ಕಲಾಮಂದಿರ ಮಳಿಗೆ ಕೂಡಲೇ ಹಂಚಿಕೆಗೆ ಸೂಚನೆ

KannadaprabhaNewsNetwork |  
Published : Nov 21, 2025, 03:15 AM IST
ಸಂಸದ ಜಗದೀಶ ಶೆಟ್ಟರ ಅ‍ರು ಸ್ಮಾರ್ಟ್ ಸಿಟಿ ಮತ್ತು ಪ್ರವಾಸೋದ್ಯಮ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ನಿರ್ಮಿಸಲಾದ ಕಲಾಮಂದಿರದ ಮಳಿಗೆಗಳ ಹಂಚಕೆ ವಿಳಂಬವಾಗಿದ್ದು, ಕೂಡಲೇ ಮಳಿಗೆ ಹಂಚಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಜಗದೀಶ ಶೆಟ್ಟರ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸ್ಮಾರ್ಟ್‌ ಸಿಟಿ ಯೋಜನೆಯಡಿ ನಿರ್ಮಿಸಲಾದ ಕಲಾಮಂದಿರದ ಮಳಿಗೆಗಳ ಹಂಚಕೆ ವಿಳಂಬವಾಗಿದ್ದು, ಕೂಡಲೇ ಮಳಿಗೆ ಹಂಚಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಜಗದೀಶ ಶೆಟ್ಟರ ಸೂಚನೆ ನೀಡಿದರು.

ನಗರದಲ್ಲಿ ಸ್ಮಾರ್ಟ್‌ ಸಿಟಿ ಮತ್ತು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು. ಕಲಾಮಂದಿರದ ಮಳಿಗೆ ಹಂಚಿಕೆಯಾಗದಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದ ಅವರು, ಈ ರೀತಿ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದರೂ ಮಳಿಗೆ ಹಂಚಿಕೆ ಏಕೆ ಮಾಡಿಲ್ಲ. ಈ ರೀತಿ ಮಾಡಿದರೆ ಬಳಕೆಯಾಗದೇ ಪಾಳು ಬೀಳುತ್ತದೆ. ಕೂಡಲೇ ಮಳಿಗೆ ಹಂಚಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಪ್ರಥಮವಾಗಿ ಸ್ಮಾರ್ಟ್ ಸಿಟಿ ಮಿಶನ್ ಯೋಜನೆಯ ಅನುದಾನದಲ್ಲಿ ₹ 990 ಕೋಟಿ ಅನುದಾನ ಬಂದಿದ್ದು, ₹ 931 ಕೋಟಿ ಅನುದಾನದಲ್ಲಿ 104 ಕಾಮಗಾರಿ ಪೂರ್ಣಗೊಳಿಸಲಾಗಿದೆ. 4 ಕಾಮಗಾರಿ ಬಾಕಿ ಉಳಿದಿದ್ದು, ಕೂಡಲೇ ಈ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಅದರಂತೆ ನಗರದ ಸಿ.ಬಿ.ಬಿ ಹತ್ತಿರ ನಿರ್ಮಿತ ನೂತನ ಬಸ್ ನಿಲ್ದಾಣ ಉದ್ಘಾಟನೆಗೊಂಡಿದೆ. ಕಂಟೋನ್ಮೆಂಟ್‌ ಮಾಲಿಕತ್ವದ ಈ ಜಮೀನು ಮಹಾನಗರ ಪಾಲಿಕೆಗೆ ಹಸ್ತಾಂತರವಾಗಿಲ್ಲ. ಕೂಡಲೇ ಹಸ್ತಾಂತರ ಮಾಡಿಕೊಳ್ಳಬೇಕು ಎಂದರು.

ಕೇಂದ್ರ ಸರ್ಕಾರದ ಅಮೃತ ಯೋಜನೆಯಡಿ ₹ 24 ಕೋಟಿ ವೆಚ್ಚದಲ್ಲಿ ನಗರದ ಏಳು ಕೆರೆಗಳನ್ನು ಪುನಶ್ಚೇತನ ಮತ್ತು ಉದ್ಯಾನವವನ್ನು ಸುಧಾರಣೆ ಮಾಡಲಾಗಿದೆ. ಬೆಳಗಾವಿ ನಗರದಲ್ಲಿ ರಸ್ತೆಗಳು ಹಾಳಾಗಿದ್ದು, ಅವುಗಳನ್ನು ಶೀಘ್ರ ಸರಿಪಡಿಸುವಂತೆ ಸೂಚಿಸಿದರು. ಮುಂಬರುವ ದಿನಗಳಲ್ಲಿ ವಿಧಾನ ಮಂಡಳ ಅಧಿವೇಶನ ಬೆಳಗಾವಿಯಲ್ಲಿ ನಡೆಯಲಿದ್ದು, ಈ ಕ್ರಮ ತುಂಬ ಮಹತ್ವದ್ದಾಗಿದೆ, ನಗರ ಸ್ವಚ್ಚತೆಯ ಬಗ್ಗೆ ಕಾಳಜಿ ವಹಿಸುವಂತೆ ಸಂಸದರು ಅಧಿಕಾರಿಗಳಿಗೆ ತಿಳಿಸಿದರು.

ಇನ್ನು ಬೆಳಗಾವಿ ಕುರಿತು ನಗರ ಘನತ್ಯಾಜ ವಿಲೇವಾರಿ ವಿಶ್ವಾಸ ಯೋಜನೆಯಡಿ ₹ 135 ಕೋಟಿ ಅನುದಾನ ಕೇಂದ್ರದಿಂದ ಮಂಜೂರಾಗಿದೆ. ಇದು 2023ರಲ್ಲಿಯೇ ಮಂಜೂರಾಗಿದ್ದು, ಈ ಕಾಮಗಾರಿ ವಿಳಂಬವಾಗಿದೆ. ಆದಷ್ಟು ಬೇಗನೆ ಪ್ರಾರಂಭಿಸುವ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರು.ಸವದತ್ತಿ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನಲ್ಲಿ ಕೇಂದ್ರ ಸರ್ಕಾರ ಎಸ್ಎಎಸ್‌ಸಿಐ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳ ಅನುಷ್ಠಾನದ ಕುರಿತು ಪ್ರಗತಿ ಪರಿಶೀಲಿಸಿದರು. ಯಲ್ಲಮ್ಮ ದೇವಸ್ಥಾನದಲ್ಲಿ ಮೂಲಭೂತ ಸೌಕರ್ಯಗಳ ಮೂಲಕ ಸರ್ವಾಂಗೀಣ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ₹118 ಕೋಟಿ ಅನುದಾನದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಯೋಜನೆಗೆ ಈಗಾಗಲೇ ಅನುಮೋದನೆ ದೊರೆತ್ತಿದ್ದು, ಕಾಮಗಾರಿಗಳ ಅನುಷ್ಠಾನಕ್ಕೆ ಟೆಂಡ‌ರ್ ಪ್ರಕ್ರಿಯೆ ಹಾಗೂ ಮುಂದಿನ ಒಪ್ಪಿಗೆಗಾಗಿ ಪ್ರವಾಸೋದ್ಯಮ ಇಲಾಖೆಯ ಮೇಲಾಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

PREV

Recommended Stories

ಅಧಿಕಾರ ಕೊಟ್ಟಿರುವುದು 5 ವರ್ಷಕ್ಕೆ: ಸಿಎಂ ಸಿದ್ದರಾಮಯ್ಯ
ಕೊಟ್ಟ ಮಾತನ್ನು ಎಂದೂ ಸಿಎಂ ತಪ್ಪೋಲ್ಲ : ಡಿಕೆಸು