ರಿವರ್‌ ರ್‍ಯಾಫ್ಟ್‌ ಫಿಟ್ನೆಸ್ ಪ್ರಮಾಣಪತ್ರ ಪಡೆಯಲು ಸೂಚನೆ

KannadaprabhaNewsNetwork |  
Published : May 20, 2026, 02:30 AM IST
ಚಿತ್ರ : 18ಎಂಡಿಕೆ2 : ರಿವರ್ ರ‍್ಯಾಫ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆ ನಡೆಯಿತು.  | Kannada Prabha

ಸಾರಾಂಶ

ದುಬಾರೆ ಮತ್ತು ಬರಪೊಳೆಯಲ್ಲಿ ರಿವರ್ ರ್‍ಯಾಪ್ಟಿಂಗ್ ನಡೆಸುವವರು ಕಡ್ಡಾಯವಾಗಿ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯಿಂದ (ಜೇತ್ನ) ರ್‍ಯಾಫ್ಟ್‌ ಫಿಟ್ನೆಸ್‌ ಪ್ರಮಾಣಪತ್ರ ಪಡೆಯುವ ಜೊತೆಗೆ ಪ್ರವಾಸೋದ್ಯಮ ಇಲಾಖೆಯಿಂದ ಪರವಾನಗಿ ನವೀಕರಣ ಪತ್ರ ಪಡೆದು ರಿವರ್ ರ್‍ಯಾಫ್ಟಿಂಗ್‌ (ಜಲಸಾಹಸ ಕ್ರೀಡೆ) ನಡೆಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸಹನಾ ಎಸ್. ಹಾದಿಮನಿ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ಮಡಿಕೇರಿ: ದುಬಾರೆ ಮತ್ತು ಬರಪೊಳೆಯಲ್ಲಿ ರಿವರ್ ರ್‍ಯಾಪ್ಟಿಂಗ್ ನಡೆಸುವವರು ಕಡ್ಡಾಯವಾಗಿ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯಿಂದ (ಜೇತ್ನ) ರ್‍ಯಾಫ್ಟ್‌ ಫಿಟ್ನೆಸ್‌ ಪ್ರಮಾಣಪತ್ರ ಪಡೆಯುವ ಜೊತೆಗೆ ಪ್ರವಾಸೋದ್ಯಮ ಇಲಾಖೆಯಿಂದ ಪರವಾನಗಿ ನವೀಕರಣ ಪತ್ರ ಪಡೆದು ರಿವರ್ ರ್‍ಯಾಫ್ಟಿಂಗ್‌ (ಜಲಸಾಹಸ ಕ್ರೀಡೆ) ನಡೆಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸಹನಾ ಎಸ್. ಹಾದಿಮನಿ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ರಿವರ್ ರ್‍ಯಾಫ್ಟಿಂಗ್‌ ನಿರ್ವಹಣೆ ಮತ್ತು ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಿವರ್ ರ್‍ಯಾಫ್ಟಿಂಗ್‌ ನಡೆಸುವವರು ಯಾವುದೇ ಕಾರಣಕ್ಕೂ ಅನುಮತಿ ಇಲ್ಲದೆ ಹಾಗೂ ನವೀಕರಣ ಪತ್ರ ಪಡೆಯದೆ ರಿವರ್ ರ್‍ಯಾಫ್ಟಿಂಗ್‌ ನಡೆಸಬಾರದು. ರಿವರ್ ರ್‍ಯಾಫ್ಟಿಂಗ್‌ ನಡೆಸಲು ಬಳಸುವ ಪ್ರತಿ ರ್‍ಯಾಫ್ಟ್‌ಗೆ ನಿರ್ವಹಣಾ ಶುಲ್ಕವನ್ನು ಪ್ರತಿ ತಿಂಗಳು ಪಾವತಿಸುವಂತೆ ಸೂಚಿಸಿದರು.

ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ರ್‍ಯಾಪ್ಟ್ ಗೈಡ್‌ಗಳ ಅಗತ್ಯ ತರಬೇತಿಯನ್ನು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತಾಲಯ ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ನಿರ್ದೇಶಕರ ಕಚೇರಿ ಇವರಿಂದ ಗೈಡ್ ಪ್ರಮಾಣಪತ್ರ ಪಡೆದಿರಬೇಕು ಎಂದರು.

