ಗ್ರಾಮೀಣರ ಕಷ್ಟ, ಸುಖ ಅರಿಯಲು ಎನ್‌ಎಸ್ಎಸ್ ಶಿಬಿರ ಸಹಕಾರಿ: ಪ್ರಶಾಂತಶೆಟ್ಟಿ

KannadaprabhaNewsNetwork | Published : Apr 6, 2025 1:45 AM

ಸಾರಾಂಶ

ನರಸಿಂಹರಾಜಪುರ, ಎನ್‌.ಎಸ್.ಎಸ್. ಶಿಬಿರದಲ್ಲಿ ಭಾಗವಹಿಸುವುದರಿಂದ ಗ್ರಾಮೀಣ ಭಾಗದ ಜನರ ಜೀವನ ಶೈಲಿ, ಕಷ್ಟ-ಸುಖ ಅರಿತುಕೊಳ್ಳಲು ಸಹಕಾರಿಯಾಗಲಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್ ಶೆಟ್ಟಿ ಹೇಳಿದರು.

ಅಳೇಹಳ್ಳಿ ಸರ್ಕಾರಿ ಶಾಲೆಯಲ್ಲಿ ಎನ್‌.ಎಸ್.ಎಸ್. ಶಿಬಿರ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಎನ್‌.ಎಸ್.ಎಸ್.ಶಿಬಿರದಲ್ಲಿ ಭಾಗವಹಿಸುವುದರಿಂದ ಗ್ರಾಮೀಣ ಭಾಗದ ಜನರ ಜೀವನ ಶೈಲಿ, ಕಷ್ಟ-ಸುಖ ಅರಿತುಕೊಳ್ಳಲು ಸಹಕಾರಿಯಾಗಲಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್ ಶೆಟ್ಟಿ ಹೇಳಿದರು.ಶುಕ್ರವಾರ ತಾಲೂಕಿನ ಅಳೇಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆರಂಭವಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ವಾರ್ಷಿಕ ಶಿಬಿರ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿ ಗಳು ಕಾಲೇಜಿನ ನಾಲ್ಕು ಗೋಡೆ ಮಧ್ಯೆ ಕಲಿಯುವ ಪಠ್ಯ ಚಟುವಟಿಕೆ ಜೊತೆಗೆ ಕ್ರೀಡೆ, ಸಾಂಸ್ಕೃತಿ ಚಟುವಟಿಕೆ, ಎನ್ ಎಸ್ ಎಸ್ ಶಿಬಿರಗಳಿಂದ ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಸದೃಢತೆಗೆ ಹಾಗೂ ಪ್ರಾಪಂಚಿಕ ಜ್ಞಾನ ಸಂಪಾದನೆಗೆ ಸಹಕಾರಿ ಎಂದರು.

ಎನ್.ಎಸ್.ಎಸ್ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ, ಸಹೋದರತ್ವ, ಭಾತೃತ್ವ ಬೆಳೆಸುತ್ತದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಪೂರಕವಾಗುವ ನಿಟ್ಟಿನಲ್ಲಿ ಶಾಸಕ ಟಿ.ಡಿ.ರಾಜೇಗೌಡರು ಕಾಲೇಜಿನ ಆವರಣದಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಾಣಕ್ಕೆ ಕೆಪಿಟಿಸಿಎಲ್ ನ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ ₹1 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದಾರೆ. ರಸ್ತೆ ಅಭಿವೃದ್ಧಿಗೆ ₹20 ಲಕ್ಷ ಅನುದಾನ ನೀಡಿದ್ದಾರೆ. ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಅವರು ವಿದ್ಯುತ್ ದೀಪ ಅಳವಡಿಕೆ, ಇಂಟರ್ ಲಾಕ್ ಹಾಗೂ ಚರಂಡಿ ನಿರ್ಮಾಣಕ್ಕೆ ಪ್ರವಾಸೋದ್ಯಮ ನಿಗಮದ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ ₹27.94 ಲಕ್ಷ ಅನುದಾನ ನೀಡಿದ್ದು ಕಾಮಗಾರಿ ಶೀಘ್ರ ಆರಂಭವಾಗಲಿದೆ. ವಿದ್ಯಾರ್ಥಿಗಳು ಸೌಲಭ್ಯ ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು ಎಂದರು.

ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಎ.ಜೆ.ಮೇರಿ ಮಾತನಾಡಿ, ಯುವಜನಾಂಗವನ್ನು ರಾಷ್ಟ್ರನಿರ್ಮಾಣ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕೆಂಬ ಮಹಾತ್ಮ ಗಾಂಧೀಜಿ ಆಶಯದಂತೆ ವಿ.ಕೆ.ಆರ್.ವಿ ರಾವ್ ರಾಷ್ಟ್ರೀಯ ಸೇವಾ ಯೋಜನೆ ಸ್ಥಾಪಿಸಿದರು. ಪ್ರಸ್ತುತ 30 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಸದಸ್ಯರಾಗಿದ್ದು, ಅವರಲ್ಲಿ ಸೇವಾ ಮನೋಭಾವ ಬೆಳೆಸುವುದು, ಶಿಸ್ತು, ಭಾತೃತ್ವ, ಜಾತ್ಯಾತೀತತೆ, ಸಹೋದರತ್ವ, ನಾಯಕತ್ವಗುಣ ಬೆಳೆಸುವುದೇ ಉದ್ದೇಶ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಧನಂಜಯ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ನನಗಲ್ಲ ನಿನಗೆ ಎಂಬ ಧ್ಯೇಯಹೊಂದಿದೆ. ಎನ್‌.ಎಸ್. ಎಸ್. ಶಿಬಿರದಲ್ಲಿ ಶ್ರಮದಾನದ ಮೂಲಕ ಸೇವೆ ಮಾಡುವುದು ಕಲಿಸುವುದು. ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ವಿಷಯಗಳ ಬಗ್ಗೆ ಸಂವಾದ, ಚರ್ಚೆ ಮೂಲಕ ಜ್ಞಾನವಂತರನ್ನಾಗಿ ಮಾಡುವುದೇ ಗುರಿಯಾಗಿದೆ. ಪ್ರಸ್ತುತ ಖಾಸಗಿ ಶಾಲಾ, ಕಾಲೇಜುಗಳಿಂತ ಉತ್ತಮ ಶಿಕ್ಷಣ ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಲಭಿಸುತ್ತಿದ್ದು ವಿದ್ಯಾರ್ಥಿಗಳು ಇದರ ಉಪಯೋಗಪಡೆಯಬೇಕು ಎಂದರು.

ಶಾಲೆಯ ಮುಖ್ಯ ಶಿಕ್ಷಕ ಎಸ್.ಕೆ.ಕೆಂಚಪ್ಪ, ಹೊಸೂರು ರಂಗನಾಥ ಸ್ವಾಮಿ ದೇವಾಲಯ ಅಧ್ಯಕ್ಷ ನಾಗರಾಜಗೌಡ, ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಉಮೇಶ, ಶಾಲೆ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀನಾಥ್, ಸದಸ್ಯ ರತನ್ ಗೌಡ, ಗ್ರಾಮ ಅರಣ್ಯ ಸಮಿತಿಯ ರವೀಂದ್ರ, ಮಾವಿನಮನೆ ಗ್ರಾಮದ ಮುಖಂಡ ನಾಗರಾಜಗೌಡ, ಸಮಾಜಶಾಸ್ತ್ರ ಉಪನ್ಯಾಸಕ ಎ.ಪಿ.ಚಂದ್ರಪ್ಪ ಇದ್ದರು.

Share this article