ನಗರದಲ್ಲಿ ಫೆ. 27ರಿಂದ ಮಾ.4ರ ವರೆಗೆ ಅಡ್ಡಸೋಗಿನ ಮೆರವಣಿಗೆ, ಓಕುಳಿ ಬಂಡಿ, ನಗೆ ಹಬ್ಬದಂತಹ ವಿಶೇಷ ಕಾರ್ಯಕ್ರಮಗಳು ಜರುಗಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋಳಿ ಹಬ್ಬವನ್ನು ಯಶಸ್ವಿಗೊಳಿಸಬೇಕೆಂದು ಹೋಳಿ ಆಚರಣಾ ಸಮಿತಿ ಅಧ್ಯಕ್ಷ ವೀರಪ್ಪ ಹೇರೂರ ಹೇಳಿದರು.

ಹಾವೇರಿ: ವರ್ಷದಿಂದ ವರ್ಷಕ್ಕೆ ಜನಪ್ರಿಯಗೊಳ್ಳುತ್ತಿರುವ ಹಾವೇರಿ ಹೋಳಿ ಹಬ್ಬವನ್ನು ಈ ಸಲ ಮತ್ತಷ್ಟು ಆಕರ್ಷಣೀಯಗೊಳಿಸಲು ಉದ್ದೇಶಿಸಲಾಗಿದೆ. ಈ ನಿಮಿತ್ತ ನಗರದಲ್ಲಿ ಫೆ. 27ರಿಂದ ಮಾ.4ರ ವರೆಗೆ ಅಡ್ಡಸೋಗಿನ ಮೆರವಣಿಗೆ, ಓಕುಳಿ ಬಂಡಿ, ನಗೆ ಹಬ್ಬದಂತಹ ವಿಶೇಷ ಕಾರ್ಯಕ್ರಮಗಳು ಜರುಗಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋಳಿ ಹಬ್ಬವನ್ನು ಯಶಸ್ವಿಗೊಳಿಸಬೇಕೆಂದು ಹೋಳಿ ಆಚರಣಾ ಸಮಿತಿ ಅಧ್ಯಕ್ಷ ವೀರಪ್ಪ ಹೇರೂರ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿಯ ರತಿಕಾಮದೇವ ಸಾಂಸ್ಕೃತಿಕ ಸಂಘ ಹಾಗೂ ವಿವಿಧ ಕಾಮನ ಸಮಿತಿಗಳ ಸಹಯೋಗದೊಂದಿಗೆ ನಾಲ್ಕೈದು ದಿನಗಳ ಕಾಲ ವಿಶೇಷ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಫೆ.27ರಂದು ಸಂಜೆ ಕಾಮನ ಪ್ರತಿಷ್ಠಾಪನೆ ನಡೆಯಲಿದೆ. ಫೆ.28ರಂದು ಸಂಜೆ 7ಕ್ಕೆ ನಗರದ ಹಾನಗಲ್ಲ ರಸ್ತೆಯಲ್ಲಿರುವ ಎಪಿಎಂಸಿ ಮಾರುಕಟ್ಟೆಯಲ್ಲಿ ಮಂದ್ಯಾಗ ಮಲ್ಲಿ ಸಂದ್ಯಾಗ ಗಿಲ್ಲಿ... ಎಂಬ ಬೆಳದಿಂಗಳ ನಗೆ ಹಬ್ಬ ಜಿಲ್ಲಾ ಕಲಾ ಬಳಗದ ಕೆ.ಆರ್ ಹಿರೇಮಠ ಮತ್ತು ತಂಡದವರಿಂದ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಭಾಗವಹಿಸಿ ಚಾಲನೆ ನೀಡಲಿದ್ದು, ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ವಿಜಯಕುಮಾರ ಚಿನ್ನಿಕಟ್ಟಿ ಮಾತನಾಡಿ, ಮಾ. 