ಕುಖ್ಯಾತ ರೌಡಿ ಬಚ್ಚಾಖಾನ್‌ ಸೇರಿ 8 ಜನರ ಬಂಧನ

KannadaprabhaNewsNetwork |  
Published : Sep 05, 2024, 12:35 AM IST
ಬಚ್ಚಾಖಾನ್‌  | Kannada Prabha

ಸಾರಾಂಶ

ಜಮೀನು ಮಾರಾಟದ ವ್ಯವಹಾರಕ್ಕೆ ಸಂಬಂಧಿಸಿ ನಗರದ ವ್ಯಕ್ತಿಯೊಬ್ಬರಿಗೆ ಕೋಟ್ಯಂತರ ರುಪಾಯಿ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿದ್ದ ನಟೋರಿಯಸ್‌ ರೌಡಿ ಯೂಸುಫ್‌ ಬಚ್ಚಾಖಾನ್‌ ಬಂಧಿಸಲಾಗಿದೆ.

ಹುಬ್ಬಳ್ಳಿ: ಜಮೀನು ಮಾರಾಟದ ವ್ಯವಹಾರಕ್ಕೆ ಸಂಬಂಧಿಸಿ ನಗರದ ವ್ಯಕ್ತಿಯೊಬ್ಬರಿಗೆ ಕೋಟ್ಯಂತರ ರುಪಾಯಿ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿದ್ದ ನಟೋರಿಯಸ್‌ ರೌಡಿ ಯೂಸುಫ್‌ ಬಚ್ಚಾಖಾನ್‌ ಜತೆ ಆತನ 7 ಮಂದಿ ಸಹಚರರನ್ನು ಬುಧವಾರ ಹುಬ್ಬಳ್ಳಿ ಧಾರವಾಡ ಮಹಾನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಪತ್ನಿ ಅನಾರೋಗ್ಯದ ಹಿನ್ನೆಲೆಯಲ್ಲಿ ಬಳ್ಳಾರಿ ಜೈಲಿನಿಂದ ಪೆರೋಲ್‌ ಮೇಲೆ ಹೊರಗಿದ್ದ ರೌಡಿ ಬಚ್ಚಾಖಾನ್‌ನನ್ನು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಹುಬ್ಬಳ್ಳಿ-ಧಾರವಾಡದಲ್ಲಿದ್ದ ಅವನ ಸಹಚರರಾದ ಸಯ್ಯದ್‌ ಅಲಿ, ಇರ್ಫಾನ್‌, ಸೂರಜ್‌ ಜಮಖಂಡಿ, ದಾದಾಪೀರ್‌ ಹಲಗೇರಿ, ಮೋಯಿನಖಾನ್‌ ಪಟೇಲ್‌, ತೌಸಿಫ್‌ ನಿಪ್ಪಾಣಿ, ನಿಜಾಮುದ್ದೀನ್‌ ಕೆರೆಕಟ್ಟಿ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

ಹುಬ್ಬಳ್ಳಿಯ ಮಂಟೂರು ಗ್ರಾಮದ ವ್ಯಕ್ತಿಯೊಬ್ಬರ ಜಮೀನು ಮಾರಾಟಕ್ಕೆ ಸಂಬಂಧಿಸಿ ನಡೆದ ಹಣಕಾಸಿನ ವ್ಯವಹಾರ ಪೂರ್ಣಗೊಂಡಿರಲಿಲ್ಲ. ಅದಕ್ಕೆ ಸಂಬಂಧಿಸಿ ಅವರಿಗೆ ಎರಡು ಮೊಬೈಲ್‌ ನಂಬರ್‌ಗಳಿಂದ ಸಾಕಷ್ಟು ಕರೆಗಳು ಬಂದಿದ್ದು, ಜೀವ ಬೆದರಿಕೆ ಹಾಕಿ ₹1 ಕೋಟಿ ನೀಡುವಂತೆ ಬೇಡಿಕೆ ಇಡಲಾಗಿತ್ತು. ಈ ಕುರಿತು ಜಮೀನು ಮಾಲೀಕರು ಸಿಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇವರ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಲಾಗಿತ್ತು. ಪ್ರಕರಣದ ಜಾಡು ಹಿಡಿದ ಪೊಲೀಸರು ಸೂಕ್ತ ಸಾಕ್ಷ್ಯಾಧಾರದ ಹಿನ್ನೆಲೆಯಲ್ಲಿ ಪ್ರಮುಖ ಆರೋಪಿ ಬಚ್ಚಾಖಾನ್‌ನನ್ನು ಬೆಂಗಳೂರಿನಲ್ಲಿ ಬಂಧಿಸಿದ್ದರೆ, ಇನ್ನುಳಿದ ಅವನ 7 ಜನ ಸಹಚರರನ್ನು ಹುಬ್ಬಳ್ಳಿ-ಧಾರವಾಡದಲ್ಲಿ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರೌಡಿ ಬಚ್ಚಾಖಾನ್‌ ಬಳ್ಳಾರಿ ಜೈಲಿನಿಂದ ಆ. 2ರಿಂದ 45 ದಿನ ಪೆರೋಲ್‌ ಮೇಲೆ ಹೊರಗೆ ಬಂದಿದ್ದ. ಹಳೇ ಹುಬ್ಬಳ್ಳಿಯಲ್ಲಿ ನಡೆದ ಫ್ರೂಟ್‌ ಇರ್ಫಾನ್‌ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಅವನು ಬೆಂಗಳೂರಿನಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ.

ತನ್ನ ಸಹಚರರ ಸಹಾಯದಿಂದ ಸಾರ್ವಜನಿಕರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿಸುತ್ತಿದ್ದ ಬಚ್ಚಾಖಾನ್‌ನಿಂದ ಇನ್ನೂ ಅನೇಕರಿಗೆ ಜೀವ ಬೆದರಿಕೆ ಕರೆಗಳು ಹೋಗಿರುವ ಮಾಹಿತಿ ಲಭ್ಯವಾಗಿವೆ. ಯಾರಿಗಾದರೂ ಬೆದರಿಕೆಯ ಕರೆಗಳು ಬಂದಿದ್ದರೆ ಸ್ವಯಂಪ್ರೇರಿತವಾಗಿ ದೂರು ನೀಡಬಹುದು. ಇಲ್ಲದಿದ್ದರೆ, ತನಿಖೆ ವೇಳೆ ದೊರೆಯುವ ಶಂಕಿತ ಕರೆಗಳ ಮಾಹಿತಿ ಆಧರಿಸಿ ಅಂಥವರನ್ನು ಕರೆದು ವಿಚಾರಣೆ ನಡೆಸಲಾಗುವುದು ಎಂದು ಹು-ಧಾ ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌ ಮಾಧ್ಯಮದವರಿಗೆ ತಿಳಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