- ಸವಳು-ಜವಳು ಕಾರ್ಯಕ್ರಮದಡಿ ಅಂತರ್ಗತ ಬಸಿಕಾಲುವೆ ಕಾಮಗಾರಿ ಉದ್ಘಾಟನಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆನರೇಗ ಯೋಜನೆಯಿಂದ ಗ್ರಾಮ ಪಂಚಾಯಿತಿಗಳಿಗೆ ತುಂಬಾ ಅನುಕೂಲವಿದೆ. ತಾಂತ್ರಿಕವಾಗಿಯೂ ಈ ಯೋಜನೆಯಿಂದ ಒಳ್ಳೆಯ ಫಲಿತಾಂಶ ಬರಬೇಕು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.ಸೋಮವಾರ ಜಿಲ್ಲಾ ಪಂಚಾಯಿತಿ ಚಿಕ್ಕಮಗಳೂರು, ತರೀಕೆರೆ ತಾಪಂ, ಹಲಸೂರು ಗ್ರಾಪಂ, ಮಹಾತ್ಮಾಗಾಂಧಿ ನರೇಗಾ ಯೋಜನೆ ಹಾಗೂ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಸಮೀಪದ ಹಲಸೂರು ಗ್ರಾಮ ದಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಕಾಡಾ ಮತ್ತು ನರೇಗಾ ಸಂಯೋಜನಾ ಮಾದರಿಯಲ್ಲಿ ರೂಪುಗೊಂಡ ವಿಶಿಷ್ಟ ನವಚೇತನ ಯೋಜನೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದು ಒಂದು ಹೊಸ ರೀತಿ ಕಾರ್ಯಕ್ರಮ. ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಆಂಶುಮಂತ್ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ಹೆಚ್ಚು ಆಸಕ್ತಿ ವಹಿಸಿ ಹಂತ ಹಂತ ವಾಗಿ ಚರ್ಚಿಸಲಾಗಿದೆ. ಪ್ರತಿ ಹಂತದಲ್ಲೂ ಹೆಚ್ಚು ಗಮನ ಹರಿಸಲಾಗಿದೆ. ಮಹಿಳೆಯರು ಮನಸ್ಸು ಮಾಡಿದರೆ ಖಂಡಿತ ಯಶಸ್ಸು ಸಿಗುತ್ತದೆ. ನೀರಿನ ಮಿತ ಬಳಕೆಯಿಂದ ಹೆಚ್ಚು ಅನುಕೂಲ. ನೀರು ಸದ್ಬಳಕೆಯಾಗಬೇಕು ಎಂದು ಹೇಳಿದರು.ಕಂದಾಯ, ಉಪ ಕಂದಾಯ ಗ್ರಾಮಗಳಲ್ಲಿ ಹಲಸೂರು ಗ್ರಾಪಂನಲ್ಲಿ ಏಳು ಉಪ ಗ್ರಾಮಗಳನ್ನಾಗಿ ನಿರ್ವಹಿಸಲಾಗಿದೆ. ಇದರಿಂದ 280 ಮನೆಗಳಿಗೆ ಇ-ಸ್ವತ್ತುಗಳನ್ನು ವಿತರಿಸಲಾಗುತ್ತದೆ. ಗ್ರಾಪಂ ವ್ಯಾಪ್ತಿಯಲ್ಲಿ ₹1.67 ಕೋಟಿ ವಿವಿಧ ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.ನರೇಗಾ ಯೋಜನೆ ಸಹಾಯಕ ನಿರ್ದೇಶಕ ಸಿ.ಟಿ.ಯೋಗೇಶ್ ಮಾತಾನಾಡಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಾಗೂ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ಸವಳು ಜವಳು ಕಾರ್ಯಕ್ರಮದಡಿ ಅಂತರ್ಗತ ಬಸಿಕಾಲುವೆ ನಿರ್ಮಾಣ ಕಾಮಗಾರಿ ಉದ್ಘಾಟನೆ ನಡೆದಿದೆ. ನರೇಗಾ ಯೋಜನೆಯೋಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸ ಕೊಡುವುದು, ಭೂಮಿ ಫಲವತ್ತತೆ ಕಾಪಾಡುವುದು ಮತ್ತು ಕಾಡಾ ಅನುದಾನದ ಸದುಪಯೋಗ ಪಡಿಸಿಕೊಳ್ಳುವುದು, ವಿಶೇಷ ವಾಗಿ ಸ್ವಸಹಾಯ ಸಂಘದ ಮಹಿಳೆಯರಿಗೆ ಕೆಲಸ ಒದಗಿಸುವುದು ಯೋಜನೆ ಉದ್ದೇಶ. ರಾಜ್ಯದಲ್ಲೇ ಇದು ಮೊದಲ ಪ್ರಾಯೋಗಿಕ ಯೋಜನೆ. ಎಲ್ಲರ ಸಹಕಾರದಿಂದ ಯೋಜನೆ ಯಶಸ್ವಿ ಎಂದು ಹೇಳಿದರು.ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಆಂಶುಮಂತ್ ಮಾತನಾಡಿ ಹಲಸೂರು ಗ್ರಾಮದಲ್ಲಿ ಇದು ಒಂದು ಐತಿಹಾಸಿಕ. ಹೊಸ ಚಿಂತನೆ ಕಾರ್ಯಕ್ರಮ. ರಾಜ್ಯದಲ್ಲಿ ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಉತ್ತಮ ಅಡಳಿತ ನೀಡಲಾಗುತ್ತಿದೆ. ಶಾಸಕ ಜಿ.ಎಚ್.ಶ್ರೀನಿವಾಸ್ ಕ್ಷೇತ್ರದಾದ್ಯಂತ ಅತಿ ಹೆಚ್ಚು ಅಭಿವೃದ್ದಿ ಕಾರ್ಯಗಳನ್ನು ನಿರ್ವಹಿಸಿ ಜನರ ಧ್ವನಿಯಾಗುತ್ತಿದ್ದಾರೆ ಎಂದು ಹೇಳಿದರು.ಹಲಸೂರು ಗ್ರಾಮದಿಂದ ನವಚೇತನ ಯೋಜನೆ ಪ್ರಾರಂಭವಾಗಿರುವುದು ಸಂತೋಷ ತಂದಿದೆ. ಕಟ್ಟಕಡೆ ವ್ಯಕ್ತಿಯ ಧ್ವನಿ ಯಾಗಿ ಸರ್ಕಾರ ಕೆಲಸ ನಿರ್ವಹಿಸುತ್ತಿದೆ. ಸರ್ಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸಬೇಕು. ನಿರಂತರ ಪ್ರಯತ್ನ ಗಳಿಂದ ಈ ಕಾರ್ಯಕ್ರಮ ಆಗಿದೆ. ಮಣ್ಣಿನ ಫಲವತ್ತತೆ ಕಾಪಾಡುವುದು ಕಾಡಾದ ಉದ್ದೇಶ ಎಂದು ಹೇಳಿದರು.ಚಿಕ್ಕಮಗಳೂರು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ ಮಾತನಾಡಿ, ಭೂಮಿಯ ತಗ್ಗಿನಲ್ಲಿ ನೀರು ನಿಂತರೆ ಭೂಮಿಗೆ ಉಸಿರಾಟ ಕಷ್ಟವಾಗಿ ಇಳುವರಿ ಕೂಡ ಕಡಿಮೆಯಾಗುತ್ತದೆ. ಈ ತೊಂದರೆ ನಿವಾರಿಸಲು ಏನು ಮಾಡಬಹುದು ಎಂದು ಯೋಚಿಸಿ ಕಾಡಾ ಮತ್ತು ನರೇಗಾ ಯೋಜನೆಯಲ್ಲಿ ಬಸಿಗಾಲುವೆ ಮೂಲಕ ನೀರು ಹೊರ ಹಾಕುವ ಕಾರ್ಯಕ್ರಮ ಇದಾಗಿದೆ. ರೈತರಿಗಾಗುವ ತೊಂದರ ನಿವಾರಣೆ ಆಗಬೇಕು. ಕಾಡಾ ಮತ್ತು ನರೇಗಾ ಯೋಜನೆಯಿಂದ ಸಾವಿರಾರು ಜನರಿಗೆ ಉದ್ಯೋಗ ಕೂಡ ದೊರೆಯುತ್ತದೆ ಎಂದು ವಿವರಿಸಿದರು.ಲಕ್ಕವಳ್ಳಿ ಭಾಗದಲ್ಲಿ ಮಣ್ಣಿನ ಸವಕಳಿ ಸಮಸ್ಯೆ ಇದೆ. ಮುಂದಿನ ದಿನಗಳಲ್ಲಿ ಬೇಡಿಕೆ ಬಂದ ಕಡೆ ಈ ಯೋಜನೆ ಕಾರ್ಯಗತ ಗೊಳಿಸಲಾಗುವುದು ಎಂದು ಹೇಳಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ಆರ್.ದೇವೇಂದ್ರಪ್ಪ ಮಾತನಾಡಿ ತಾಲೂಕಿನಲ್ಲಿ ಈಗಾಗಲೇ ಕಂದಾಯ ಗ್ರಾಮ ಹಾಗೂ ಉಪ ಗ್ರಾಮಗಳ ಮಾದರಿಯಂತೆ ಶಾಸಕ ಜಿ.ಎಚ್.ಶ್ರೀನಿವಾಸ್ ನಿರ್ದೇಶನದಂತೆ ರಾಜ್ಯದಲ್ಲೇ ಪ್ರಥಮ ಬಾರಿಗೆ ನನಚೇತನ ಕಾರ್ಯಕ್ರಮ ಜಾರಿಗೊಳಿಸಲಾಗಿದೆ ಎಂದರು.ಕಾಡಾ ಅಧಿಕಾರಿ ಪ್ರಶಾಂತ್ ಮಾತನಾಡಿದರು. ಹಲಸೂರು ಗ್ರಾಪಂ ಅಧ್ಯಕ್ಷರಾದ ವಿನೋದ ಬಾಯಿ, ಜಿಪಂ ಮಾಜಿ ಅಧ್ಯಕ್ಷ ಎಚ್.ವಿಶ್ವನಾಥ್, ಕೆಡಿಪಿ ಸದಸ್ಯ ಎಚ್.ಎನ್.ಮಂಜುನಾಥ್ ಲಾಡ್ , ಮುಖಂಡರಾದ ಅರವಿಂದ್, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.-
24ಕೆಟಿಆರ್.ಕೆ.2ಃತರೀಕೆರೆ ಸಮೀಪದ ಹಲಸೂರು ಗ್ರಾಮದಲ್ಲಿ ನಡೆದ ಸವಳು-ಜವಳು ಕಾರ್ಯಕ್ರಮದಡಿ ಅಂತರ್ಗತ ಬಸಿಕಾಲುವೆ ಕಾಮಗಾರಿಯನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ಉದ್ಘಾಟಿಸಿದರು. ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಆಂಶುಮಂತ್, ತಾಪಂ ಇಒ ಡಾ.ಆರ್.ದೇವೇಂದ್ರಪ್ಪ ಮತ್ತಿತರರು ಇದ್ದರು.