ದೆಹಲಿಯಿಂದ ಕನ್ನಡದಲ್ಲೇ ಸಂವಾದ ನಡೆಸಿದ ಐಎಎಸ್ ಅಧಿಕಾರಿಕನ್ನಡಪ್ರಭ ವಾರ್ತೆ ಹರಪನಹಳ್ಳಿ
ದೆಹಲಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ ಸಂಸ್ಥೆಯಲ್ಲಿ ನಾಗರಿಕ ಸೇವೆಗಳ ಪ್ರಶಿಕ್ಷಣಾರ್ಥಿಗಳಿಗೆ ನಡೆಯುತ್ತಿರುವ ತರಬೇತಿ ಪ್ರಯುಕ್ತ ಕೇಂದ್ರ ಹಣಕಾಸು ಹಾಗೂ ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಆಪ್ತ ಕಾರ್ಯದರ್ಶಿಯೂ ಆಗಿರುವ ಐಎಎಸ್ ಅಧಿಕಾರಿ ಅನಿರುದ್ಧ ಶ್ರವಣ್ ಸಂಪನ್ಮೂಲ ವ್ಯಕ್ತಿಯಾಗಿದ್ದು, ದೆಹಲಿಯಲ್ಲಿ ಶುಕ್ರವಾರ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡುವ ವೇಳೆ ಮನರೇಗಾ ಯೋಜನೆಯಲ್ಲಿ ಪ್ರಸ್ತುತ ಎದುರಿಸುತ್ತಿರುವ ಸವಾಲುಗಳು ಹಾಗೂ ಉತ್ತಮ ಅಭ್ಯಾಸಗಳ ಕುರಿತು ಬೆಳಗಾವಿ ಹಾಗೂ ವಿಜಯನಗರ ಜಿಲ್ಲೆಯ ಕೂಲಿಕಾರರು ಹಾಗೂ ಮೇಟಿಗಳಿಂದಲೇ ವಿಡಿಯೋ ಸಂವಾದದಲ್ಲಿ ಮಾಹಿತಿ ಪಡೆಯುತ್ತ ತರಬೇತಿ ನೀಡಿದ್ದು, ಇದು ರಾಜ್ಯಕ್ಕೆ ಹೆಗ್ಗಳಿಕೆಯ ಸಂಗತಿಯಾಗಿದೆ. ಕರ್ನಾಟಕದಿಂದ ಬೆಳಗಾವಿ ಜಿಲ್ಲೆ ಹಾಗೂ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಪಂ ವ್ಯಾಪ್ತಿಯಲ್ಲಿ ಚಿಗಟೇರಿ ಗ್ರಾಮದಲ್ಲಿ ಕಿರು ಜಲಾನಯನ ಪ್ರದೇಶದಲ್ಲಿ ಕ್ಷೇತ್ರ ಬದು ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರೊಂದಿಗೆ ನಡೆದ ವಿಡಿಯೋ ಸಂವಾದ ವೇಳೆ ಪ್ರಸ್ತುತ ವೃದ್ಧರಿಗೆ ಇರುವ ರಿಯಾಯಿತಿ, ನರೇಗಾದಡಿ ನೀಡುತ್ತಿರುವ ಕೂಲಿ ಮೊತ್ತ ಹಾಗೂ ಸ್ಥಳೀಯವಾಗಿ ಖಾಸಗಿ ಕೆಲಸದಲ್ಲಿ ದಿನಗೂಲಿಯಾಗಿ ಸಿಗುವ ಕೂಲಿ ಮೊತ್ತ ಎಷ್ಟಿದೆ ಎಂದು ಮಾಹಿತಿ ಪಡೆದರು. ನಂತರ ಕಾಮಗಾರಿ ಸ್ಥಳದಲ್ಲಿ ನೀಡುವ ಸೌಲಭ್ಯ ಏನು? ಒಂದು ಕುಟುಂಬಕ್ಕೆಒಂದು ಆರ್ಥಿಕ ವರ್ಷದಲ್ಲಿ ಎಷ್ಟು ದಿನ ಕೆಲಸ ನೀಡಲಾಗುತ್ತಿದೆ? ಎಂಬುದರ ಬಗ್ಗೆ ಚರ್ಚಿಸಲಾಯಿತು.
ಕನ್ನಡದ ನಂಟು:ಕರ್ನಾಟಕದ ನಾನಾ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಐಎಎಸ್ ಅಧಿಕಾರಿ ಅನಿರುದ್ಧ ಶ್ರವಣ್ ಆರಂಭದಲ್ಲಿ ಹರಪನಹಳ್ಳಿಯ ನರೇಗಾ ಸಹಾಯಕ ನಿರ್ದೇಶಕ ಯು.ಎಚ್. ಸೋಮಶೇಖರ್ ಅವರೊಂದಿಗೆ ಚರ್ಚಿಸಿದರು. ಬಳಿಕ ಕೂಲಿಕಾರರು ಇರುವ ಬಗ್ಗೆ ಮಾಹಿತಿ ಪಡೆದ ಅನಿರುದ್ಧ ಶ್ರವಣ್ ಅವರು ಕೂಲಿಕಾರರೊಂದಿಗೆ ಸಂವಾದ ನಡೆಸುವ ವೇಳೆ ಕನ್ನಡದಲ್ಲೇ ಕೆಲ ಕೂಲಿಕಾರರಿಂದ ಮಾಹಿತಿ ಪಡೆದು ಬಳಿಕ ದೆಹಲಿಯಲ್ಲಿ ತರಬೇತಿ ಪಡೆಯುತ್ತಿರುವ ಪ್ರಶಿಕ್ಷಣಾರ್ಥಿಗಳಿಗೆ ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ವಿವರಿಸಿದರು. ಸಂವಾದ ಬಳಿಕ ನರೇಗಾ ಸಹಾಯಕ ನಿರ್ದೇಶಕರು ವಿಡಿಯೋ ಸಂವಾದದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದಾಗ ಕೂಲಿಕಾರರು ಹರ್ಷ ವ್ಯಕ್ತಪಡಿಸಿದರು.
ತಾಂತ್ರಿಕ ಸಂಯೋಜಕ ನಾಗರಾಜ ನಾಯ್ಕ, ಕೆ. ವಸಿಗೇರಪ್ಪ ಚಾಗನೂರು, ಪಿಡಿಒ ನಾಗಪ್ಪ, ತಾಂತ್ರಿಕ ಸಹಾಯಕ ಅಭಿಯಂತರ ಮಲ್ಲಿಕಾರ್ಜುನ ಪೂಜಾರ್, ಕೆ.ಎಚ್. ಹರೀಶ್, ಕೆ. ದಿಲೀಪ್, ಹನುಮಂತ, ಪಿಡಿಒ ನಾಗಪ್ಪ, ಬಿಎಫ್‌ಟಿ, ಜಿಕೆಎಂ ಹಾಗೂ ಗ್ರಾಪಂ ಸಿಬ್ಬಂದಿ, ಮೇಟಿಗಳು, ಕೂಲಿಕಾರರು ಇದ್ದರು.