ಮೈಸೂರಲ್ಲೂ ಸ್ತ್ರೀ ಚೇತನ ಅಭಿಯಾನ

KannadaprabhaNewsNetwork |  
Published : Apr 02, 2025, 01:04 AM IST
47 | Kannada Prabha

ಸಾರಾಂಶ

ನರೇಗಾದಲ್ಲಿ ಶೇ.50 ರಷ್ಟಿರುವ ಮಹಿಳಾ ಕೂಲಿಕಾರ್ಮಿಕರ ಸಂಖ್ಯೆಯನ್ನು ಶೇ.60ಕ್ಕೆ ಹೆಚ್ಚಿಸುವುದು ಈ ಅಭಿಯಾನದ ಉದ್ದೇಶವಾಗಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಜಾರಿಗೊಳಿಸಲಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮ-ನರೇಗಾ) ಯೋಜನೆಯಲ್ಲಿ ಮಹಿಳಾ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರವು ಸ್ತ್ರೀ ಚೇತನ ಯೋಜನೆಯನ್ನು ಜಾರಿಗೊಳಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ತವರು ಮೈಸೂರು ಜಿಲ್ಲೆಯಲ್ಲೂ ಅಭಿಯಾನ ಪ್ರಾರಂಭಗೊಂಡಿದೆ.

ನರೇಗಾ ಯೋಜನೆಯಲ್ಲಿ ಮಹಿಳೆಯರ ಭಾಗವಹಿಸಿಕೆ ಹೆಚ್ಚಿಸಲು ಸ್ತ್ರಿ ಚೇತನಾ ಅಭಿಯಾನದ ಮೂಲಕ ಪ್ರಯತ್ನ ನಡೆಸಿದೆ. ನರೇಗಾ ಸಂಪೂರ್ಣವಾಗಿ ಮಹಿಳಾ ಸ್ನೇಹಿ ಎಂಬುದಾಗಿ ಪರಿಚಯಿಸುವ ಉದ್ದೇಶವನ್ನು ಸ್ತ್ರೀ ಚೇತನ ಅಭಿಯಾನ ಒಳಗೊಂಡಿದೆ.

ನರೇಗಾದಲ್ಲಿ ಶೇ.50 ರಷ್ಟಿರುವ ಮಹಿಳಾ ಕೂಲಿಕಾರ್ಮಿಕರ ಸಂಖ್ಯೆಯನ್ನು ಶೇ.60ಕ್ಕೆ ಹೆಚ್ಚಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಅಲ್ಲದೆ, 3 ತಿಂಗಳು ಮಹಿಳಾ ಕೂಲಿಕಾರರಿಗೆ ನಿರಂತರ ಕೆಲಸ ಆದ್ಯತೆ ನೀಡುವುದು. ತಾಯಿ ಮತ್ತು ಮಕ್ಕಳಿಗೆ ಅನುಕೂಲವಾಗುವಂತೆ ಮಕ್ಕಳಿಗಾಗಿ ಕೂಸಿನ ಮನೆ, ವೈಯಕ್ತಿಕ ಕಾಮಗಾರಿಗಳಾದ ಇಂಗುಗುಂಡಿ, ವೈಯಕ್ತಿಕ ಶೌಚಾಲಯ, ಪೌಷ್ಟಿಕ ಕೈತೋಟ, ದನ ಮತ್ತು ಕುರಿ ಕಾಮಗಾರಿಗಳನ್ನು ನೀಡುವುದಾಗಿದೆ. ನರೇಗಾ ಯೋಜನೆ ಮೂಲಕ ಮಹಿಳಾ ಸಬಲೀಕರಣ ಕೈಗೊಳ್ಳುವ ಬಹುಮುಖ್ಯ ಉದ್ದೇಶವನ್ನು ಸ್ತ್ರೀ ಚೇತನ ಕಾರ್ಯಕ್ರಮ ಹೊಂದಿದೆ.

ಈ ನಿಟ್ಟಿನಲ್ಲಿ ಜಿಪಂ ಮಾರ್ಗದರ್ಶನದ ಮೂಲಕ ಸ್ಥಳೀಯ ತಾಪಂಗಳು ಮತ್ತು ಗ್ರಾಪಂಗಳು ಅಗತ್ಯ ಕ್ರಮ ಕೈಗೊಳ್ಳುತ್ತಿವೆ. ನರೇಗಾ ಕಾಮಗಾರಿಗಳಲ್ಲಿ ಪ್ರಸ್ತುತ ಮಹಿಳಾ ಪಾಲ್ಗೊಳ್ಳುವಿಕೆಯ ಪ್ರಮಾಣವು ರಾಜ್ಯ ಮಟ್ಟದಲ್ಲಿ ಶೇ.53.51 ರಷ್ಟಿದ್ದರೆ ಮೈಸೂರು ಶೇ.50 ರಷ್ಟಿದ್ದು, ಅದನ್ನು ವೃದ್ಧಿಸುವ ಉದ್ದೇಶವಿದೆ.

