ನರೇಗಾ ಕಾರ್ಮಿಕರು ಆರೋಗ್ಯ ಕಾಳಜಿ ವಹಿಸಲಿ: ಪ್ರದೀಪ್‌ ಗಣೇಶ್ಕರ್

KannadaprabhaNewsNetwork |  
Published : May 16, 2025, 01:46 AM IST
ನರೇಗಾ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲಾಯಿತು. | Kannada Prabha

ಸಾರಾಂಶ

ನರೇಗಾ ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ನಡೆಯುತ್ತಿದ್ದು, ಕಾರ್ಮಿಕರ ಆರೋಗ್ಯಕ್ಕಾಗಿ ವಿಶೇಷ ಕಾಳಜಿ ವಹಿಸಲಾಗಿದೆ.

ರಟ್ಟೀಹಳ್ಳಿ: ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವ ಪ್ರತಿ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡುವುದು ನಮ್ಮ ಗುರಿಯಾಗಿದ್ದು, ಎಲ್ಲರೂ ಬೃಹತ್ ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಹಾಯಕ ನಿರ್ದೇಶಕ ಪ್ರದೀಪ್ ಗಣೇಶ್ಕರ್ ತಿಳಿಸಿದರು.

ತಾಲೂಕಿನ ಚಿಕ್ಕಕಬ್ಬಾರ ಗ್ರಾಮದಲ್ಲಿ ಜಿಪಂ, ತಾಪಂ, ಹಿರೇಕಬ್ಬಾರದ ಗ್ರಾಪಂ ಸಹಯೋಗದಲ್ಲಿ ನರೇಗಾ ಕಾಮಗಾರಿ ಸ್ಥಳದಲ್ಲಿ ಕಾರ್ಮಿಕರಿಗಾಗಿ ಆಯೋಜಿಸಿದ್ದ ದುಡಿಯೋಣ ಬಾ ಹಾಗೂ ಬೃಹತ್ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಆರೋಗ್ಯವೇ ಭಾಗ್ಯ ಎಂಬ ಹಿರಿಯರ ಮಾತಿದೆ. ಕೆಲಸದ ಜತೆಗೆ ಆರೋಗ್ಯದ ಬಗ್ಗೆಯು ವಿಶೇಷ ಕಾಳಜಿ ವಹಿಸಬೇಕು ಎಂದು ಕಾರ್ಮಿಕರಿಗೆ ಸಲಹೆ ನೀಡಿದರು. ನರೇಗಾ ಯೋಜನೆಯಡಿ ತಾಲೂಕಿನ 19 ಗ್ರಾಪಂನಲ್ಲಿ ಸಾವಿರಾರು ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರತಿ ಕಾರ್ಮಿಕರ ಆರೋಗ್ಯ ತಪಾಸಣೆಗೆ ಕ್ರಮ ವಹಿಸಲಾಗುತ್ತಿದೆ. ಹಂತ- ಹಂತವಾಗಿ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ ಮಾಡುತ್ತಿದ್ದೇವೆ. ನರೇಗಾ ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ನಡೆಯುತ್ತಿದ್ದು, ತಮ್ಮೆಲ್ಲರ ಆರೋಗ್ಯಕ್ಕಾಗಿ ವಿಶೇಷ ಕಾಳಜಿ ವಹಿಸಲಾಗಿದೆ. ಇನ್ನೂ ನಿರಂತರವಾಗಿ ನೂರು ದಿನದ ಕೆಲಸ ನೀಡಲು ಈಗಾಗಲೇ ತಾಲೂಕಿನಾದ್ಯಂತ ಕೆರೆ, ಹಳ್ಳ, ನೀರುಗಾಲುವೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದೇವೆ. ಏಪ್ರಿಲ್ ತಿಂಗಳ ಮಾನವ ದಿನಗಳ ಗುರಿ ಸಾಧಿಸಿದ್ದು, ಈ ತಿಂಗಳು ಗುರಿ ಸಾಧಿಸಲ್ಲಿದ್ದೇವೆ. ಹೀಗಾಗಿ ಕಾರ್ಮಿಕರು ನೂರು ದಿನ ಕೆಲಸ ಪೂರ್ಣಗೊಳ್ಳುವವರೆಗೂ ನಿರಂತರವಾಗಿ ಕೆಲಸಕ್ಕೆ ಬರಬೇಕು ಎಂದರು. ಐಇಸಿ ಸಂಯೋಜಕ ಕುಮಾರಯ್ಯ ಚಿಕ್ಕಮಠ ಮಾತನಾಡಿದರು. ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಪ್ರಸ್ತುತ ಒಂದು ದಿನಕ್ಕೆ ₹370 ಕೂಲಿ ನೀಡಲಾಗುತ್ತಿದೆ. ಬೇಸಿಗೆಯ ಸಂದರ್ಭದಲ್ಲಿ ಸಾವಿರಾರು ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆಯ ಕೆಲಸ ನೆರವಾಗಿದೆ. ಮಹಿಳೆಯರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸಕ್ಕೆ ಬನ್ನಿ ಎಂದರು. ಕಾರ್ಮಿಕರ ಆರೋಗ್ಯ ತಪಾಸಣೆ: ಚಿಕ್ಕಬ್ಬಾರ ಗ್ರಾಮದ ಕೆರೆ ಅಭಿವೃದ್ಧಿ ಕೆಲಸದಲ್ಲಿ ತೊಡಗಿಕೊಂಡಿರುವ ನೂರಕ್ಕೂ ಹೆಚ್ಚು ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಲಾಯಿತು. ವಿಶೇಷವಾಗಿ ವಯೋವೃದ್ಧರಿಗೆ ಪ್ರಥಮ ಆದ್ಯತೆ ನೀಡಿ ಬಿಪಿ ಮತ್ತು ಶುಗರ್ ಪರೀಕ್ಷೆ ಮಾಡಲಾಯಿತು. ಆರೋಗ್ಯದಲ್ಲಿ ವ್ಯತ್ಯಾಸವಿದ್ದ ಕಾರ್ಮಿಕರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಲು ತಿಳಿಸಲಾಯಿತು. ಇನ್ನೂ ಸಿಎಚ್‌ಒ ಹೇಮಾ ಅವರು ಆರೋಗ್ಯದ ಕುರಿತು ಹಲವು ಸಲಹೆಗಳನ್ನು ನೀಡಿದರು.ಟಿಡಿಇಒ ನಿಂಗರಾಜ್ ಮಕರಿ, ಬಿಎಫ್‌ಟಿ ಪ್ರವೀಣ್ , ಜಿಕೆಎಂ ಗೀತಾ ಎಂ., ಆಶಾ ಕಾರ್ಯಕರ್ತೆಯರಾದ ಬಸಮ್ಮ, ಕೊಟ್ರಮ್ಮ ಸೇರಿದಂತೆ ಕಾಯಕಬಂಧು ಹುಸೇನಸಾಬ್, ಶೋಭಾ, ಮುಬಿನಾ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''