ರಿವರ್ ರ್‍ಯಾಪ್ಟಿಂಗ್ ನಡೆಯುವ ಸ್ಥಳದಲ್ಲಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸಬೇಕು. ಕುಡಿಯುವ ನೀರು, ಶೌಚಾಲಯ, ವಾಹನ ನಿಲುಗಡೆ ಮತ್ತಿತರ ವಿಷಯಗಳನ್ನು ಗಮನಿಸಬೇಕು. ಯಾವುದೇ ಕಾರಣಕ್ಕೂ ಪ್ರವಾಸಿಗರ ಜೊತೆ ಕಿರಿಕಿರಿ ಮಾಡಿಕೊಳ್ಳಬಾರದು. ಪ್ರತಿಯೊಬ್ಬಸಾರ್ವಜನಿಕರ/ ಪ್ರವಾಸಿಗರ ಸುರಕ್ಷತೆ ಮತ್ತು ಸೌಜನ್ಯದ ವರ್ತನೆ ಅತಿ ಮುಖ್ಯ ಎಂದು ಸಹನಾ ಹೇಳಿದ್ದಾರೆ. ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ ಪರಿಶಿಷ್ಟ ಪಂಗಡದ ಜೇನು ಕುರುಬ ಜನಾಂಗದ ಯುವಕರಿಗೆ ರ್‍ಯಾಪ್ಟಿಂಗ್ ಸಲಕರಣೆಗಳನ್ನು ವಿತರಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಐಟಿಡಿಪಿ ಇಲಾಖೆ ಜೊತೆ ಚರ್ಚಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಅವರು ಸಲಹೆ ಮಾಡಿದರು. ಈ ಸಂದರ್ಭ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಶಶಿಧರ ಅವರು ರಿವರ್‌ ರ್‍ಯಾಪ್ಟ್‌ ಬಗ್ಗೆ ನೀಡಿದರು. ಕರ್ನಾಟಕ ಪ್ರವಾಸೋದ್ಯಮ ನೀತಿ 2024-29 ರಡಿ ಸಾಹಸ ಜಲಕ್ರೀಡೆಯಲ್ಲಿ ಒಂದಾದ ಕಾಯಕಿಂಗ್ ಜಲಕ್ರೀಡೆ ನಡೆಸಲು ಅವಕಾಶವಿದ್ದು, ಕೊಡಗು ಜಿಲ್ಲೆಯಲ್ಲಿ ವಿವಿಧ ಕಡೆಗಳಲ್ಲಿ ಕಾಯಕಿಂಗ್ ನಡೆಸಲು 16 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಹೇಳಿದರು.

ದುಬಾರೆ ಕಾವೇರಿ ನದಿಯಲ್ಲಿ ಹೊಸದಾಗಿ ರಿವರ್ ರ್‍ಯಾಫ್ಟಿಂಗ್ ನಡೆಸಲು 9 ಮನವಿ, ಹಾಗೆಯೇ ದುಬಾರೆ ಪ್ರವಾಸಿ ತಾಣದಲ್ಲಿ ಕಾಯಕಿಂಗ್, ವಾಟರ್ ಚೋರ್ಬಿಂಗ್ ಬಾಲ್ ನಡೆಸಲು 4 ಮನವಿಗಳು ಬಂದಿರುವ ಬಗ್ಗೆ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ವಿವರಿಸಿದರು.

ದುಬಾರೆಯ ರಿವರ್ ರ್‍ಯಾಫ್ಟಿಂಗ್ ಕಾರ್ಯದರ್ಶಿ ವಸಂತ ಮಾತನಾಡಿ, ಮೇ ಅಂತ್ಯದೊಳಗೆ ಫಿಟ್ನೆಸ್ ಪ್ರಮಾಣ ಪತ್ರ ಮತ್ತು ಗೈಡ್ ಪರವಾನಗಿ ಲಭ್ಯವಾಗಬೇಕು ಎಂದು ಕೋರಿದರು. ಬರಪೊಳೆಯ ರಿವರ್ ರ್‍ಯಾಫ್ಟಿಂಗ್‌ನ ರತನ್, ನಿತಿನ್, ಪವನ್, ಪ್ರದೀಪ್ ಅವರು ಬರಪೊಳೆಯಲ್ಲಿ ರಿವರ್ ರ್‍ಯಾಫ್ಟಿಂಗ್ ಸಂಬಂಧ ಮಾಹಿತಿ ನೀಡಿದರು. ತಹಸೀಲ್ದಾರ್‌ ಪ್ರವೀಣ್ ಕುಮಾರ್ , ಹಿರಿಯ ಪೊಲೀಸ್ ಅಧಿಕಾರಿ ಮೇದಪ್ಪಅವರು ಪ್ರವಾಸಿಗರ ಸುರಕ್ಷತೆ, ಪರಿಸರ ಸ್ವಚ್ಛತೆ ಬಗ್ಗೆ ಸಲಹೆ ನೀಡಿದರು.

ಲೋಕೋಪಯೋಗಿ ಇಲಾಖೆಯ ಇಇ ಪ್ರಭು, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ, ದುಬಾರೆ ರ‍್ಯಾಪ್ಟಿಂಗ್ ಅಧ್ಯಕ್ಷರಾದ ಉತ್ತಪ್ಪ, ಸಿ.ಎಲ್. ವಿಶ್ವ ಅವರು ಹಲವು ಮಾಹಿತಿ ನೀಡಿದರು. ತಹಸೀಲ್ದಾರರಾದ ಶ್ರೀಧರ, ಸಂಜನಾ, ಪಿಡಿಒಗಳಾದ ರಾಜಶೇಖರ್, ಹರೀಶ್, ಪ್ರವಾಸೋದ್ಯಮ ಇಲಾಖೆಯ ಸಮಾಲೋಚಕರಾದ ಜತೀನ್, ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವಶಕ್ತಿಗೆ ಗಾಂಧಿ ಚಿಂತನೆಗಳೇ ದಾರಿ ತೋರಲಿವೆ
ಜಮಖಂಡಿ ಕ್ಷೇತ್ರದ 23 ಗ್ರಾಮಗಳಲ್ಲಿ ನೀರಿನ ಸಮಸ್ಯೆ:ಶಾಸಕ ಜಗದೀಶ ಗುಡಗುಂಟಿ