ಹಾನಗಲ್ಲ: ಎನ್‌ಎಸ್‌ಎಸ್ ಶಿಬಿರಗಳು ಯುವ ವಿದ್ಯಾರ್ಥಿಗಳ ಜೀವನ ವಿಧಾನವನ್ನು ಬದಲಾಯಿಸುತ್ತದೆ. ಬದುಕು ಹಸನುಗೊಳಿಸುವ ಸತ್ಯ ಸೂತ್ರ ಅನುಭವಗಳನ್ನು ಪರಿಚಯಿಸಿ, ಶಿಸ್ತುಬದ್ಧ ಬದುಕಿಗೆ ಮಾರ್ಗದರ್ಶನ ಮಾಡುತ್ತದೆ ಎಂದು ಸಿ.ಜಿ. ಬೆಲ್ಲದ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಯಮುನಾ ಕೋಣೆಸರ ತಿಳಿಸಿದರು. ಹಾನಗಲ್ಲಿನ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯ ತಾಲೂಕಿನ ಆಡೂರ ಗ್ರಾಮದ ಮಾಲತೇಶ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ ಏಳು ದಿನಗಳ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರಾಚಾರ್ಯ ಡಾ.ಎನ್. ಸದಾಶಿವಪ್ಪ, ಪ್ರತಿಯೊಬ್ಬ ಶಿಬಿರಾರ್ಥಿಗಳು ಜೀವನದ ಮೌಲ್ಯಗಳನ್ನು ಅರ್ಥೈಸಿಕೊಂಡು, ಶ್ರಮದ ಅರಿವು ಮೂಡಿಸಿಕೊಳ್ಳಬೇಕು. ಎನ್.ಎಸ್.ಎಸ್. ಧ್ಯೇಯೋದ್ದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾದರೆ ಜೀವನವೇ ಸುಂದರಗೊಳ್ಳುತ್ತದೆ. ಯುವ ಪೀಳಿಗೆ ಈಗ ದೇಶದ ಬಗೆಗೆ ಯೋಚಿಸಬೇಕಾಗಿದೆ. ನಾಳಿನ ಅವಕಾಶಗಳು ಅಪಾಯಗಳ ಬಗೆಗೆ ಎಚ್ಚರಿಕೆವಹಿಸಬೇಕಾಗಿದೆ. ಒಟ್ಟಾಗಿ ಬಾಳಿ ಬದುಕುವ ಹಾಗೂ ರಾಷ್ಟ್ರಕ್ಕಾಗಿ ನಮ್ಮ ಕೊಡುಗೆ ನೀಡುವ ಹಂಬಲ, ಇಚ್ಛಾಶಕ್ತಿ ನಿಮ್ಮದಾಗಿರಲಿ ಎಂದರು.
ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಬಿ. ಪೂಜಾರ, ಮಾಲತೇಶ ದೇವಸ್ಥಾನದ ಅಧ್ಯಕ್ಷ ಚಂದ್ರಶೇಖರ ನಿಕ್ಕಂ, ಪುರಸಭೆ ಮಾಜಿ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ಡಾ. ಬಿ.ಎಸ್. ರುದ್ರೇಶ್, ದರ್ಶನ ವಡ್ಡರ, ಸಹನಾ ಸುತಾರ ಪಾಲ್ಗೊಂಡಿದ್ದರು. ಎನ್.ಎಸ್.ಎಸ್. ಅಧಿಕಾರಿ ಡಾ. ವಿಶ್ವನಾಥ ಬೊಂದಾಡೆ ಸ್ವಾಗತಿಸಿದರು. ಶಿಬಿರಾರ್ಥಿ ಶೃತಿ ರಾಥೋಡ ಕಾರ್ಯಕ್ರಮ ನಿರೂಪಿಸಿದರು. ಕಾವೇರಿ ಕೋಟಿಹಾಳ ಕಾರ್ಯಕ್ರಮ ನಿರ್ವಹಿಸಿದರು.