ಕನ್ನಡಪ್ರಭ ವಾರ್ತೆ ಮಂಡ್ಯ
ಮಂಗಳವಾರ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯಿಂದ ಕರಿಘಟ್ಟದಲ್ಲಿ ಆಯೋಜಿಸಲಾಗಿದ್ದ ಗಿಡ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕರಿಘಟ್ಟ ಬೆಟ್ಟದಲ್ಲಿರುವ ಕಾಡಿನ ಮರಗಳಿಗೆ ಬೆಂಕಿ ಹಾಕಿದರೆ ಮಕ್ಕಳಾಗುತ್ತದೆ ಎನ್ನುವುದು ಮೌಢ್ಯ. ಈ ಮೂಢನಂಬಿಕೆಯಿಂದ ಜನರು ಹೊರಬರಬೇಕು. ಕಾಡಿನ ಮರಗಳನ್ನು ಉಳಿಸಿ ಬೆಳೆಸಿದಾಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ ಎಂದರು.
ನಾವೆಲ್ಲರೂ ಇಂದು ನೆಮ್ಮದಿಯಾಗಿ ಜೀವಿಸಲು ಕಾರಣ ನಮ್ಮ ದೇಶದ ಸೈನಿಕರು. ಸೈನಿಕರು ತಮ್ಮ ಜೀವವನ್ನು ಪಣಕ್ಕಿಟ್ಟು ದೇಶದ ನಾಗರಿಕ ರಕ್ಷಣೆಗಾಗಿ ಶ್ರಮಿಸುವವರು. ಇತ್ತೀಚೆಗೆ ನಡೆದ ಪಹಲ್ಗಾಂ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಒಂದು ನಿಮಿಷ ಮೌನಾಚರಣೆ ಆಚರಿಸಿ ಗೌರವ ಸಲ್ಲಿಸಿದರು.ಒಂದು ಗಿಡವನ್ನು ಒಳ್ಳೆಯ ಮನಸ್ಸಿನಿಂದ ನೆಟ್ಟಿ ಬೆಳೆಸಿ ಗಿಡ- ಮರಗಳೂ ನಮ್ಮ ಮಕ್ಕಳಿದ್ದಂತೆ. ಮರಗಳಿಂದ ಉತ್ತಮ ವಾತಾವರಣ ಸೃಷ್ಟಿಯಾಗುತ್ತದೆ. ಆರೋಗ್ಯ ವೃದ್ಧಿಸುತ್ತದೆ. ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತಮುತ್ತಲು ಕನಿಷ್ಠ ಒಂದು ಗಿಡವನ್ನು ನೆಟ್ಟಿ ಬೆಳೆಸಿ. ಅದುವೇ ಸಮಾಜಕ್ಕೆ ನಾವು ನೀಡುವ ದೊಡ್ಡ ಕೊಡುಗೆ ಎಂದರು.
ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯ ಮೇಲೆ ನಿರಂತರವಾಗಿ ದಾಳಿ ನಡೆಸಿಕೊಂಡು ಬರುತ್ತಿದ್ದರೂ ಪ್ರಕೃತಿ ನಿಸ್ವಾರ್ಥದಿಂದ ಮನುಕುಲಕ್ಕೆ ಗಾಳಿ, ನೀರು, ಬೆಳಕು, ಆಹಾರ ನೀಡಿ ರಕ್ಷಿಸುತ್ತಿದೆ. ಆದರೂ ಮನುಷ್ಯ ವನ್ಯಜೀವಿಗಳ ವಿರುದ್ಧ ಸುಮರ ಸಾರುತ್ತಿದ್ದಾನೆ. ಈಗಲಾದರೂ ಎಚ್ಚೆತ್ತು ಪರಿಸರವನ್ನು ಉಳಿಸಿಕೊಳ್ಳಬೇಕಿದೆ ಇಲ್ಲವಾದಲ್ಲಿ ಜಗತ್ತು ಚಂಡಮಾರುತ, ಬಿರುಗಾಳಿ, ಸುನಾಮಿ, ಭೂ ಕುಸಿತದಂತಹ ಪ್ರಾಕೃತಿಕ ವಿಕೋಪ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಪರಿಸರ ಪ್ರೇಮಿಗಳಾದ ರಮೇಶ್, ಡಾ.ಸುಜಯ್, ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ನಂತರ ಕರಿಘಟ್ಟದ ಶ್ರೀ ವೆಂಕಟರಮಣ ಸ್ವಾಮಿ ಸಸ್ಯೋದ್ಯಾನವನದಲ್ಲಿ ಉಪ ಲೋಕಾಯುಕ್ತ ಬಿ. ವೀರಪ್ಪ ಅವರು ಗಿಡ ನೆಡುವ ಮೂಲಕ ಜಾಗೃತಿ ಮೂಡಿಸಿದರು.