ಕನ್ನಡಪ್ರಭ ವಾರ್ತೆ ರಾಯಚೂರು
ಈಗಾಗಲೇ ಘೋಷಣೆಗೊಂಡಿರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಎರಡನೇ ಹಂತದ ಮತದಾನದ ವ್ಯಾಪ್ತಿಗೆ ಬರುತ್ತಿರುವ ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಶುಕ್ರವಾರ ಅಧಿಸೂಚನೆ ಪ್ರಕಟಗೊಂಡಿದ್ದು, ಇಂದಿನಿಂದ ಬರುವ ಎ.19 ವರೆಗೆ ನಾಮಪತ್ರಗಳ ಸಲ್ಲಿಕೆ ಪ್ರಕ್ರಿಯೇ ಚಾಲ್ತಿಯಲ್ಲಿರಲಿದ್ದು, ಸ್ಥಳೀಯ ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ಲೋಕಸಭಾ ಚುನಾವಣೆಗೆ ನಾಮಪತ್ರಗಳನ್ನು ಉಮೇದುದಾರರು ಅಥವಾ ಸೂಚಕರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಲ್.ಚಂದ್ರಶೇಖರ ನಾಯಕ ತಿಳಿಸಿದ್ದಾರೆ.ಈ ಕುರಿತು ಗುರುವಾರ ಹೇಳಿಕೆ ನೀಡಿರುವ ಅವರು, ಕೇಂದ್ರ ಚುನಾವಣಾ ಆಯೋಗವು ಕಳೆದ ಮಾ.15ರಂದು ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಅಧಿಸೂಚನೆ ಹೊರಡಿಸಿದ್ದು, ಅದರಂತೆ 06-ರಾಯಚೂರು (ಪರಿಶಿಷ್ಟ ಪಂಗಡ) ಲೋಕಸಭಾ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ಸಂಬಂಧಿಸಿದಂತೆ ನಾಮ ಪತ್ರಗಳನ್ನು ಉಮೇದುವಾರರು ಅಥವಾ ಅವರ ಸೂಚಕರು 06-ರಾಯಚೂರು (ಪ.ಪಂ) ಲೋಕಸಭಾ ಕ್ಷೇತ್ರ ಚುನಾವಣಾಧಿಕಾರಿ ಎಲ್. ಚಂದ್ರಶೇಖರ್ ನಾಯಕ್ ರವರಿಗೆ ಅಥವಾ ಸಹಾಯಕ ಚುನಾವಣಾಧಿಕಾರಿ ಅಶೋಕ ದುಡಗುಂಟಿ, ರವರಿಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಎ.12ರಿಂದ ಏ.19ರ ವರೆಗೆ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ರ ನಡುವೆ ಯಾವುದೇ ದಿನದಂದು (ಸರ್ಕಾರಿ ರಜಾದಿನದ ಹೊರತು) ಸಲ್ಲಿಸಬಹುದಾಗಿದೆ.
