ಎಚ್‌.ಕೆ. ಪಾಟೀಲ ಸಿಎಂಗೆ ಪತ್ರ ಬರೆದರೆ ತಪ್ಪೇನು?: ಶಿವಾನಂದ ಪಾಟೀಲ

KannadaprabhaNewsNetwork |  
Published : Jun 22, 2025, 11:48 PM IST
ಶಿವಾನಂದ ಪಾಟೀಲ | Kannada Prabha

ಸಾರಾಂಶ

ಸಿಎಂಗೆ ಸಚಿವರು ಪತ್ರ ಬರೆಯುವುದರಲ್ಲಿ ತಪ್ಪೇನಿದೆ? ಬರೆಯಲಿ. ಈ ಕುರಿತು ಸಿಎಂ ತನಿಖೆ ನಡೆಸಲಿ. ತಪ್ಪಿದ್ದವರ ಮೇಲೆ ಕ್ರಮವಾಗುತ್ತದೆ ಎಂದಷ್ಟೇ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಚುಟುಕಾಗಿ ಉತ್ತರಿಸಿದರು.

ರಾಣಿಬೆನ್ನೂರು: ಅಕ್ರಮ ಗಣಿಗಾರಿಕೆ ಪ್ರಕರಣಗಳ ಕುರಿತು ಸಚಿವ ಎಚ್.ಕೆ. ಪಾಟೀಲ ಅವರು ಸಿಎಂಗೆ ತನಿಖೆ ಮಾಡಿ ಎಂದು ಪತ್ರ ಬರೆದಿದ್ದಾರೆ. ಹಾಗೆ ಪತ್ರ ಬರೆಯುವುದರಲ್ಲಿ ತಪ್ಪೇನಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಪ್ರಶ್ನಿಸಿದರು.ತಾಲೂಕಿನ ಹುಲಿಹಳ್ಳಿಯ ಎಪಿಎಂಸಿ ಆವರಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪತ್ರ ಬರೆಯುವುದರಲ್ಲಿ ತಪ್ಪೇನಿದೆ? ಬರೆಯಲಿ. ಈ ಕುರಿತು ಸಿಎಂ ತನಿಖೆ ನಡೆಸಲಿ. ತಪ್ಪಿದ್ದವರ ಮೇಲೆ ಕ್ರಮವಾಗುತ್ತದೆ ಎಂದಷ್ಟೇ ಚುಟುಕಾಗಿ ಉತ್ತರಿಸಿದರು.ಇದೇ ವೇಳೆ ಬಿ.ಆರ್. ಪಾಟೀಲ್ ಆಡಿಯೋ ವೈರಲ್ ಬಗ್ಗೆ ಮಾತನಾಡಿ, ಈ ಕುರಿತು ಈಗಾಗಲೇ ಬಿ.ಆರ್. ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ವಸತಿ ಇಲಾಖೆ, ಮನೆಗಳ ಹಂಚಿಕೆ ವಿಷಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದಿದ್ದಾರೆ. ಹೆಚ್ಚಿನ ಕ್ರಮ ಏನಾಗಬೇಕೋ ಅದನ್ನು ಸಿಎಂ ಸಿದ್ದರಾಮಯ್ಯ ಕೈಗೊಳ್ಳುತ್ತಾರೆ ಎಂದರು. ತಾಲೂಕಲ್ಲಿ ಕಳಪೆ ಬಿತ್ತನೆ ಬೀಜ ಮಾರಾಟದ ಕುರಿತು ಪ್ರತಿಕ್ರಿಯಿಸಿ, ಈಗಾಗಲೇ ನಾಲ್ಕು ಅಂಗಡಿಗಳ ಮೇಲೆ ಕ್ರಮ ಕೈಗೊಂಡಿದ್ದೇವೆ. ಅವುಗಳ ಮೇಲೆ ಕ್ರಿಮಿನಲ್ ಕೇಸ್ ಬುಕ್ ಮಾಡಿದ್ದೇವೆ. ರಾಣಿಬೆನ್ನೂರು ತಾಲೂಕು ಬೀಜೋತ್ಪಾದನೆಯ ಕೇಂದ್ರವಾಗಿದ್ದು, ಇದೀಗ ಕಳಪೆ ಬಿತ್ತನೆ ಬೀಜ ಕೇಂದ್ರವಾಗುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಅವರು, ಈ ಕುರಿತಂತೆ ಜಿಲ್ಲಾಧಿಕಾರಿಗೆ, ಕೃಷಿ ಅಧಿಕಾರಿಗೆ ಕಟ್ಟಾಜ್ಞೆ ಮಾಡಿದ್ದೇನೆ. ಹಾವೇರಿ ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಿಸಿದ ಸೋಯಾಬಿನ್ ಕಳಪೆಯಾಗಿವೆ. ಈ ಕುರಿತಂತೆ ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತೇವೆ. ರೈತರ ಬಿತ್ತನೆ ಬೀಜ ಖರೀದಿಸಿದರೆ ಅಡುಗೆ ಎಣ್ಣೆ ಕಡ್ಡಾಯ ಖರೀದಿ ಮಾಡಬೇಕು ಎಂದು ಒತ್ತಾಯ ಮಾಡಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ರೈತ ಆತ್ಮಹತ್ಯೆಯಲ್ಲಿ ಹಾವೇರಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಇದಕ್ಕೆ ತಾವು ಯಾವ ಕ್ರಮ ಕೈಗೊಳ್ಳುತ್ತೀರಿ ಎಂದು ಪ್ರಶ್ನೆಗೆ ಗರಂ ಆದ ಸಚಿವರು, ಮಾಧ್ಯಮದವರು ಕಾಂಟ್ರವರ್ಸಿ ಮಾಡಬಾರದು. ನಾನು ಯಾವತ್ತೂ ರೈತರ ಜತೆ ಇರುತ್ತೇನೆ. ಆಕಸ್ಮಿಕವಾದ ಸಣ್ಣ ಘಟನೆಗಳನ್ನು ಸಹ ರೈತ ಆತ್ಮಹತ್ಯೆ ಎಂದು ಬಿಂಬಿಸಲಾಗುತ್ತದೆ. ನಾನು ಬರುವುದಕ್ಕಿಂತ ಮೊದಲೇ ಜಿಲ್ಲೆಯಲ್ಲಿ ರೈತ ಆತ್ಮಹತ್ಯೆ ಪ್ರಕರಣಗಳು ಹೆಚ್ಚಿದ್ದವು. ಮಾಧ್ಯಮವದರು ಸಹ ಇದರ ಬಗ್ಗೆ ಸರಿಯಾದ ವರದಿ ಮಾಡಬೇಕು. ನಾನೂ ಈ ವಿಷಯದಲ್ಲಿ ತಲೆತಗ್ಗಿಸುವಂತಾಗಿದೆ. ಈ ಕುರಿತಂತೆ ಸಿಎಂ ರಿಪೋರ್ಟ್‌ಗಳ ಮೇಲೆ ರಿವ್ಯೂ ಮಾಡಿದ್ದಾರೆ. ರಿಪೋರ್ಟ್ ಸಲ್ಲಿಸುವಾಗ ಏನು ತಪ್ಪಾಗುತ್ತಿದೆ, ಅದರ ಬಗ್ಗೆ ಪರಿಶೀಲನೆ ಮಾಡುವುದಾಗಿ ತಿಳಿಸಿದರು.ಸಿಆರ್‌ಪಿಎಫ್ ಪೊಲೀಸ್ ಶವವಾಗಿ ಪತ್ತೆ

