ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸದೃಢ ಸಶಕ್ತ ಭಾರತ ನಿಮಾರ್ಣದಲ್ಲಿ ಯುವಕರು ಆರೋಗ್ಯ ಮುಖ್ಯವಾಗಿದ್ದು, ಶಿಬಿರ ಯುವಕರಲ್ಲಿ ಆರೋಗ್ಯಕರ ವ್ಯಕ್ತಿತ್ವ ರೂಪಿಸುತ್ತದೆ ಎಂದು ಕನ್ನಡ ಉಪನ್ಯಾಸಕ ಡಾ.ಚಂದ್ರಶೇಖರ ಕಾಳನ್ನವರ ಹೇಳಿದರು.ವಿದ್ಯಾಗಿರಿಯ ಬಿವಿವಿ ಸಂಘದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳಡಿಯಲ್ಲಿ ಮುಚಖಂಡಿ ಗ್ರಾಮದಲ್ಲಿ ನಡೆಯುತ್ತಿರುವ ವಾರ್ಷಿಕ ವಿಶೇಷ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ ಯುವಕರ ವ್ಯಕ್ತಿತ್ವದಲ್ಲಿ ಆರೋಗ್ಯ ಅರಿವು ಕುರಿತು ಉಪನ್ಯಾಸ ನೀಡಿ ಮಾತನಾಡಿದ ಅವರು, ನಮ್ಮ ಯುವಕರು ಪಾರಂಪರಿಕ ಆಹಾರ ಪದ್ಧತಿಯ ಜೀವನ ಶೈಲಿಯಿಂದ ದೂರವಾಗುತ್ತಿದ್ದು, ಯಾಂತ್ರಿಕ ಜೀವನ ಶೈಲಿಗೆ ಮಾರು ಹೋಗುವುದು ನಿಲ್ಲಿಸಬೇಕು. ನಮ್ಮ ನೆಲಮೂಲ ಸಂಸ್ಕೃತಿಯ ಆಹಾರ ಪದ್ಧತಿಯನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವ ಕಟ್ಟಿಕೊಳ್ಳಬೇಕೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪ್ರಾಚಾರ್ಯ ಎನ್.ಎಚ್. ಬೇವಿನಹಳ್ಳಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಶುದ್ಧ ಗಾಳಿ, ಶುದ್ಧ ನೀರು, ಶುದ್ಧ ಆಹಾರ ಪಡೆಯುವ ವಿಧಾನ ಅರಿತುಕೊಂಡು ತಮ್ಮ ಆರೋಗ್ಯಕರ ಬದುಕು ರೂಪಿಸಿಕೊಳ್ಳಬೇಕೆಂದರು.ಆಯುರ್ವೇದಿಕ್ ತಜ್ಞರಾದ ಡಾ.ಜಯಶ್ರೀ ಗಿರಸಾಗರ ಮಾತನಾಡಿ, ವಿದ್ಯಾರ್ಥಿ ಸಮೂಹದವರಿಗೆ ಆರೋಗ್ಯದಲ್ಲಿ ಆಯುರ್ವೇದಿಕ್ ಮಹತ್ವ ಮತ್ತು ಬಳಕೆ ಕುರಿತು ಮಹತ್ವದ ಕುರಿತು ತಿಳಿಸಿ, ನಮ್ಮ ಆರೋಗ್ಯಕ್ಕೆ ದೋಷವಾದ ವಾತ, ಪಿತ್ತ, ಕಫ ಇವುಗಳನ್ನು ಆಯುರ್ವೇದಿಕ್ ಔಷಧಿಗಳಿಂದ ಗುಣಪಡಿಸಿಕೊಂಡರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಪ್ರೊ.ಸಂಗಮೇಶ ಬ್ಯಾಳಿ ಮಾತನಾಡಿ, ಎನ್.ಎಸ್.ಎಸ್ ಶಿಬಿರಗಳು ನಮ್ಮ ವಿದ್ಯಾರ್ಥಿಗಳಿಗೆ ಗ್ರಾಮೀಣ ಪರಿಸರದ ಸಾಂಸ್ಕೃತಿಕ, ಜಾನಪದ, ಕಲೆಗಳ ಅನುಭವ ಅರಿತುಕೊಳ್ಳುವ ಉತ್ತಮ ಸುವರ್ಣಾವಕಾಶ ಒದಗಿಸುತ್ತದೆ. ವಿದ್ಯಾರ್ಥಿಗಳು ಉತ್ತಮ ನಾಯಕರಾಗಲು ಇಂತಹ ಶಿಬಿರಗಳು ಸಹಕಾರಿಯಾಗುತ್ತವೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಸ್.ಎಂ. ಗಾಂವಕರ ಮಾತನಾಡಿ, ಶಿಬಿರದಿಂದ ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಆರೋಗ್ಯದ ಅರಿವು ಪಡೆಯುವುದು ಮುಖ್ಯವಾಗಿದೆ. ಉತ್ತಮ ವ್ಯಕ್ತಿತ್ವಕ್ಕೆ ಆರೋಗಕರ ಚಿಂತನೆ ಅಳವಡಿಸಿಕೊಳ್ಳಬೇಕು. ಇದರಿಂದ ತಮ್ಮ ಮುಂದಿನ ಬದುಕು ಸುಂದರವಾಗಿ ವ್ಯಕ್ತತ್ವ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಎನ್.ಎಸ್.ಎಸ್ ನೋಡಲ್ ಅಧಿಕಾರಿಗಳಾದ ಡಾ.ಮಾರುತಿ ಪಾಟೋಳಿ, ಕಾರ್ಯಕ್ರಮಾಧಿಕಾರಿ ಎಂ.ಎಚ್. ಕಟಗೇರಿ ವೇದಿಕೆ ಮೇಲಿದ್ದರು. ಉಪನ್ಯಾಸ ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕರು, ಹಾಗೂ ಎನ್.ಎಸ್. ಎಸ್. ಎರಡು ಘಟಕಗಳ ಸ್ವಯಂ ಸೇವಕ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು
ಎನ್.ಎಸ್.ಎಸ್. ಘಟಕಗಳ ಸ್ವಯಂ ಸೇವಕರು ಪ್ರಾರ್ಥಿಸಿದರು. ಎನ್.ಎಸ್.ಎಸ್. ಘಟಕದ ಕಾರ್ಯಕ್ರಮಾಧಿಕಾರಿ ಎಂ.ಎಚ್. ಕಟಗೇರಿ ಸ್ವಾಗತಿಸಿದರು, ಎನ್.ಎಸ್.ಎಸ್ ನೋಡಲ್ ಅಧಿಕಾರಿ ಡಾ.ಮಾರುತಿ ಪಾಟೋಳಿ ಅವರು ವಂದಿಸಿದರು. ನಂತರ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.