ಚತುಷ್ಪಥ ಕಾಮಗಾರಿಗೆ ಸಾವಿರಕ್ಕೂ ಹೆಚ್ಚು ಪಾರಂಪರಿಕ ಮರಗಳು ಬಲಿ । ಮತ್ತೆ ಹಸಿರು ಚಿಗುರಿಸುವ ಪ್ರಯತ್ನ
ಕನ್ನಡಪ್ರಭ ವಾರ್ತೆ ಕಾರ್ಕಳ
ಕಾರ್ಕಳ ತಾಲೂಕಿನಲ್ಲಿ ಮುಂಗಾರು ಚುರುಕಾಗಿದ್ದು, ಎಲ್ಲೆಡೆ ಹಸಿರು ಹೊಳೆಯುತ್ತಿದೆ. ಆದರೆ ಈ ಹಸಿರಿನ ಮಧ್ಯೆ ಮರಗಳ ಕಡಿತದ ಚಟುವಟಿಕೆಗಳು ಕೆಲವೆಡೆ ಅತಿಯಾಗಿದ್ದು, ಪರಿಸರ ಪ್ರೇಮಿಗಳನ್ನು ಚಿಂತೆಗೆ ಗುರಿಯಾಗಿಸುತ್ತಿವೆ. ಇಂತಹ ಸಂದರ್ಭದಲ್ಲಿಯೇ ಮಾಳ ಗ್ರಾಮದ ಆರತಿ ಅಶೋಕ್ ನೇತೃತ್ವದ ಗ್ರಾಮಸ್ಥರ ತಂಡ ಪರಿಸರ ಉಳಿವಿಗೆ ವಿಶಿಷ್ಟ ಪ್ರಯತ್ನ ಮಾಡುತ್ತಿದೆ.ಇಲಾಖೆಯ ಸಹಕಾರ: ಕಾರ್ಕಳದ ಸಾಮಾಜಿಕ ಅರಣ್ಯ ಇಲಾಖೆ ಸಹಕಾರದೊಂದಿಗೆ ಗ್ರಾಮಸ್ಥರು ಶ್ರಮದಾನದಲ್ಲಿ ತೊಡಗಿದ್ದು, 150ಕ್ಕೂ ಹೆಚ್ಚು ಸಸಿಗಳನ್ನು ನೆಡುವ ಉದ್ದೇಶದೊಂದಿಗೆ ಕಾರ್ಯಾರಂಭವಾಗಿದೆ. ಅರಣ್ಯ ಇಲಾಖೆಯ ಸಸ್ಯಕ್ಷೇತ್ರ, ಕೂಡುಬೆಟ್ಟುನಿಂದ ಗುಣಮಟ್ಟದ ಸಸಿಗಳನ್ನು ಆರಿಸಿ ತರಲಾಗುತ್ತಿದ್ದು, ಸಾರ್ವಜನಿಕ ಸ್ಥಳದಲ್ಲಿ ನೆಡುವ ಕಾರ್ಯ ಪ್ರಗತಿಯಲ್ಲಿದೆ.ನರೆಗಾ ಬಳಕೆ: ಈ ಯೋಜನೆಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೆಗಾ) ಯ ಅನುದಾನ ಸಮರ್ಪಕವಾಗಿ ಉಪಯೋಗಿಸಲಾಗುತ್ತಿದೆ. ಯೋಜನೆಯಡಿ ಸ್ಥಳೀಯರೇ ಈ ಕಾರ್ಯದಲ್ಲಿ ಭಾಗಿಯಾಗಿದ್ದು, ಇದರಿಂದ ಗ್ರಾಮಸ್ಥರಿಗೆ ಉದ್ಯೋಗವೂ ದೊರಕಿದೆ.
.................ಮಾಳದಿಂದ ಕಾರ್ಕಳ ಕಡೆಗೆ ಹಾದು ಹೋದುವ ರಾಷ್ಟ್ರೀಯ ಹೆದ್ದಾರಿ 169 ಎ ಚತುಷ್ಪತ ಕಾಮಗಾರಿ ಸಮಯದಲ್ಲಿ ಸಾವಿರಕ್ಕೂ ಹೆಚ್ಚು ಪಾರಂಪರಿಕ ಮರಗಳು ಬಲಿಯಾಗಿದ್ದವು. ಕೆಲವು ಮರಗಳನ್ನು ಸ್ಥಳಾಂತರಿಸಿ ಬದುಕಿಸಲಾಗಿದೆ. ಆದರೆ ಈ ಬಾರಿ ಅರಣ್ಯ ಇಲಾಖೆ ಸಹಾಯದಿಂದ ಗಿಡಗಳನ್ನು ನೆಟ್ಟು ಗ್ರಾಮಾಭಿವೃದ್ದಿಗೆ ಸಹಕಾರ ನೀಡುತಿದ್ದೆವೆ. ಈ ಗಿಡಗಳನ್ನು ನೆಡಲು ಹಾಗು ಪೋಷಿಸಲು 443 ಮಾನವ ದಿನಗಳನ್ನು ನಿಗದಿಪಡಿಸಿದೆ. ಅದಕ್ಕಾಗಿ 2 ಲಕ್ಷ ಏಳು ಸಾವಿರ ರು. ಹಣವನ್ನು ಇಲಾಖೆ ಮೀಸಲಿಟ್ಟಿದೆ.
-ಆರತಿ ಅಶೋಕ್, ಸಾಮಾಜಿಕ ಕಾರ್ಯಕರ್ತರು....................ಗಿಡಗಳನ್ನು ನೆಡಲು ಸರ್ಕಾರ ಪ್ರೋತ್ಸಾಹ ನೀಡುತ್ತದೆ. ಸರ್ಕಾರದ ಅನುದಾನ ಬಳಸಿಕೊಂಡು ಗಿಡಗಳನ್ನು ನೆಟ್ಟು ಪೋಷಣೆ ಯನ್ನು ಮಾಡಬೇಕು. ಅದಕ್ಕೆ ನರೆಗಾ ಯೋಜನೆಯು ಸಹಕಾರ ನೀಡುವ ಮೂಲಕ ಸ್ಥಳೀಯರಿಗೆ ಉದ್ಯೋಗ ನೀಡಲಾಗುತ್ತದೆ.
-ರವೀಂದ್ರ ಆಚಾರ್ಯ, ವಲಯ ಅರಣ್ಯಾಧಿಕಾರಿ, ಸಾಮಾಜಿಕ ಅರಣ್ಯ ಕಾರ್ಕಳ.