ಕನ್ನಡಪ್ರಭ ವಾರ್ತೆ ಶಹಾಪುರ
ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ವಾರ್ಷಿಕ ಪ್ರಧಾನ ಸುತ್ತೋಲೆಯಲ್ಲಿನ ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿ ಸೇರಿ ಒಟ್ಟು 261 ನಾನಾ ಅಭಿವೃದ್ಧಿ ಕಾಮಗಾರಿಗಳಿದ್ದು, ಗ್ರಾಮೀಣ ಅರ್ಹ ರೈತರಿಗೆ ಹಾಗೂ ಜನರಿಗೆ ಅಗತ್ಯ ಮತ್ತು ಆದ್ಯತೆಗೆ ಅನುಸಾರ ವೈಯಕ್ತಿಕ ಕಾಮಗಾರಿ ನೀಡಬೇಕು. ಆಯವ್ಯಯ ತಯಾರಿಸುವಾಗ ನರೇಗಾ ವಾರ್ಷಿಕ ಪ್ರಧಾನ ಸುತ್ತೋಲೆಯಲ್ಲಿ ಸೂಚಿಸಿದ ಕಾಮಗಾರಿ ನಿಯಮ ಪಾಲಿಸಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಬೈ ಅವರು ನರೇಗಾ ಯೋಜನೆಯ ಅನುಷ್ಠಾನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಮಹಾತ್ಮಾಗಾಂಧಿ ನರೇಗಾ ಯೋಜನೆ 2025-26ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ಜಿಲ್ಲಾ ಪಂಚಾಯಿತಿ ಯಾದಗಿರಿ, ತಾಲೂಕು ಪಂಚಾಯಿತಿ0 ಶಹಾಪುರ ಹಾಗೂ ವಡಗೇರಾ ಸಹಯೋಗದಲ್ಲಿ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಒಂದು ದಿನದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಯೋಜನೆಯ ನಿಯಮಾನುಸಾರ ಗ್ರಾಮೀಣ ಭಾಗದ ಒಂದು ಕುಟುಂಬಕ್ಕೆ ಜೀವಿತಾವಧಿಯಲ್ಲಿ ₹5 ಲಕ್ಷಗಳವರೆಗೆ ಆರ್ಥಿಕ ಸಹಾಯ ಧನ ನೀಡುವ ವಿವಿಧ ವೈಯಕ್ತಿಕ ಕಾಮಗಾರಿ ನೀಡುವ ಮೂಲಕ ಗ್ರಾಮೀಣ ಕುಟುಂಬಗಳ ಆರ್ಥಿಕ ಪ್ರಗತಿಗೆ ಸಹಕರಿಸಿ, ಒಂದು ಬಾರಿ ಕೊಟ್ಟ ಕಾಮಗಾರಿಯನ್ನು ಪುನಃ ಅದೇ ಕಾಮಗಾರಿ ನೀಡದೆ, ಬೇರೆ ಕಾಮಗಾರಿ ನೀಡಿ ಎಂದರು.ನರೇಗಾ ಯೋಜನೆ ಅನುಷ್ಠಾನ ಮಾಡುವ ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು 2025-26ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ಅನುಸರಿಸುವ ಪೂರ್ವ ಕ್ರಮ, ವೈಯಕ್ತಿಕ ಕಾಮಗಾರಿ ಆಯ್ಕೆ, ಗುರುತಿಸಿದ ಕಾಮಗಾರಿಯ ಭೌತಿಕ ಸ್ಥಳ ಪರಿಶೀಲನೆ, ಸಾರ್ವಜನಿಕರು ಆನ್‌ಲೈನ್ ಹಾಗೂ ಕಾಮಗಾರಿ ಬೇಡಿಕೆ ಪೆಟ್ಟಿಗೆ ಮೂಲಕ ಸಲ್ಲಿಸಿದ ವೈಯಕ್ತಿಕ ಕಾಮಗಾರಿ ಬೇಡಿಕೆ ಅರ್ಜಿಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.ವೈಯಕ್ತಿಕ ಕಾಮಗಾರಿ ಪಡೆದ ಫಲಾನುಭವಿಯ ಉದ್ಯೋಗ ಚೀಟಿ ನೋಂದಣಿ ನರೇಗಾ ತಂತ್ರಾಂಶದಲ್ಲಿ ಡಿಇಓ ಲಾಗಿನ್‌ನಲ್ಲಿ ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿಗಳ ಹೆಸರು ನೋಂದಾಯಿಸಿ, ಪಿಡಿಓ ಲಾಗಿನ್‌ನಲ್ಲಿ ನೋಂದಣಿ ಮಾಡಿದ ಕಾಮಗಾರಿಗಳನ್ನು ಪರಿಶೀಲಿಸಿ, ಅನುಮೋದಿಸಿ, ಎಂಜಿನಿಯರ್‌ಗೆ ವರ್ಗಾಹಿಸುವುದು ಹಾಗೂ ಎಂಜಿನಿಯರ್ ತಮ್ಮ ಲಾಗಿನ್‌ಗೆ ಬಂದ ಕಾಮಗಾರಿಗಳಿಗೆ ಅಂದಾಜು ಪತ್ರಿಕೆ ತಯಾರಿಸುವ ಕ್ರಮದ ಕುರಿತು ನರೇಗಾ ಯೋಜನೆಯ ಜಿಲ್ಲಾ ಕಾರ್ಯಕ್ರಮ ಸಮನ್ವಯ ಅಧಿಕಾರಿ ಬನ್ನಪ್ಪ ಬೈಟಪುಲ್ಲಿ ಅವರು ತರಬೇತಿ ನೀಡಿದರು.ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶರಣಗೌಡ, ತರಬೇತಿದಾರ ಹಾಗೂ ಜಿಲ್ಲಾ ಎಂಐಎಸ್ ಸಂಯೋಜಕ ಶಿವಕುಮಾರ, ಶಹಾಪುರ ಮತ್ತು ವಡಗೇರಾ ತಾಲೂಕಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ನರೇಗಾ ಯೋಜನೆಯ ತಾಲೂಕು ತಾಂತ್ರಿಕ ಸಂಯೋಜಕರಾದ ವೆಂಕಟರಡ್ಡಿ, ರವೀಂದ್ರ ದೇಸಾಯಿ, ನರೇಗಾ ಯೋಜನೆ ಅನುಷ್ಠಾನ ಮಾಡುವ ಕೃಷಿ, ಅರಣ್ಯ, ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ತಾಂತ್ರಿಕ ಸಹಾಯಕ ಇಂಜಿನಿಯರ್ ಹಾಗೂ ಗ್ರಾಮ ಪಂಚಾಯಿತಿ ಡಾಟಾ ಎಂಟ್ರಿ ಆಪರೇಟರ್ ಭಾಗವಹಿಸಿದ್ದರು.