ಬಗರ್ ಹುಕುಂ ಸಾಗುವಳಿ ಪತ್ರ ನೀಡಿ, ಜಿಲ್ಲೆಯ ರೈತರ ಬೇಡಿಕೆಗಳ ಈಡೇರಿಸಿ, ಸಮಸ್ಯೆ ಪರಿಹರಿಸಿ: ರಾಜ್ಯ ರೈತ ಸಂಘ ಒತ್ತಾಯ
ಕನ್ನಡಪ್ರಭ ವಾರ್ತೆ ದಾವಣಗೆರೆಬಗರ್ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಸಲು ರಾಜ್ಯ ರೈತ ಸಂಘದಿಂದ ನಗರದಲ್ಲಿ ಸೋಮವಾರ ಜಿಲ್ಲಾಡಳಿತದ ಮುಖಾಂತರ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಯಿತು.
ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶರನ್ನು ಸಂಘಟನೆ ಮುಖಂಡರ ನೇತೃತ್ವದಲ್ಲಿ ರೈತರ ನಿಯೋಗವು ಭೇಟಿ ಮಾಡಿ, ಜಿಲ್ಲೆಯ ರೈತರ ಬೇಡಿಕೆಗಳ ಈಡೇರಿಸಿ, ಸಮಸ್ಯೆ ಪರಿಹರಿಸಲು ಒತ್ತಾಯಿಸಿ ಸರ್ಕಾರಕ್ಕೆ ಮನವಿ ಅರ್ಪಿಸಿತು.ಈ ವೇಳೆ ಮಾತನಾಡಿದ ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ, ಕಳೆದ 30 ವರ್ಷಕ್ಕಿಂತ ಹೆಚ್ಚು ಕಾಲದಿಂದ ದಾವಣಗೆರೆ, ಜಗಳೂರು, ಹೊನ್ನಾಳಿ, ನ್ಯಾಮತಿ, ಚನ್ನಗಿರಿ, ಹರಿಹರ ತಾಲೂಕುಗಳಲ್ಲಿ ರೈತರು ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದು, ಕಲಂ ನಂ.50, 53, 57 ಅರ್ಜಿ ಸಲ್ಲಿಸಿದ್ದಾರೆ. ಆದರೆ, ಸರ್ಕಾರದ ನಿಯಮಾವಳಿ ಪ್ರಕಾರ ಹೆಚ್ಚು ಜನರಿಗೆ ಹಕ್ಕುಪತ್ರ ವಿತರಣೆಯಾಗಿಲ್ಲ. ಕಂದಾಯ ಸಚಿವ ಕೃಷ್ಣ ಭೈರೇಗೌಡ 6 ತಿಂಗಳಲ್ಲೇ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದು, ಆಯಾ ತಾಲೂಕಿನಲ್ಲೂ ತುರ್ತು ಕ್ರಮಕ್ಕೆ ಸೂಚಿಸಲಿ ಎಂದು ಆಗ್ರಹಿಸಿದರು.
ಕಂದಾಯ, ಸರ್ವೇ ಇಲಾಖೆ, ಜಿಪಂ, ತಾಪಂ ಇನ್ನಿತರೆ ಇಲಾಖೆಗಳಲ್ಲಿ ಸಾರ್ವಜನಿಕರ ಅರ್ಜಿ ತ್ವರಿತ ವಿಲೇ ಆಗುತ್ತಿಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಿಂದೆ ಹೈಕೋರ್ಟ್‌ಗೆ ಪತ್ರ ವ್ಯವಹಾರವನ್ನು 7 ದಿನದಲ್ಲಿ, ಕಡತ ವ್ಯವಹಾರವನ್ನು 15 ದಿನದಲ್ಲಿ ವಿಲೇ ಮಾಡಿರುವುದಾಗಿ ಹೇಳಿದ್ದಾರೆ. ಆದರೆ, 3 ತಿಂಗಳಿನಿಂದ 3 ವರ್ಷವಾದರೂ ಸಮಸ್ಯೆ ಇತ್ಯರ್ಥಪಡಿಸುತ್ತಿಲ್ಲ. ರೈತರು, ಸಾರ್ವಜನಿಕರು ಅರ್ಜಿ ಸಲ್ಲಿಸಿದ 1 ತಿಂಗಳ ನಂತರ ರೈತರು, ಸಾರ್ವಜನಿಕರ ಕಚೇರಿಗಳಿಗೆ ಅಲೆದಾಡಿದರೆ ಆ ದಿನದ ಕೂಲಿ, ಬಂದು ಹೋಗು ಖರ್ಚು, ವೆಚ್ಚ, ಊಟದ ಖರ್ಚನ್ನು ಸರ್ಕಾರವೇ ಭರಿಸಬೇಕು ಎಂದು ತಾಕೀತು ಮಾಡಿದರು.ಒಂದು ವೇಳೆ 60 ವರ್ಷ ಮೇಲ್ಪಟ್ಟ ವೃದ್ದರು ಅರ್ಜಿ ಸಲ್ಲಿಸಿದ್ದರೆ ಅಂತಹ ವೃದ್ಧರಿಂದ ಕಚೇರಿಗೆ ಅಲೆದಾಡುವಾಗ ಅಸ್ವಸ್ಥಗೊಳ್ಳುವುದು, ಅನಾರೋಗ್ಯದಿಂದ ನಿತ್ರಾಣರಾದರೇ ಎಲ್ಲಾ ಕಚೇರಿಗಳಲ್ಲಿ ಹಿರಿಯ ನಾಗರಿಕರಿಗೆ ವಿಶ್ರಾಂತಿ ಕೊಠಡಿಗಳನ್ನು ಸರ್ಕಾರ ಕಲ್ಪಿಸಬೇಕು. ಅರ್ಜಿ ಸಲ್ಲಿಸಿದ ಬೇಡಿಕೆಗಳ ನ.20ರೊಳಗಾಗಿ ಇತ್ಯರ್ಥಪಡಿಸದಿದ್ದರೆ, ಜಿಲ್ಲಾಡಳಿತ ಭವನದ ಎದುರು ರೈತ ಸಂಘ, ರೈತರು, ಸಾರ್ವಜನಿಕರ ಸಹಭಾಗಿತ್ವದಲ್ಲಿ ಪ್ರತಿಭಟನಾ ಧರಣಿ ನಡೆಸುವುದಾಗಿ ಎಚ್ಚರಿಸಿದರು.
ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಮಾಯಕೊಂಡ ಜಿ.ಎ.ಅಶೋಕ, ಉಪಾಧ್ಯಕ್ಷ ಬಸವರಾಜ ರಾಂಪುರ, ಅಣಬೇರು ಕುಮಾರ ಸ್ವಾಮಿ, ಮಾಯಕೊಂಡ ಆರ್.ಎಚ್. ಪ್ರತಾಪ, ಶಿವಮೂರ್ತೆಪ್ಪ, ನಾಗರಕಟ್ಟೆ ಜಯನಾಯ್ಕ, ಚಿನ್ನಸಮುದ್ರ ಭೀಮನಾಯ್ಕ, ಹೆಬ್ಬಾಳ್ ಎಂ.ಆರ್.ರಾಜಯೋಗಿ, ಹರಿಹರ ತಾ. ಕೋಗಳಿ ಮಂಜುನಾಥ, ತಿರುಮಲೇಶ ಮಿಯ್ಯಾಪುರ, ಚೌಡಪ್ಪ ನರಗನಹಳ್ಳಿ, ಬಾಡದ ಕೆ.ಜಿ.ಹನುಮಂತಪ್ಪ, ದಶರಥ, ಆನವೇರಿ ಮಂಜುನಾಥ ಇತರರಿದ್ದರು. ಕೃಷಿ ಪಂಪ್‌ಸೆಟ್‌ಗಾಗಿ 3ರಿಂದ 8 ಲಕ್ಷ ರುಪಾಯಿ ಬಂಡವಾಳ ಹಾಕಿರುವ ರೈತರಿಗೆ ಸರ್ಕಾರ 7 ತಾಸು ವಿದ್ಯುತ್ ನೀಡುವ ಭರವಸೆ ನೀಡಿದ್ದರೂ, ಕನಿಷ್ಠ 5 ತಾಸು ಸಮರ್ಪಕ ವಿದ್ಯುತ್ ಪೂರೈಸುತ್ತಿಲ್ಲ. ವಿದ್ಯುತ್ ಸಮಸ್ಯೆ ತುರ್ತಾಗಿ ಪರಿಹರಿಸಬೇಕು. ಕೃಷಿ ಇಲಾಖೆ ಸರ್ವೇ ಪ್ರಕಾರ ಶೇ.98 ಬೆಳೆ ನಷ್ಟವಾಗಿದೆ. ಬೆಳೆ ನಷ್ಟ ಪರಿಹಾರದ ಹಣ ಸರ್ಕಾರ ತುರ್ತಾಗಿ ಆಯಾ ರೈತರ ಖಾತೆಗೆ ಜಮಾ ಮಾಡಬೇಕು. ಬಲ್ಲೂರು ರವಿಕುಮಾರ, ರಾಜ್ಯ ರೈತ ಸಂಘ ಕಾರ್ಯದರ್ಶಿ