ಎಂದು ತೋರಿಸುವ ದಿನ. ಹಾಗೂ ಭಾರತದ ಬೆಳವಣಿಗೆ ವಿಜ್ಞಾನದ ಬೆಳವಣಿಗೆಯಲ್ಲಿ ಮತ್ತು ವೈಜ್ಞಾನಿಕ ಮನೋಧರ್ಮ ಬಿತ್ತುವಲ್ಲಿ ಇದೆ ಎಂದು ಎತ್ತಿ ತೋರಿಸುವ ದಿನ ಎಂದು ವಿವರಿಸಿದರು. ಇದೇ ವೇಳೆ ಸಿ. ವಿ ರಾಮನ್ ರವರ ಬೆಳಕಿನ ವಕ್ರೀಭವನವನ್ನು ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ತೋರಿಸಿದರು.

ಈ ಸಂದರ್ಭದಲ್ಲಿ ಸಾಹಿತಿಗಳಾದ ಗ್ಯಾರಂಟಿ ರಾಮಣ್ಣ ವಿದ್ಯಾರ್ಥಿಗಳಿಗೆ ವಿಜ್ಞಾನದ ಗೀತೆಗಳನ್ನು ಹಾಡಿ ರಂಜಿಸಿದರು. , ಹಾಸನ ನಗರ ಬಿಜೆವಿಎಸ್ ಘಟಕದ ಅಧ್ಯಕ್ಷರಾದ ಮತ್ತು ತಾಲೂಕು ಬಿಜಿವಿಎಸ್ ಉಪಾಧ್ಯಕ್ಷ ಶೇಖರ್, ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಮಹತ್ವದ ಬಗ್ಗೆ ಮಾತನಾಡಿದರು. ಜಯನಗರ ಘಟಕದ ಧರ್ಮರಾಜ, ನಗರ ಘಟಕದ ಉಪಾಧ್ಯಕ್ಷ ಆಶಾ ಹಾಜರಿದ್ದರು. ಸರ್ಕಾರಿ ಪ್ರೌಢಶಾಲೆ ಹೌಸಿಂಗ್ ಬೋರ್ಡ್ ಮುಖ್ಯ ಶಿಕ್ಷಕರಾದ ರಾಧ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ನವೀನ್ ಕುಮಾರ್, ಶಿಕ್ಷಕರಾದ ಪಾಲಾಕ್ಷ,ರವೀಂದ್ರ, ಆರ್‌ ಮೀನಾಕ್ಷಿ ಡಿ ಎನ್, ವಸಂತಮ್ಮ , ಚಂದ್ರಕಲಾ ಕೆಎಂ,ರಶ್ಮಿ ಆರ್‌ ಮಜಾಪೀರ್ ಪಾಷಾ, ಇತರರು ಉಪಸ್ಥಿತರಿದ್ದರು.

ಎಂಟನೇ ತರಗತಿಯ ವಿದ್ಯಾರ್ಥಿಗಳ ವಿಜ್ಞಾನ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ನವೀನ್ ಕುಮಾರ್ ಅವರು ಸ್ವಾಗತಿಸಿದರು. ಶಿವಕುಮಾರ್ ಅವರು ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.

Share this article