ಅರಣ್ಯ ಇಲಾಖೆಗೆ ಸೇರಿದೆ ಎನ್ನಲಾದ 20 ಎಕರೆ ಜಮನು ಒತ್ತುವರಿ : ಟಾಕ್ಸಿಕ್‌ ಚಿತ್ರ ನಿರ್ಮಾಪಕರಿಗೆ ನೋಟಿಸ್‌

KannadaprabhaNewsNetwork |  
Published : Jul 26, 2024, 01:36 AM ISTUpdated : Jul 26, 2024, 10:02 AM IST
Karnataka highcourt

ಸಾರಾಂಶ

ಪೀಣ್ಯ ಪ್ಲಾಂಟೇಷನ್‌ ಗ್ರಾಮದಲ್ಲಿ ಅರಣ್ಯ ಇಲಾಖೆಗೆ ಸೇರಿದೆ ಎನ್ನಲಾದ 20 ಎಕರೆ ಜಮೀನನ್ನು ಕೆನರಾ ಬ್ಯಾಂಕ್‌ ಮತ್ತು ಕೆವಿಎನ್‌ ಫಿಲ್ಮ್‌ ಪ್ರೊಡೆಕ್ಷನ್‌ ಕಂಪನಿ ಅನಧಿಕೃತವಾಗಿ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಮಾಡುತ್ತಿದ್ದು,  ಹೈಕೋರ್ಟ್‌ ನೋಟಸ್‌ ಜಾರಿ ಮಾಡಿದೆ.

  ಬೆಂಗಳೂರು : ಬೆಂಗಳೂರು ಉತ್ತರ ತಾಲೂಕಿನ ಯಶವಂತಪುರ ಹೋಬಳಿಯ ಪೀಣ್ಯ ಪ್ಲಾಂಟೇಷನ್‌ ಗ್ರಾಮದಲ್ಲಿ ಅರಣ್ಯ ಇಲಾಖೆಗೆ ಸೇರಿದೆ ಎನ್ನಲಾದ 20 ಎಕರೆ ಜಮೀನನ್ನು ಕೆನರಾ ಬ್ಯಾಂಕ್‌ ಮತ್ತು ಕೆವಿಎನ್‌ ಫಿಲ್ಮ್‌ ಪ್ರೊಡೆಕ್ಷನ್‌ ಕಂಪನಿ ಅನಧಿಕೃತವಾಗಿ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಇದನ್ನು ತೆರವುಗೊಳಿಸುವಂತೆ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಸ್‌ ಜಾರಿ ಮಾಡಿದೆ.

ಈ ಕುರಿತು ಬೆಂಗಳೂರಿನ ವಕೀಲ ಜಿ.ಬಾಲಾಜಿ ನಾಯ್ಡು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಕೆಲ ಕಾಲ ಅರ್ಜಿದಾರ ಪರ ವಕೀಲ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾಗಿರುವ ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಬೆಂಗಳೂರು ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಎಚ್‌ಎಂಟಿ ಲಿಮಿಟೆಡ್‌, ಕೆನರಾ ಬ್ಯಾಂಕ್‌ ಕೇಂದ್ರ ಕಚೇರಿಯ ವ್ಯಸ್ಥಾಪಕ ನಿರ್ದೇಶಕರು, ಕೆವಿಎನ್‌ ಫಿಲ್ಮಂ ಪ್ರೊಡೆಕ್ಷನ್‌ ಕಂಪನಿ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಿತು. ಮುಂದಿನ ವಿಚಾರಣೆ ವೇಳೆ ಅರ್ಜಿ ಕುರಿತಂತೆ ಉತ್ತರ ನೀಡಬೇಕು ಎಂದು ಎಲ್ಲ ಪ್ರತಿವಾದಿಗಳಿಗೆ ನಿರ್ದೇಶಿಸಿ ವಿಚಾರಣೆಯನ್ನು ಆ.19ಕ್ಕೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಂ.ಆರ್‌. ವಿಜಯಕುಮಾರ್, 1896ರಲ್ಲಿ ಅಂದಿನ ಮೈಸೂರು ಸರ್ಕಾರ ಬೆಂಗಳೂರು ಉತ್ತರ ತಾಲೂಕಿನ ಯಶವಂತಪುರ ಹೋಬಳಿಯಲ್ಲಿ 599 ಎಕರೆ ಜಮೀನನ್ನು ಪೀಣ್ಯ-ಜಾಲಹಳ್ಳಿ ಪ್ಲಾಂಟೇಷನ್‌ ಮೀಸಲು ಅರಣ್ಯ ಪ್ರದೇಶವೆಂದು ಘೋಷಿಸಿ ರಾಜ್ಯಪತ್ರ ಹೊರಡಿಸಿತ್ತು. ಆದರೆ, 1963ರಲ್ಲಿ ರಾಜ್ಯ ಕಂದಾಯ ಇಲಾಖೆ 599 ಎಕರೆ ಪೈಕಿ 180 ಎಕರೆ 26 ಗುಂಟೆ ಜಮೀನನ್ನು, 1965ರಲ್ಲಿ ಪೀಣ್ಯ ಪ್ಲಾಂಟೇಷನ್‌ ಗ್ರಾಮದ ಸರ್ವೇ ನಂ 2ರಲ್ಲಿನ 77 ಎಕರೆ 20 ಗುಂಟೆ ಜಮೀನನ್ನು ಎಚ್‌ಎಂಟಿ ಲಿಮಿಟೆಡ್‌ಗೆ ದಾನವಾಗಿ ನೀಡಿದೆ ಎಂದು ವಿವರಿಸಿದರು.

