ಶೈಕ್ಷಣಿಕ ಅಭಿವೃದ್ಧಿಗೆ ಎರಡು ಲಕ್ಷ ರು. ದತ್ತಿನಿಧಿ ಸ್ಥಾಪನೆ

KannadaprabhaNewsNetwork |  
Published : May 14, 2025, 01:46 AM IST
53 | Kannada Prabha

ಸಾರಾಂಶ

ಕಾಲೇಜಿನಲ್ಲಿ ಪ್ರಸ್ತುತ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ, ಸ್ನಾತಕೋತ್ತರ ಮತ್ತು ಸಂಶೋಧಾನಾ ವಿದ್ಯಾರ್ಥಿಗಳಾಗಿ ವ್ಯಾಸಂಗ ಮಾಡುತ್ತಿದ್ದಾರೆ

ಕನ್ನಡಪ್ರಭ ವಾರ್ತೆ ಹುಣಸೂರು

ಪಟ್ಟಣದ ಡಿ. ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ತಮ್ಮ ಹೆಸರಿನಲ್ಲಿ ಎರಡು ಲಕ್ಷ ರು.ಗಳ ದತ್ತಿನಿಧಿ ಸ್ಥಾಪಿಸುವುದಾಗಿ ಶಾಸಕ ಜಿ.ಡಿ. ಹರೀಶ್‌ ಗೌಡ ಘೋಷಿಸಿದರು.

ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ 2024-25ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ಸ್ಕೌಟ್ಸ್ ಅಂಡ್ ಗೈಡ್ಸ್, ರೆಡ್‌ ಕ್ರಾಸ್ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಲೇಜಿನಲ್ಲಿ ಪ್ರಸ್ತುತ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ, ಸ್ನಾತಕೋತ್ತರ ಮತ್ತು ಸಂಶೋಧಾನಾ ವಿದ್ಯಾರ್ಥಿಗಳಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜಿನಲ್ಲಿ ಕ್ಯಾಂಟೀನ್ ಸ್ಥಾಪನೆ ಈಗಾಗಲೇ 10 ಲಕ್ಷ ರು. ಗಳ ಅನುದಾನ ಶಾಸಕರ ನಿಧಿಯಿಂದ ನೀಡಿದ್ದೇನೆ. ನೀರಿನ ವ್ಯವಸ್ಥೆ ಮತ್ತು ವಾಹನ ನಿಲುಗಡೆ ವ್ಯವಸ್ಥೆಗಾಗಿ ಕ್ರಮವಹಿಸುತ್ತೇನೆ. ಕಾಲೇಜು ಆವರಣದಲ್ಲಿರುವ ಮಹಿಳಾ ಹಾಸ್ಟೆಲ್‌ ನ್ನು ನಿರ್ವಹಿಸಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಹಸ್ತಾಂತರಲು ಕ್ರಮಕೈಗೊಳ್ಳಲಾಗಿದೆ. ಇದೆಲ್ಲದರ ನಡುವೆ ಪದವಿ ಮತ್ತು ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಪ್ರತಿ ವರ್ಷ ಅತಿ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪದವಿ ವಿಭಾಗ ಮತ್ತು ಸ್ನಾತಕೋತ್ತರ ವಿಭಾಗಕ್ಕೆ ತಲಾ ಒಂದು ಲಕ್ಷ ರು. ಗಳ ಮೊತ್ತದಡಿ ಜಿ.ಡಿ. ಹರೀಶ್‌ ಗೌಡ ದತ್ತಿನಿಧಿ ಸ್ಥಾಪಿಸಲಿದ್ದೇನೆ ಎಂದು ತಿಳಿಸಿದರು.

ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಿ

ಪದವಿಯ ನಂತರ ನಿಜಜೀವನ ನಿಮ್ಮ ಮುಂದೆ ನಿಲ್ಲುತ್ತದೆ. ಪೈಪೋಟಿಯ ಇಂದಿನ ಯುಗದಲ್ಲಿ ಅವಕಾಶಗಳು ಮನೆ ಬಾಗಿಲಿಗೆ ಬರುವುದಿಲ್ಲ. ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಿರಿ. ಸ್ವಾವಲಂಬಿಯಾಗಿ ಬದುಕುತ್ತೇನೆ. ನನ್ನ ಉದ್ಯೋಗ ನಾನೇ ಹುಡುಕಿಕೊಳ್ಳುತ್ತೇನೆಂಬ ನಿರ್ಧಾರ ಕೈಗೊಳ್ಳಿರಿ. ಉದ್ಯೋಗಕ್ಕಾಗಿ ಪಾಲಕರನ್ನು ಮತ್ತೊಬ್ಬರ ಮನೆಬಾಗಿಲನ್ನು ಎಡತಾಕುವಂತೆ ಮಾಡಬೇಡಿ. ಗುರಿ ಇದ್ದಲ್ಲಿ ಮಾತ್ರ ದಾರಿಕಾಣಲು ಸಾಧ್ಯ. ನಿಮ್ಮ ಜೀವನವನ್ನು ರೂಪಿಸಿಕೊಳ್ಳುವ ಶಕ್ತಿ ನಿಮ್ಮಲ್ಲಿದ ಎಂದು ಅವರು ಕಿವಿಮಾತು ಹೇಳಿದರು.

ಉಪನ್ಯಾಸಕ ನಾಗರಾಜು ಬೀಜಗನಹಳ್ಳಿ ಮಾತನಾಡಿ, ಜೀವನದ ಕಾಲಘಟ್ಟದಲ್ಲಿ ಸಂಭವಿಸುವ ದುರಂತ ಕಥೆಗಳೇ ನಿಮ್ಮ ಬಾಳಿನ ಮುಂದಿನ ಜೀವನದ ದಂತಕಥೆಗಳಾಗಲು ಸಾಧ್ಯ. ನಮ್ಮ ಎಲ್ಲ ಅನಾನುಕೂಲಗಳ ನಡುವೆಯೇ ಸಾಧನೆಯ ಹಾದಿಯನ್ನು ತುಳಿಯುವ ಸಕಾರಾತ್ಮಕ ಧೋರಣೆ ನಮ್ಮದಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಬಿ.ಸಿ. ಸುರೇಶ್ ಮಾತನಾಡಿ, ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಶಾಸಕ ಹರೀಶ್‌ ಗೌಡ ದೊಡ್ಡ ಮೊತ್ತದ ದತ್ತಿನಿಧಿ ಸ್ಥಾಪಿಸುವ ಮೂಲಕ ಯುವಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಆದರ್ಶಪ್ರಾಯರಾಗಿದ್ದಾರೆ ಎಂದು ತಿಳಿಸಿದರು.

ಕಾಲೇಜಿನ ವಿವಿಧ ಘಟಕಗಳ ಮೂಲಕ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್, ನಗಸಭಾ ಸದಸ್ಯ ದೊಡ್ಡಹೆಜ್ಜೂರು ರಮೇಶ್, ವಿವಿಧ ಘಟಕಗಳ ಸಂಚಾಲಕರಾದ ಡಾ.ಆರ್. ಉಮಾಕಾಂತ್, ಜಿ. ಭೋಜರಾಜ್, ಡಾ.ಎಂ.ವಿ. ಜಗದೀಶ್, ಐಕ್ಯೂಎಸಿ ಸಂಚಾಲಕ ಡಾ. ಬಸವರಾಜ, ಸಿ. ಕುಮಾರ್, ವಿ. ಸಂತೋಷ್, ಮಾದಪ್ಪ, ಕವಿತಾ ಆರ್. ಕಟ್ಟಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಮನೋಜ್, ಅರ್ಪಿತಾ, ಪುನೀತ್, ದರ್ಶನ್, ರುಚಿತ, ವಿದ್ಯಾರ್ಥಿಗಳು ಇದ್ದರು.

ವಿದ್ಯಾರ್ಥಿಗಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