ಡಂಬಳ: ನರೇಗಾ ಎಂಜಿನಿಯರ್ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಾಂದಾರ ಹೊಳೆತ್ತುವ ಕೆಲಸಕ್ಕೆ ಹೋಗಿದ್ದ ಕೂಲಿ ಕಾರ್ಮಿಕರು ವಾಪಸ್ ಬಂದು ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟಿಸಿದ ಪ್ರಸಂಗ ಡಂಬಳದಲ್ಲಿ ನಡೆದಿದೆ.
ಎಂಜಿನಿಯರ್ ಎಚ್ಚರಿಕೆಯಿಂದ ಆಕ್ರೋಶಗೊಂಡ ಕಾರ್ಮಿಕರು ಬಾಂದಾರ ಹೊಳೆತ್ತುವುದನ್ನು ಬಿಟ್ಟು ತಕ್ಷಣ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟಿಸಿದರು. ಹಲವು ಮಹಿಳೆಯರು ಹಾಗೂ ಪುರುಷರು ನಮಗೆ ಕಡ್ಡಾಯವಾಗಿ ನೂರುದಿನ ಕೆಲಸ ನೀಡಬೇಕು. ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಇಲ್ಲದ ನರೇಗಾ ನಿಯಮಾವಳಿ ನಮ್ಮ ಗ್ರಾಮದಲ್ಲಿ ಮಾತ್ರ ಯಾಕೆ ಎಂದು ಯಲ್ಲವ್ವ ಹೊಂಬಳ, ಅಕ್ಕಮ್ಮ ಬೇವಿನಮರದ, ಗೌವಿಸಿದ್ದವ್ವ ತಳವಾರ, ಯಮನೂರಸಾಬ ನದಾಫ ಸೇರಿದಂತೆ ಎಲ್ಲರೂ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ವರ್ಷಕ್ಕೆ ನಮಗೆ ಕಡ್ಡಾಯವಾಗಿ ನೂರು ದಿನ ನರೇಗಾ ಕೆಲಸ ನೀಡಬೇಕು. ನರೇಗಾ ಎಂಜಿನಿಯರ್ ನೀವು ಎಷ್ಟು ಪ್ರಮಾಣದಲ್ಲಿ ಕೆಲಸ ಮಾಡಿರುತ್ತೀರಿ ಅದನ್ನು ಅಳತೆ ಮಾಡಿ ಅಷ್ಟೇ ಕೂಲಿ ಪಾವತಿ ಮಾಡುತ್ತೇವೆ ಎನ್ನುತ್ತಿದ್ದಾರೆ. ಎಷ್ಟೋ ಕಾಮಗಾರಿಗಳನ್ನು ಜೆಸಿಬಿ ಹಚ್ಚಿ ಮಾಡಿಸಿದ್ದಾರೆ. ನಾವು ಜೆಸಿಬಿ ಯಂತ್ರವಲ್ಲ ಮನುಷ್ಯರಿದ್ದೇವೆ ಎಂದು ಎಚ್ಚರಿಸಿದರು.ನಂತರ ಪ್ರತಿಭಟನಾ ನಿರತರೊಂದಿಗೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಕೆಲ ಗ್ರಾಮ ಪಂಚಾಯಿತಿ ಸದಸ್ಯರು ತಿಳಿ ಹೇಳಿದ ನಂತರ ಪ್ರತಿಭಟನೆ ಹಿಂಪಡೆದರು. ಈ ಸಮಯದಲ್ಲಿ ಲಕ್ಷ್ಮವ್ವ ಮಲಿಯಪ್ಪನವರ, ನಾಗಪ್ಪ ತಳವಾರ, ಸೋಮಪ್ಪ ತಳಗೇರಿ, ಮುತ್ತಪ್ಪ ಮೇವುಂಡಿ, ಬೀಬಿಜಾನ ನದಾಫ, ಕಾಶಿಮಸಾಬ ನದಾಫ, ವಿಶಾಲಮ್ಮ ಹಡಪದ, ಬೀಬಿಜಾನ ಕಂಪ್ಲಿಮನಿ, ರೇಣುಕಾ ಆಲೂರ, ಹುಲಿಗೆವ್ವ ದೊಡ್ಡಮನಿ, ಮೈಲೆವ್ವ ಹರಿಜನ, ರವಿ ಆಲೂರ, ಮಲ್ಲಪ್ಪ ಕೊಳ್ಳಾರ, ಜಗದೀಶ ತಳವಾರ ಭಾಗವಹಿಸಿದ್ದರು.