2ರಂದು ರಾತ್ರಿ 7ಕ್ಕೆ ನಗರದ ಸುಭಾಸ್ ಸರ್ಕಲ್‌ನಲ್ಲಿ ಜೀವಂತ ಕಾಮ ರತಿ ನಗಿಸುವ ಸ್ಪರ್ಧೆ ಜರುಗಲಿದೆ. ನಂತರ ಸಂಗೀತಾ ಕಮತಗಿ ಇವರಿಂದ ಜೋಗತಿ ನೃತ್ಯ ಕೂಡ ನಡೆಯಲಿದ್ದು, ಈ ಕಾರ್ಯಕ್ರಮವನ್ನು ಮಾಜಿ ಶಾಸಕ ನೆಹರೂ ಓಲೇಕಾರ ಉದ್ಘಾಟಿಸಲಿದ್ದಾರೆ. ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಾ.3ರಂದು ಬೆಳಗ್ಗೆ ಗೌಡರು, ತಹಸೀಲ್ದಾರರು, ಊರಿನ ಪ್ರಮುಖರೊಂದಿಗೆ ಹಳೆ ಚಾವಡಿ ಬಳಿ ಚಾವಡಿ ಕಾಮಣ್ಣನ ಪ್ರತಿಷ್ಠಾಪನೆ ನಡೆಯಲಿದ್ದು, ಸಂಜೆ 7ಕ್ಕೆ ನಗರದ ಎಂ.ಜಿ. ರಸ್ತೆಯ ಪ್ಯಾಟಿ ಬಸವಣ್ಣ ದೇವರ ದೇವಸ್ಥಾನದಲ್ಲಿ ಅಡ್ಡ ಸೋಗಿನ ಸ್ಪರ್ಧೆಗೆ ಚಾಲನೆ ನೀಡಲಾಗುತ್ತದೆ ಎಂದರು.ಮಾ.4ರಂದು ಪ್ರತಿವರ್ಷದ ಸಂಪ್ರದಾಯದಂತೆ ಕಾಮದಹನ ಮಾಡಲಾಗುವುದು. ಮಧ್ಯಾಹ್ನ 12ಕ್ಕೆ ಮುನ್ಸಿಪಲ್ ಹೈಸ್ಕೂಲ್ ರಸ್ತೆಯ ಶ್ರೀ ಆಂಜನೇಯ ದೇವಸ್ಥಾನ ಮುಂಭಾಗದಲ್ಲಿ (ಸುವರ್ಣ ಬ್ಯಾಂಕ್ ಎದುರಿಗೆ) ಚೆಡ್ಡಿದೋಸ್ತ ಬಳಗದಿಂದ ರೇನ್ ಡ್ಯಾನ್ಸ್ ಕಾರ್ಯಕ್ರಮ ನಡೆಯಲಿದೆ. ಆದ್ದರಿಂದ ನಗರದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು.

ಹೋಳಿ ಆಚರಣಾ ಸಮಿತಿಯ ಶಿವರಾಜ ಮತ್ತಿಹಳ್ಳಿ, ಬಸವರಾಜ ಜಾಬೀನ, ವಿಜಯಕುಮಾರ ಕೂಡ್ಲಪ್ಪನವರ, ಶಿವಲಿಂಗಪ್ಪ ಕಲ್ಯಾಣಿ, ಕಿರಣ ಕೊಳ್ಳಿö, ಹನುಮಂತಪ್ಪ ತಳವಾರ, ಶಂಭುಲಿಂಗ ಹತ್ತಿ, ಕರಬಸಪ್ಪ ಹಲಗಣ್ಣನವರ ಇದ್ದರು. ಇಂದಿನ ಮೊಬೈಲ್ ಯುಗದಲ್ಲಿ ನಶಿಸಿ ಹೋಗುತ್ತಿರುವ ಸೋಗಿನ ಬಂಡಿ ಮೆರವಣಿಗೆ ಉಳಿಸಬೇಕಿದೆ. ಪ್ರತಿದಿನವೂ ಸಂಜೆ ನಗರದ ಆಯಾ ಭಾಗದಲ್ಲಿ ಸೋಗಿನ ಬಂಡಿ ಮೆರವಣಿಗೆ ನಡೆಯಲಿದೆ. ಸೋಗನ್ನು ಹಾಕುವ ಸೋಗಿನ ಬಂಡಿಗಳಿಗೆ 5 ಸಾವಿರ ರು., ಅಡ್ಡ ಸೋಗು ಹಾಕುವ ಪ್ರತಿ ಕಲಾವಿದರಿಗೆ 500 ರು. ಹಾಗೂ ಹೋಳಿ ರಂಗಪಂಚಮಿಯಂದು ಹೂಡುವ ಓಕಳಿ ಬಂಡಿಗೆ 3 ಸಾವಿರ ರು. ಪ್ರೋತ್ಸಾಹಧನ ನೀಡಲಾಗುವುದು ಎಂದು ಹಾವೇರಿ ಹೋಳಿ ಆಚರಣೆ ಸಮಿತಿ ಉಪಾಧ್ಯಕ್ಷ ವಿಜಯಕುಮಾರ ಚಿನ್ನಿಕಟ್ಟಿ ಹೇಳಿದರು.