ವಿದ್ಯಾರ್ಥಿಗಳೇ ಭವಿಷ್ಯದ ನಾಗರಿಕರಾಗಿದ್ದು, ಪ್ಲಾಸ್ಟಿಕ್ ಪಿಡುಗನ್ನು ನಿರ್ಮೂಲನೆ ಮಾಡಲು ಅವರಿಂದಲೇ ಶುರು ಮಾಡಬೇಕಿದೆ. ಇಡೀ ವಿಶ್ವದಲ್ಲೇ ಇಂದು ಪ್ಲಾಸ್ಟಿಕ್ ನಿರ್ಮೂಲನೆ ಮಾಡುವ ಯತ್ನಗಳು ನಡೆದಿವೆ.
ಧಾರವಾಡ:
ಇಲ್ಲಿಯ ಸನ್ಮತಿ ಮಾರ್ಗದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಪಾಸಿಬಲ್ ಟುಗೆದರ್ ಸಂಸ್ಥೆ ಪ್ರಾರಂಭಿಸಿದ ಮೆಗಾ ಪರಿಸರ ಮಿಷನ್ ಕಾರ್ಯಕ್ರಮಕ್ಕೆ ಸ್ವರ್ಣ ಗ್ರೂಪ್ ಆಪ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ನೇತೃತ್ವದಲ್ಲಿ ಚಾಲನೆ ದೊರೆಯಿತು.ಅಂಗಡಿ ಮಾಲಿಕರಿಗೆ ಪೇಪರ್ ಚೀಲಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಾ. ಪ್ರಸಾದ, ಪರಿಸರ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ಅದರಲ್ಲಿ ವಿಫಲವಾಗಿರುವ ಕಾರಣದಿಂದಲೇ ಭೂಕುಸಿತ ಹಾಗೂ ಪ್ರವಾಹದಂತಹ ಸ್ಥಿತಿಗಳನ್ನು ಎದುರಿಸುತ್ತಿದ್ದೇವೆ. ಪರಿಸರ ಉಳಿಸುವ ನಿಟ್ಟಿನಲ್ಲಿ ಪಾಸಿಬಲ್ ಟುಗೆದರ್ ಸಂಸ್ಥಾಪಕಿ ವಿಜಯಲಕ್ಷ್ಮಿ ಪೆರಿ ಅವರ ಪ್ರಯತ್ನ ಶ್ಲಾಘನೀಯ ಎಂದರು.
ವಿದ್ಯಾರ್ಥಿಗಳೇ ಭವಿಷ್ಯದ ನಾಗರಿಕರಾಗಿದ್ದು, ಪ್ಲಾಸ್ಟಿಕ್ ಪಿಡುಗನ್ನು ನಿರ್ಮೂಲನೆ ಮಾಡಲು ಅವರಿಂದಲೇ ಶುರು ಮಾಡಬೇಕಿದೆ. ಇಡೀ ವಿಶ್ವದಲ್ಲೇ ಇಂದು ಪ್ಲಾಸ್ಟಿಕ್ ನಿರ್ಮೂಲನೆ ಮಾಡುವ ಯತ್ನಗಳು ನಡೆದಿದ್ದು ಪರಿಸರ ಸ್ನೇಹಿ ಪರ್ಯಾಯ ಉತ್ತೇಜಿಸಲು ಡಾ. ಪ್ರಸಾದ ಸಲಹೆ ನೀಡಿದರು.ಕಾರ್ಮಿಕ ಸಚಿವ ಸಂತೋಷ ಲಾಡ್ ಮಾತನಾಡಿ, ಒಂದು ಬಾರಿ ಬಳಕೆ ಪ್ಲಾಸ್ಟಿಕ್ ಕವರ್‌ಗಳ ಬದಲಿಗೆ ಮಕ್ಕಳು ಮಾಡಿದ ಕಾಗದ ಚೀಲಗಳನ್ನು ಅಂಗಡಿಗಳಿಗೆ ಕೊಡುವುದು ಶ್ಲಾಘನೀಯ. ಇದೊಂದು ಜಾಗೃತಿ ಮಾತ್ರ ವಲ್ಲದೆ ಜನರಲ್ಲಿ ನಿಜವಾದ ಬದಲಾವಣೆ ತರುವ ಕಾರ್ಯಕ್ರಮ ಎಂದರು.
ಡಿಡಿಪಿಐ ಎಸ್.ಎಸ್. ಕೆಳದಿಮಠ, ಏಕಸ್ ಕಂಪನಿಯ ರವಿ ಗುತ್ತಲ, ಕೆಎಲ್‌ಇ ತಾಂತ್ರಿಕ ಕಾಲೇಜಿನ ಎಂ.ಆರ್. ಪಾಟೀಲ್ ಇದ್ದರು. ಪೇಪರ್ ಬ್ಯಾಗ್ ಮೇಕಿಂಗ್ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಪೇಪರ್ ಬ್ಯಾಗ್ ಸಂಗ್ರಹಿಸಿ ಮಕ್ಕಳು ಹಾಗೂ ಪಾಲಕರಲ್ಲಿ ಜಾಗೃತಿ ಮೂಡಿಸಲು ಪ್ಲಾಸ್ಟಿಕ್ ಬಳಕೆ ಕುರಿತಂತೆ ವಿವಿಧ ಸ್ಪರ್ಧೆ ಏರ್ಪಡಿಸಿತ್ತು. ವಿಜೇತ ಶಾಲೆಗಳಿಗೆ, ಶಿಕ್ಷಕರಿಗೆ ಸ್ಮರಣಿಕೆ ವಿತರಿಸಲಾಯಿತು.