ಕನ್ನಡಪ್ರಭ ವಾರ್ತೆ ಮಂಡ್ಯ
ಬಟ್ಟೆ, ದಿನನಿತ್ಯ ಉಪಯೋಗಿಸುವ ಎಲೆಕ್ಟ್ರಾನಿಕ್ ಸರಕು ಹಾಗೂ ಇನ್ನಿತರೆ ವಸ್ತುಗಳನ್ನು ಸಂಗ್ರಹಿಸುವ ಗೋದಾಮುಗಳ ಮೇಲೆ ನಿಗಾ ವಹಿಸಬೇಕು ಎಂದು ವೆಚ್ಚ ವೀಕ್ಷಕರಾದ ರೋಹಿತ್ ಅಸುದಾನಿ ಮತ್ತು ಕುಮಾರ್ ಪ್ರಿಯತಮ್ ಅಶೋಕ್ ತಿಳಿಸಿದರು.ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆದಾಯ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಸರಕು ಸಾಗಾಣಿಕೆ ಸಂದರ್ಭದಲ್ಲಿ ಬಿಲ್ ತಾಳೆ ಮಾಡುತ್ತಿರುವುದು ಸರಿಯಷ್ಠೆ, ಇದರೊಂದಿಗೆ ಗೋದಾಮುಗಳಿಗೆ ಅನಿರೀಕ್ಷಿತ ದಾಳಿ ನಡೆಸುವಂತೆ ಸೂಚಿಸಿದರು.
ಅನಧಿಕೃತವಾಗಿ ಮದ್ಯ ಸಾಗಾಣಿಕೆ ಹಾಗೂ ಸಂಗ್ರಹಣೆಯ ಬಗ್ಗೆ ವಿವಿಧ ತಂಡಗಳು ಹೆಚ್ಚು ನಿಗಾ ವಹಿಸಬೇಕು. ಸೂಕ್ಷ್ಮ ಸ್ಥಳಗಳಲ್ಲಿರುವ ಮದ್ಯದ ಅಂಗಡಿಗಳನ್ನು ಪಟ್ಟಿ ಮಾಡಿಕೊಂಡು ಅಬಕಾರಿ ಇಲಾಖೆ ಅಧಿಕಾರಿಗಳು ಗಮನಹರಿಸಬೇಕು. ಬ್ಯಾಂಕ್ ವಹಿವಾಟಿನ ಮೇಲೆ ನಿಗಾ ಇಡುವುದು. ಬ್ಯಾಂಕ್ ಖಾತೆಗಳಲ್ಲಿ ನಡೆಯುವ ಸಂಶಯಾಸ್ಪದ ವಹಿವಾಟು, ಹತ್ತು ಲಕ್ಷ ಕ್ಕಿಂತ ಹೆಚ್ಚಿನ ಹಣ ವರ್ಗಾವಣೆ, ಒಂದು ಖಾತೆಯಿಂದ ೧೦ ಕ್ಕಿಂತ ಹೆಚ್ಚಿನ ಖಾತೆಗೆ ಹಣ ವರ್ಗಾವಣೆ ಕುರಿತಂತೆ ಪ್ರತಿದಿನ ಪರಿಶೀಲನೆ ನಡೆಸಬೇಕು ಎಂದರು.೧೦ ಅಧಿಕಾರಿಗಳ ನೇಮಕ:
ಜಿಲ್ಲಾಧಿಕಾರಿ ಡಾ.ಕುಮಾರ ಅವರು ಅಕೌಂಟಿಂಗ್ ಟೀಂ ನವರು ಶ್ಯಾಡೋ ರಿಜಿಸ್ಟರ್, ಫೋಲ್ಡರ್ ಆಫ್ ಎವಿಡೆನ್ಸ್ ಸೇರಿದಂತೆ ವಿವಿಧ ಕಡತ ನಿರ್ವಹಣೆಯ ಬಗ್ಗೆ, ರಾಜಕೀಯ ಪಕ್ಷಗಳಿಗೆ ಪ್ರಚಾರಕ್ಕಾಗಿ ಅನುಮತಿ ನೀಡಲು ತೆರೆದಿರುವ ಏಕಗವಾಕ್ಷಿ ಕೇಂದ್ರ ಸೇರಿದಂತೆ ಮಾಡಿಕೊಂಡಿರುವ ವ್ಯವಸ್ಥೆಗಳ ಬಗ್ಗೆ ವಿವರಿಸಿದರು. ಬ್ಯಾಂಕ್ ವಹಿವಾಟಿನ ಮೇಲೆ ನಿಗಾ ವಹಿಸಲು ೧೦ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ ದಿನ ನಿಯಮಿತವಾಗಿ ವರದಿ ನೀಡುತ್ತಿದ್ದಾರೆಂಬುದನ್ನು ಗಮನಕ್ಕೆ ತಂದರು.ಅಬಕಾರಿ ಇಲಾಖೆ ಜಿಲ್ಲಾ ಅಧಿಕಾರಿ ರಾಘವೇಂದ್ರ ಮಾತನಾಡಿ, ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ೪೫ ಸೂಕ್ಷ್ಮ ಮದ್ಯದ ಅಂಗಡಿ, ೬೧ ಸೂಕ್ಷ್ಮ ಸ್ಥಳ, ದಾಳಿಗಾಗಿ ೧೧ ತಂಡಗಳನ್ನು ರಚಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರತಿದಿನ ಮಾಹಿತಿ ಸಂಗ್ರಹ:ವಾಣಿಜ್ಯ ತೆರಿಗೆ ಅಧಿಕಾರಿ ಶ್ರೀನಿವಾಸ್ ಮಾತನಾಡಿ, ಜಿಲ್ಲೆಯಲ್ಲಿರುವ ಚಿನ್ನ, ಬಟ್ಟೆ, ದಿನಸಿ, ಹೋಮ್ ಅಪ್ಲಯೇನಸಸ್ ಅಂಗಡಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ವಸ್ತುಗಳು ಮಾರಾಟವಾದಲ್ಲಿ ಪ್ರತಿದಿನ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಒಂದು ಮೊಬೈಲ್ ಚೆಕ್ ಪೋಸ್ಟ್ ಇದ್ದು, ಇದರೊಂದಿಗೆ ಎಫ್‌ಎಸ್‌ಟಿ ಮತ್ತು ಎಸ್‌ಎಸ್‌ಟಿ ತಂಡಗಳ ಸಹಕಾರ ಪಡೆಯಲಾಗುತ್ತಿದೆ ಎಂದರು.
ಸಭೆಯ ನಂತರ ವೆಚ್ಚ ವೀಕ್ಷಕರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿತವಾಗಿರುವ ಕಂಟ್ರೋಲ್ ರೂಂ, ಮಾಧ್ಯಮ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಆದಾಯ ತೆರಿಗೆ ಇಲಾಖೆ ಅಧಿಕಾರಿ ಮಹಮ್ಮದ್ ಇದಾಯತ್ ಉಸೇಸ್ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್. ನಾಗರಾಜು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.