ನಾಮ ಪತ್ರದ ನಮೂನೆಗಳನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಿಗದಿತ ವೇಳೆಯಲ್ಲಿ ಪಡೆದುಕೊಳ್ಳಬಹುದು. ನಾಮ ಪತ್ರಗಳನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯ, ರಾಯಚೂರು ಇಲ್ಲಿ ಏ.20ರ(ಶನಿವಾರ) ರಂದು ಬೆಳಗ್ಗೆ 11:00 ಗಂಟೆಗೆ ಪರಿಶೀಲನೆಗೆ ತೆಗೆದುಕೊಳ್ಳಲಾಗುತ್ತದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳುವ ತಿಳಿವಳಿಕೆ ಪತ್ರವನ್ನು ಉಮೇದುವಾರನು ಅಥವಾ ಅವರ ಯಾರೇ ಸೂಚಕರು ಅಥವಾ ಅದನ್ನು ಸಲ್ಲಿಸಲು ಉಮೇದುವಾರನಿಂದ ಲಿಖಿತದಲ್ಲಿ ಅಧಿಕೃತನಾದ ಆತನ ಚುನಾವಣಾ ಏಜೆಂಟನು ಮೇಲ್ಕಂಡ (2)ನೇಯ ಪ್ಯಾರಾದಲ್ಲಿ ನಿರ್ದಿಷ್ಟಪಡಿಸಿದ ಇಬ್ಬರಲ್ಲೊಬ್ಬ ಅಧಿಕಾರಿಗೆ ನಿಗಧಿ ಪಡಿಸಿದ ಕಚೇರಿಯಲ್ಲಿ ಎ.22ರ (ಸೋಮುವಾರ)ದಂದು ಮಧ್ಯಾಹ್ನ 03:00 ಗಂಟೆಗೆ ಮುಂಚೆ ಸಲ್ಲಿಸಬಹುದು.ಚುನಾವಣೆಗೆ ಸ್ಪರ್ಧೆ ನಡೆದ ಸಂದರ್ಭದಲ್ಲಿ ಮೇ.7(ಮಂಗಳವಾರ) ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ವರೆಗೆ ಮತದಾನ ನಡೆಯುವುದು ಎಂದು ಈ ಮೂಲಕ ತಿಳಿಸಲಾಗಿದೆ. ನಾಮಪತ್ರಗಳನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಸ್ವೀಕರಿಸಲಾಗುತ್ತಿದ್ದು, ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ಚುನಾವಣಾ ಆಯೋಗ ನೀಡಿರುವ ಎಲ್ಲಾ ಸೂಚನೆಗಳನ್ನು ಪಾಲಿಸುವ ಮೂಲಕ ಅಗತ್ಯ ದಾಖಲೆಗಳೊಂದಿಗೆ ನಾಮಪತ್ರ ಸಲ್ಲಿಸಬಹುದು.
ನಾಮಪತ್ರ ಸಲ್ಲಿಸುವ ಅಭ್ಯರ್ಥಿಯ ಜೊತೆಗೆ 4 ಇತರ ಅಧಿಕೃತ ವ್ಯಕ್ತಿಗಳಿಗೆ ಮಾತ್ರ ನಾಮಪತ್ರ ಸ್ವೀಕೃತಿ ಕೇಂದ್ರದಿಂದ 100 ಮೀಟರ್ ಅಂತರದೊಳಗೆ ಪ್ರವೇಶಿಸಲು ಅವಕಾಶವಿರುತ್ತದೆ. ನಾಮಪತ್ರ ಸಲ್ಲಿಸುವ ಅಭ್ಯರ್ಥಿಯ ಬೆಂಗಾವಲಿನ 3 ವಾಹನಗಳಿಗೆ ಮಾತ್ರ ನಾಮಪತ್ರ ಸ್ವೀಕೃತಿ ಕೇಂದ್ರದಿಂದ 100 ಮೀಟರ್ ಅಂತರದೊಳಗೆ ಪ್ರವೇಶಿಸಲು ಅವಕಾಶವಿರುತ್ತದೆ.ನಾಮಪತ್ರ ಸ್ವೀಕೃತಿ ಕೇಂದ್ರದ ಒಳಗಡೆ, ಪ್ರವೇಶ ದ್ವಾರದಲ್ಲಿ, ನಿರ್ಗಮನ ದ್ವಾರದಲ್ಲಿ ಕಣ್ಗಾವಲಿಗೆ 360° ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ನಾಮಪತ್ರ ಸ್ವೀಕೃತಿ ಕಾರ್ಯದ ಚಿತ್ರೀಕರಣ ಮಾಡಲು ವಿಡಿಯೋ ಕ್ಯಾಮೆರಾದೊಂದಿಗೆ ಸಿಬ್ಬಂದಿ ನಿಯೋಜಿಸಲಾಗಿರುತ್ತದೆ. ಮಾನ್ಯ ಚುನಾವಣಾ ಆಯೋಗದ ಮಾರ್ಗದರ್ಶಗಳನ್ವಯ ನಾಮಪತ್ರ ಸ್ವೀಕೃತಿ ಕಾರ್ಯಕ್ಕೆ ಅವಶ್ಯವಿರುವ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.