ಕನ್ನಡಪ್ರಭ ವಾರ್ತೆ ಬೆಂಗಳೂರು
ಮದ್ಯದ ಅಮಲಿನಲ್ಲಿ ಮೂತ್ರ ವಿಸರ್ಜನೆಯ ಕಾರಣಕ್ಕೆ ಅಪರಿಚಿತನ ಜತೆ ಉಂಟಾದ ಜಗಳದಲ್ಲಿ ಅಡುಗೆ ಭಟ್ಟನೊಬ್ಬ ಹತ್ಯೆಯಾದ ಘಟನೆ ಲಗ್ಗೆರೆ ಸಮೀಪ ಬುಧವಾರ ರಾತ್ರಿ ನಡೆದಿದೆ.ಕಮಲಾನಗರದ ನಿವಾಸಿ ಕುಮಾರ್ (43) ಮೃತ ದುರ್ದೈವಿ. ಈ ಹತ್ಯೆ ಕೃತ್ಯ ಎಸಗಿದ ಬಳಿಕ ತಪ್ಪಿಸಿಕೊಂಡಿರುವ ಅಪರಿಚಿತನ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಲಗ್ಗೆರೆ ಸಮೀಪ ಬುಧವಾರ ರಾತ್ರಿ ಮದ್ಯ ಸೇವಿಸಿ ಕುಮಾರ್ ಮನೆಗೆ ಮರಳುವಾಗ ಮಾರ್ಗ ಮಧ್ಯೆ ಘಟನೆ ನಡೆದಿದೆ.
ತನ್ನ ಕುಟುಂಬದ ಜತೆ ಕುಣಿಗಲ್ ತಾಲೂಕಿನಲ್ಲಿ ಕುಮಾರ್ ನೆಲೆಸಿದ್ದರು. ಅಡುಗೆ ಕೆಲಸ ಮಾಡಿಕೊಂಡು ಅವರು ಜೀವನ ಸಾಗಿಸುತ್ತಿದ್ದರು. ಕೆಲಸದ ನಿಮಿತ್ತ ನಗರದಿಂದ ಹೊರಗೆ ಹೋಗಿದ್ದ ಆತ, ರಾತ್ರಿ ಮರಳಿದ ಬಳಿಕ ಸೋದರ ಸಂಬಂಧಿಗಳ ಜತೆ ಮದ್ಯ ಸೇವಿಸಿ ತೆರಳಿದ್ದರು.ಮಹಾಲಕ್ಷ್ಮೀ ಲೇಔಟ್ ಬಳಿ ಮದ್ಯ ಸೇವಿಸಿದ ಬಳಿಕ ಲಗ್ಗೆರೆಗೆ ಮಾಂಸದೂಟಕ್ಕೆ ಅವರು ಹೋಗಿದ್ದರು. ಆಗ ತನ್ನ ಸಂಬಂಧಿಯನ್ನು ಮನೆಗೆ ಬಿಡಲು ಬೈಕ್‌ನಲ್ಲಿ ಕುಮಾರ್ ಚಿಕ್ಕಪ್ಪ ನರಸಿಂಹಮೂರ್ತಿ ಬರುವವರಿದ್ದರು. ಹಾಗಾಗಿ ಲಗ್ಗೆರೆ ಸೇತುವೆಯಿಂದ ರಸ್ತೆಯಲ್ಲಿ ನಡೆದುಕೊಂಡು ಕುಮಾರ್ ಹೋಗುತ್ತಿದ್ದ. ಆಗ ಆತನನ್ನು ಅಡ್ಡಗಟ್ಟಿದ ಅಪರಿಚಿತ ವ್ಯಕ್ತಿ, ಯಾಕೋ ರಸ್ತೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತೀಯಾ ಎಂದು ಗಲಾಟೆ ಮಾಡಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರು ಕೈ-ಕೈ ಮಿಲಾಯಿಸಿದ್ದಾರೆ.
ಅಷ್ಟರಲ್ಲಿ ಅಲ್ಲಿಗೆ ಬಂದ ಮೃತನ ಚಿಕ್ಕಪ್ಪ ನರಸಿಂಹ ಮೂರ್ತಿ ತಕ್ಷಣವೇ ಜಗಳದ ಮಧ್ಯೆ ಪ್ರವೇಶಿಸಿ ಶಾಂತಗೊಳಿಸಿದ್ದಾರೆ. ಬಳಿಕ ಕುಮಾರ್ ಅವರನ್ನು ಬೈಕ್‌ನಲ್ಲಿ ಕುರಿಸಿಕೊಂಡು ಹೋಗಲು ಅವರು ಮುಂದಾಗಿದ್ದಾರೆ. ಆದರೆ ಬೈಕ್‌ನ ಹಿಂಬದಿಯಲ್ಲಿದ್ದ ಕುಳಿತಿದ್ದ ಆತನನ್ನು ಶರ್ಟ್ ಹಿಡಿದು ಹಿಂದಕ್ಕೆ ಜೋರಾಗಿ ಅಪರಿಚಿತ ವ್ಯಕ್ತಿ ಎಳೆದಿದ್ದಾನೆ. ಇದರಿಂದ ಪಾನಮತ್ತನಾಗಿದ್ದ ಕುಮಾರ್ ಕೆಳಗೆ ಬಿದ್ದ ಪರಿಣಾಮ ತಲೆಗೆ ಗಂಭೀರ ಪೆಟ್ಟಾಗಿ ರಕ್ತ ಹೆಪ್ಪುಗಟ್ಟಿ ಆತ ಮೃತಪಟ್ಟಿದ್ದಾನೆ.
