ನಿಗದಿತ ಪ್ರದೇಶದಲ್ಲಿ ವ್ಯಾಪಾರಕ್ಕೆ ಸೂಚನೆ

KannadaprabhaNewsNetwork | Published : Jan 10, 2024 1:46 AM

ಸಾರಾಂಶ

ಹೂವು, ಚಹಾ, ಟಿಫಿನ್‌ ಸೆಂಟರ್‌, ಚಪ್ಪಲಿ ವ್ಯಾಪಾರಿಗಳು ಮುಖ್ಯ ರಸ್ತೆಯನ್ನೇ ಆಕ್ರಮಿಸಿಕೊಂಡು ತಮ್ಮ ವ್ಯಾಪಾರ ವಹಿವಾಟು ಮಾಡುತ್ತಿರುವದರಿಂದ ಚಿಂಚೋಳಿ ಪಟ್ಟಣದ ಬೀದಿಬದಿ ವ್ಯಾಪಾರಿಗಳಿಗೆ ನ್ಯಾಯಾಧೀಶರಿಂದ ಜಾಗೃತಿ.

ಕನ್ನಡಪ್ರಭ ವಾರ್ತೆ ಚಿಂಚೋಳಿ

ಪಟ್ಟಣದ ಬಸ್‌ ನಿಲ್ದಾಣ, ಕೋರ್ಟ್‌, ಮುಖ್ಯರಸ್ತೆಯಲ್ಲಿ ಬೀದಿವ್ಯಾಪಾರಿಗಳು ರಸ್ತೆಯನ್ನೇ ಅಕ್ರಮಿಸಿಕೊಂಡಿದ್ದರಿಂದ ವಾಹನ ಸವಾರರಿಗೆ ಮತ್ತು ಪಾದಚಾರಿಗಳ ಸುಗಮ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಕೂಡಲೇ ಬೀದಿವ್ಯಾಪಾರಿಗಳು ವ್ಯಾಪಾರ ವಹಿವಾಟನ್ನು ಜ.೨೫ರ ಒಳಗೆ ಸ್ಥಳಾಂತರಗೊಳ್ಳಬೇಕೆಂದು ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ಮತ್ತು ಪ್ರಧಾನ ಸಿವಿಲ್ ನ್ಯಾಯಾಧೀಶ ರವಿಕುಮಾರ ಹಾಗೂ ನ್ಯಾಯಲಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ದತ್ತುಕುಮಾರ ಜಾವಳೇಕರ ಸೂಚನೆ ನೀಡಿದರು.

ಪಟ್ಟಣದ ಬಸ್‌ ನಿಲ್ದಾಣ, ಕೋರ್ಟ್‌ ಹತ್ತಿರ ಮತ್ತು ವಿವಿಧ ಅಂಗಡಿಗಳ ಮುಂದೆ ಹಣ್ಣು, ತರಕಾರಿ, ಹೂವು, ಚಹಾ, ಟಿಫಿನ್‌ ಸೆಂಟರ್‌, ಚಪ್ಪಲಿ ವ್ಯಾಪಾರಿಗಳು ಮುಖ್ಯ ರಸ್ತೆಯನ್ನೇ ಆಕ್ರಮಿಸಿಕೊಂಡು ತಮ್ಮ ವ್ಯಾಪಾರ ವಹಿವಾಟು ಮಾಡುತ್ತಿದ್ದರು. ಇದರಿಂದಾಗಿ ಚಿಂಚೋಳಿ-ಮಹಿಬೂಬನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಟ್ಟಣದ ಮೂಲಕ ಹಾದು ಹೋಗುವ ದಿನನಿತ್ಯ ಸಂಚರಿಸುವ ವಾಹನಗಳಿಗೆ ಮತ್ತು ಪಾದಚಾರಿಗಳಿಗೆ ತೊಂದರೆ ಆಗುತ್ತಿರುವ ಬಗ್ಗೆ ತಾಲೂಕ ಕಾನೂನು ಸೇವಾ ಸಮಿತಿಗೆ ಲಿಖಿತ ದೂರು ನೀಡಲಾಗಿತ್ತು.

