ಕನ್ನಡಪ್ರಭ ವಾರ್ತೆ ಮಂಡ್ಯ
ಸುಧಾ ಸಿದ್ದೇಗೌಡರು ಗ್ರಾಪಂ ಅಧ್ಯಕ್ಷರಾಗಿದ್ದ ಸಮಯದಲ್ಲಿ ೨೦೨೦-೨೧, ೨೦೨೧-೨೨ನೇ ಸಾಲಿನಲ್ಲಿ ೧೪ ಮತ್ತು ೧೫ನೇ ಹಣಕಾಸು ಯೋಜನೆಯಡಿ ಕಾಮಗಾರಿಗಳು ಮತ್ತು ನರೇಗಾ ಯೋಜನೆಯಡಿ ಒಟ್ಟು ೧೧ ಕಾಮಗಾರಿಗಳನ್ನು ವಹಿಸಿ ಹಣ ಪಾವತಿಸಿರುವುದು ಕಂಡುಬಂದಿದೆ.
ಸದಸ್ಯರ ಸಂಬಂಧಿಗಳಿಂದ ಕಾಮಗಾರಿಗಳನ್ನು ನಿರ್ವಹಿಸುವುದು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ-೧೯೯೩ರರ ಪ್ರಕರಣ ೪೩ (ಎ)(೧)ರ ಸ್ಪಷ್ಟ ಉಲ್ಲಂಘನೆಯಾಗಿದೆ. ಇದರನ್ವಯ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ಅಧಿಕಾರ ದುರುಪಯೋಗದ ಸಂಬಂಧ ವಿಚಾರಣೆ ನಡೆಸುವುದಕ್ಕೆ ಪ್ರಾದೇಶಿಕ ಆಯುಕ್ತರಿಗೆ ಅಧಿಕಾರವಿದೆ.ಅದರಂತೆ ಸುಧಾ ಸಿದ್ದೇಗೌಡರ ಲಿಖಿತ ಸಮಜಾಯಿಷಿ ಕೋರಿ ಪ್ರಾದೇಶಿಕ ಆಯುಕ್ತ ಡಿ.ಎಸ್.ರಮೇಶ್ ನೋಟಿಸ್ ಜಾರಿಗೊಳಿಸಿದ್ದು, ನೋಟಿಸ್ ತಲುಪಿದ ೧೫ ದಿನಗಳೊಳಗೆ ಲಿಖಖಿತ ಸಮಜಾಯಿಷಿಯನ್ನು ದಾಖಲಾತಿಗಳೊಂದಿಗೆ ಕಚೇರಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ. ತಪ್ಪಿದಲ್ಲಿ ಸುಧಾ ಅವರ ಸಮಜಾಯಿಷಿ ಏನೂ ಇಲ್ಲವೆಂದು ಪರಿಗಣಿಸಿ ಲಭ್ಯವಿರುವ ದಾಖಲೆಗಳ ಅನುಸಾರ ನಿಯಮದಂತೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ಸುಧಾ ಸಿದ್ದೇಗೌಡ ಗ್ರಾಪಂ ಸದಸ್ಯತ್ವ ರದ್ದುಗೊಳಿಸುವಂತೆ ಸಾಮಾಜಿಕ ಕಾರ್ಯಕರ್ತ ಕೆ.ಆರ್.ರವೀಂದ್ರ ಅವರು ಸಲ್ಲಿಸಿದ್ದ ದೂರು, ತನಿಖಾ ತಂಡದ ವರದಿ, ಬಿ.ಎಸ್.ಭಾನುಪ್ರಕಾಶ್ ನಿರ್ವಹಿಸಿದ ಕಾಮಗಾರಿಗಳ ವಿವರ ಹಾಗೂ ೧೧ ಕಾಮಗಾರಿಗಳ ಬಿಲ್‌ಗಳು ಪಾವತಿಯಾಗಿರುವ ವಿವರಗಳನ್ನು ಜಿಪಂ ಸಿಇಒ ಕೆ.ಆರ್.ನಂದಿನಿ ಕಳೆದ ಏಪ್ರಿಲ್ ತಿಂಗಳಲ್ಲೇ ಮೈಸೂರು ಪ್ರಾದೇಸಿಕ ಆಯುಕ್ತರಿಗೆ ಸಲ್ಲಿಸಿದ್ದರು.ಅಧಿಕಾರ ದುರುಪಯೋಗ ಸಂಬಂಧ ಗೋಪಾಲಪುರ ಗ್ರಾಪಂ ಸದಸ್ಯೆ ಸುಧಾ ಸಿದ್ದೇಗೌಡರ ಸದಸ್ಯತ್ವ ರದ್ದುಗೊಳಿಸುವಂತೆ ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಶಿಫಾರಸು ಮಾಡಿದ್ದರು. ಅದರಂತೆ ಈಗ ಪ್ರಾದೇಶಿಕ ಆಯುಕ್ತರು ನೋಟಿಸ್ ಜಾರಿಗೊಳಿಸಿದ್ದಾರೆ.