ಸ್ತ್ರೀ ಚೇತನ ಅಭಿಯಾನವು ಮೂರು ತಿಂಗಳವರೆಗೆ ಜಾರಿಯಲ್ಲಿರಲಿದ್ದು, ಈ ಸಂದರ್ಭದಲ್ಲಿ ನರೇಗಾ ಯೋಜನೆಯಲ್ಲಿ ಮಹಿಳೆಯರಿಗೆ ಇರುವ ಸವಲತ್ತು ಮತ್ತು ಸೌಲಭ್ಯಗಳ ಬಗ್ಗೆ ಮನದಟ್ಟು ಮಾಡಿಕೊಡಲಾಗುತ್ತದೆ. ಈ ಮೂಲಕ ನರೇಗಾ ಯೋಜನೆಯಲ್ಲಿ ಮತ್ತಷ್ಟು ಮಹಿಳೆಯರು ಪಾಲ್ಗೊಳ್ಳುವಂತೆ ಉತ್ತೇಜಿಸುವ ನೂತನ ಪ್ರಯತ್ನಕ್ಕೆ ಜಿಪಂ ಮುಂದಾಗಿದೆ.

ಅರ್ಧಕೂಲಿ, ಪೂರ್ತಿ ಸಂಬಳ

ನರೇಗಾ ಯೋಜನೆಯಲ್ಲಿ ಕೆಲಸ ಮಾಡುವ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಆಯಾ ದಿನದ ನಿಗದಿತ ಅವಧಿಯಲ್ಲಿ ಅರ್ಧ ಕೆಲಸ ನಿರ್ವಹಿಸಿದರೂ ಪೂರ್ತಿ ಕೂಲಿ ಕೈಸೇರಲಿದೆ. ಅದರಂತೆ ವಿಶೇಷಚೇತನರು ಮತ್ತು ಹಿರಿಯ ನಾಗರಿಕರಿಗೆ ಕೆಲಸದಲ್ಲಿ ಶೇ.50 ರಷ್ಟು ರಿಯಾಯಿತಿ ಘೋಷಿಸಿರುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಗರ್ಭಿಣಿಯರು ಹಾಗೂ ಬಾಣಂತಿಯರ ರಿಯಾಯಿತಿ ನೀಡಿದೆ.

ನರೇಗಾ ಕೆಲಸ ಮಾಡುವ 6 ತಿಂಗಳು ತುಂಬಿದ ಗರ್ಭಿಣಿಯರಿಗೆ ಮಗುವಿನ ಜನನದವರೆಗೆ ಹಾಗೂ ಬಾಣಂತಿಯರಿಗೆ ಮಗುವಿನ ಜನನದ ನಂತರದ 6 ತಿಂಗಳವರೆಗೆ ನಿಗದಿತ ಕೂಲಿ ಪಡೆಯಲು ಕೆಲಸದಲ್ಲಿ ಶೇ.50 ರಷ್ಟು ರಿಯಾಯತಿ ಸೌಲಭ್ಯ ನೀಡುತ್ತಿರುವುದು ವಿಶೇಷ.

----

ಕೋಟ್...

ಮಹಿಳಾ ಸಬಲೀಕರಣದ ಜತೆಗೆ ನರೇಗಾದಡಿ ಮಹಿಳಾ ಕೂಲಿಕಾರರ ಪಾಲ್ಗೊಳ್ಳುವಿಕೆಯನ್ನು ಶೇ.60ಕ್ಕೆ ಹೆಚ್ಚಿಸುವ ಉದ್ದೇಶದಿಂದ ಸ್ತ್ರೀ ಚೇತನಾ ಅಭಿಯಾನ ಎಂಬ ಮಹಿಳಾ ಸ್ನೇಹಿ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಅಭಿಯಾನದಲ್ಲಿ ಭಾಗವಹಿಸಿ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು. ಅರ್ಹ ಮಹಿಳೆಯರು ಯೋಜನೆ ಸದುಪಯೋಗಪಡಿಸಿಕೊಳ್ಳುವ ಮೂಲಕ ಮಹಿಳಾ ಸಬಲೀಕರಣಕ್ಕೆ ಕೈ ಜೋಡಿಸಬೇಕು.

- ಎಸ್. ಯುಕೇಶ್ ಕುಮಾರ್, ಸಿಇಒ, ಮೈಸೂರು ಜಿಪಂ

----

ಗ್ರಾಮೀಣ ಭಾಗದಲ್ಲಿ ಮಹಿಳೆಯರನ್ನು ಹೊರಗೆ ಕಳುಹಿಸಲು ಹಿಂಜರಿಯುತ್ತಾರೆ. ಅಂತಹವರಿಗೆ ಮಹಿಳೆಯರು ತಾವು ಇರುವಲ್ಲಿಯೇ ಬದುಕು ರೂಪಿಸಿಕೊಳ್ಳಲು ನರೇಗಾ ಸ್ತ್ರೀ ಚೇತನ ಅಭಿಯಾನ ಮಹಿಳಾ ಸ್ನೇಹಿಯಾಗಿದೆ. ಈ ಯೋಜನೆಯನ್ನು ಮಹಿಳೆಯರು ಸದ್ಬಳಕೆ ಮಾಡಿಕೊಳ್ಳಬೇಕು.

- ಡಾ.ಎಂ. ಕೃಷ್ಣರಾಜು, ಉಪ ಕಾರ್ಯದರ್ಶಿ, ಮೈಸೂರು ಜಿಪಂ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