ದೂರು ಆಧಾರಿಸಿದ ನ್ಯಾಯಾಧೀಶರು ಮಂಗಳವಾರ ಬೆಳಗ್ಗೆಯೇ ವಿವಿಧ ಕಡೆಗಳಲ್ಲಿ ಸಂಚರಿಸಿ, ಬೀದಿ ವ್ಯಾಪಾರಿಗಳಿಂದ ಜನರಿಗೆ ಬಹಳಷ್ಟು ತೊಂದರೆ, ರಸ್ತೆ ಅಪಘಾತಗಳು ಆಗುತ್ತಿದೆ. ಅತಿ ಕಿರಿದಾಗಿ ರಸ್ತೆಯಲ್ಲಿಯೇ ಸಿಮೆಂಟ್‌, ಕಬ್ಬು ತುಂಬಿದ ಲಾರಿ, ಟ್ರ್ಯಾಕ್ಟರ್‌ ಓಡಾಟ. ಅಲ್ಲದೇ ಬೇರೆ ಕಡೆಗೆ ಅಧಿಕ ಸರಕು ಸಾಮಗ್ರಿಗಳನ್ನು ತುಂಬಿದ ಲಾರಿಗಳು, ಬಸ್‌ಗಳು, ಕಾರು, ಜೀಪು, ಅಟೋ, ಟಂಟಂ ಇನ್ನಿತರ ವಾಹನಗಳ ಸಂಚಾರಕ್ಕೆ ಭಾರಿ ತೊಂದರೆ ಆಗುತ್ತಿದೆ. ಕೂಡಲೇ ರಸ್ತೆ ಬದಿಯಲ್ಲಿ ಯಾವುದೇ ವ್ಯಾಪಾರ ವಹಿವಾಟು ನಡೆಸಬೇಡಿ. ತರಕಾರಿ ಮಾರುಕಟ್ಟೆಯಲ್ಲಿಯೇ ತರಕಾರಿ ಮತ್ತು ಹಣ್ಣು, ಮಾಂಸ ಅಂಗಡಿ ನಿರ್ಮಿಸಲಾಗಿದೆ. ಕೂಡಲೇ ವ್ಯಾಪಾರಿಗಳು ತಮಗೆ ಪುರಸಭೆ ತೋರಿಸಿದ ಸ್ಥಳದಲ್ಲಿ ವ್ಯಾಪಾರ ವಹಿವಾಟು ನಡೆಸಬೇಕು. ಜ.೨೫ರ ಒಳಗೆ ಇಲ್ಲಿ ಯಾವುದೇ ವ್ಯಾಪಾರ ನಡೆಸಬೇಡಿರಿ ಎಂದು ಇದೇ ಸಂದರ್ಭದಲ್ಲಿ ಕಾನೂನು ತಿಳಿವಳಿಕೆ ಜಾಗೃತಿ ಮೂಡಿಸಿದರು.

ಮುಖ್ಯಾಧಿಕಾರಿ ಕಾಶಿನಾಥ ಧನ್ನಿ ಮಾತನಾಡಿ, ರಸ್ತೆ ಬದಿಯಲ್ಲಿ ಬೀದಿ ವ್ಯಾಪಾರಿಗಳು ಮತ್ತು ವಿವಿಧ ಅಂಗಡಿಗಳ ಮುಂದೆ ವ್ಯಾಪಾರಿಗಳು, ಮಾಲಿಕರು ಶೆಡ್‌ ನಿರ್ಮಿಸಿಕೊಂಡು ರಸ್ತೆಯನ್ನೇ ಅಕ್ರಮಿಸಿಕೊಂಡಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದಾರೆ. ಸಾರ್ವಜನಿಕರಿಗೆ ಪಾದಾಚಾರಿಗಳಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ನ್ಯಾಯಾಧೀಶರು ನೀಡಿದ ಸೂಚನೆ ಮೇರೆಗೆ ಜ.೨೫ರ ಒಳಗೆ ಎಲ್ಲ ಬೀದಿ ವ್ಯಾಪಾರಿಗಳು ತಮ್ಮ ವ್ಯಾಪಾರ ವಹಿವಾಟುಗಳನ್ನು ತರಕಾರಿ ಮಾರುಕಟ್ಟೆಯಲ್ಲಿಯೇ ಪ್ರಾರಂಭಿಸಬೇಕು. ಡಾ. ಬಿ.ಆರ್. ಅಂಬೇಡ್ಕರ ಚೌಕ್‌ನಿಂದ ಬಸ ಡಿಪೋ ರಸ್ತೆವರೆಗೆ ರಸ್ತೆ ಮೇಲೆ ಯಾವುದೇ ವ್ಯಾಪಾರ ನಡೆಸಲು ಅವಕಾಶ ನೀಡುವುದಿಲ್ಲ. ಯಾರಾದರೂ ಅಡ್ಡಿಪಡಿಸಿದರೆ ಅಂತಹವರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.

ನ್ಯಾಯಾಲಯ ಮುಖ್ಯಲಿಪಿಕ ಅಧಿಕಾರಿ ರವಿಕುಮಾರ, ಶಂಕರ, ಪುರಸಭೆ ಆರೋಗ್ಯ ಮತ್ತು ನೈರ್ಮಲ್ಯ ಅಧಿಕಾರಿ ಸಂಗಮೇಶ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಶ್ರೀಮಂತ ಕಟ್ಟಿಮನಿ, ಉಪಾಧ್ಯಕ್ಷ ಜಗನ್ನಾಥ ಗಂಜಗಿರಿ, ಸೂರ್ಯಕಾಂತ ಚಿಂಚೋಳಿಕರ, ಶಶಿಕಾಂತ ಆಡಕಿ, ವಿಜಯಕುಮಾರ ರಾಠೋಡ, ನೀಲಕಂಠ ರಾಠೋಡ, ರಾಜೇಂದ್ರ ವರ್ಮಾ, ಚಂದ್ರಶೆಟ್ಟಿ ಜಾಧವ್, ಸಂಜೀವಕುಮಾರ ಮೇತ್ರಿ, ಅರುಣಕುಮಾರ, ಕಿರಿಯ ಅಭಿಯಂತರ ದೇವೇಂದ್ರಪ್ಪ ಕೋರವಾರ ವಕೀಲರು ಪುರಸಭೆ ಸಿಬ್ಬಂದಿ ಭಾಗವಹಿಸಿದ್ದರು.

ಜ.೫ರಂದು ಕನ್ನಡಪ್ರಭದಲ್ಲಿ ಟ್ರಾಫಿಕ ಜಾಮ್ ಪಾದಚಾರಿಗಳಿಗೆ ಕಿರಿಕಿರಿ ವ್ಯಾಪಾರಿಗಳಿಂದ ರಸ್ತೆ ಅತಿಕ್ರಮಣ ಆರೋಪ ಸುದ್ದಿ ಪ್ರಕಟವಾಗಿತ್ತು.

Share this article