2001ರಲ್ಲಿ ಎಚ್‌ಎಂಟಿ ಲಿಮಿಟೆಡ್‌ ಪೀಣ್ಯ ಪ್ಲಾಂಟೇಷನ್‌ ಗ್ರಾಮದ ಸರ್ವೇ ನಂ-21ರಲ್ಲಿನ 19.86 ಎಕರೆ ಖಾಸಗಿ ಏಜೆನ್ಸಿಗಳಿಗೆ ಮಾರಾಟ ಮಾಡಿದೆ. ಸರ್ವೇ ನಂ.2ರಲ್ಲಿನ 20 ಎಕರೆ 7 ಗುಂಟೆ ಕೆನರಾ ಬ್ಯಾಂಕ್‌ ಮತ್ತು ಕೆವಿಎನ್‌ ಫಿಲ್ಮ್‌ ಪ್ರೊಡಕ್ಷನ್‌ ಕಂಪನಿ ಅನಧಿಕೃತವಾಗಿ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಮಾಡುತ್ತಿವೆ. 2018ರಲ್ಲಿ ಈ ಎಲ್ಲ ಜಾಗ ಅರಣ್ಯ ಜಮೀನು ಎಂಬುದಾಗಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ. ಅದರಂತೆ ಈ ಆದೇಶ ಪಾಲನೆ ಕುರಿತಂತೆ ನ್ಯಾಯಾಲಯಕ್ಕೆ ಅನುಪಾಲನೆ ವರದಿ ಸಲ್ಲಿಸಬೇಕು. ಕೆನರಾ ಬ್ಯಾಂಕ್‌ ಮತ್ತು ಕೆವಿಎನ್‌ ಫಿಲ್ಮ್‌ ಪ್ರೊಡಕ್ಷನ್‌ ಕಂಪನಿ ಅನಧಿಕೃತವಾಗಿ ಒತ್ತುವರಿ ಮಾಡಿರುವ ಜಮೀನನ್ನು ತೆರವುಗೊಳಿಸಿ ಅರಣ್ಯ ಭೂಮಿಯಾಗಿ ಸಂರಕ್ಷಣೆ ಮಾಡಲು ರಾಜ್ಯ ಅರಣ್ಯ ಇಲಾಖೆ ಹಾಗೂ ಅದರ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿದರು.

ಕೆವಿಎನ್‌ ಫಿಲ್ಮ್‌ ಪ್ರೊಡಕ್ಷನ್‌ ಕಂಪನಿ ಅನಧಿಕೃತವಾಗಿ ಒತ್ತುವರಿ ಮಾಡಿದೆ ಎನ್ನಲಾದ ಜಾಗದಲ್ಲಿ ಸದ್ಯ ನಟ ಯಶ್‌ ಅವರ ‘ಟಾಕ್ಸಿಕ್‌’ ಚಿತ್ರೀಕರಣಕ್ಕೆ ಅದ್ಧೂರಿ ಸೆಟ್‌ ಹಾಕಲಾಗಿದೆ ಎನ್ನಲಾಗಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