ಶಿಗ್ಗಾಂವಿ: ಪಟ್ಟಣದ ಹೊರವಲಯದ ಫಿನಿಕ್ಸ್ ಶಾಲೆಯ ಹತ್ತಿರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸಿಆರ್‌ಪಿಎಫ್ ಪೊಲೀಸ್ ಸಿಬ್ಬಂದಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ.ಹಾಸನ ಜಿಲ್ಲೆಯ ಅರಿಸೀಕೆರೆ ತಾಲೂಕಿನ ತಾಳನಕೊಪ್ಪಲು ಗ್ರಾಮದ ಸಿಆರ್‌ಪಿಎಫ್ ಪೊಲೀಸ್ ತಾರೇಶ ಎನ್.ಬಿ. (50 ) ಸಾವಿಗೀಡಾದವರು.ಭಾನುವಾರ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಇಟ್ಟಿಗೆಗಳ ಹಿಂಭಾಗದಲ್ಲಿ ಶವ ಪತ್ತೆಯಾಗಿದೆ. ಶವದ ಪಕ್ಕದಲ್ಲಿ ಸಿಕ್ಕಿರುವ ಗುರುತಿನ ಚೀಟಿಯಿಂದ ಅವರನ್ನು ಗುರುತಿಸಲಾಗಿದೆ. ಸ್ಥಳಕ್ಕೆ ಎಫ್‌ಎಸ್‌ಎಲ್ ಅಧಿಕಾರಿಗಳು, ಶಿಗ್ಗಾಂವಿ ಠಾಣಾ ಪೊಲೀಸ್ ಅಧಿಕಾರಿಗಳು ಆಗಮಿಸಿ ತನಿಖೆ ಆರಂಭಿಸಿದ್ದು, ಅವರ ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ. ಅವರ ಆಗಮನದ ನಂತರ ಹೆಚ್ಚಿನ ವಿಷಯಗಳು ತಿಳಿಯಲಿವೆ.ಈ ಕುರಿತು ಹೆಚ್ಚುವರಿ ಎಸ್ಪಿ ಎಲ್.ಎನ್. ಶಿರಕೋಳ ಮಾತನಾಡಿ, ಮೃತ ಸಿಆರ್‌ಪಿಎಫ್ ಸಿಬ್ಬಂದಿ ಆಂಧ್ರಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದು, ರಜೆ ಮೇರೆಗೆ ರಾಜ್ಯಕ್ಕೆ ಆಗಮಿಸಿದ್ದರು ಎಂಬ ಮಾಹಿತಿ ಇದೆ. ಸಾವಿನ ಕುರಿತು ಅಸ್ವಾಭಾವಿಕ ಸಾವು ಎಂದು ಪರಿಗಣಿಸಿದ್ದು, ಅವರ ಕುಟುಂಬಸ್ಥರಿಂದ ಮಾಹಿತಿ ಸಂಗ್ರಹಿಸಿ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