ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕುವೆಂಪು ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಿರಂತರವಾಗಿ ವಿದ್ಯಾರ್ಥಿ ವಿರೋಧಿ ನಡೆ ಅನುಸರಿಸುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯದ ಜತೆಗೆ ಚೆಲ್ಲಾಟವಾಡುತ್ತಿರುವ ವಿಶ್ವವಿದ್ಯಾಲಯದ ನಡೆಯನ್ನು ಖಂಡಿಸುವುದಾಗಿ ಪ್ರತಿಭಟನಾಕಾರರು ಹೇಳಿದ್ದಾರೆ. ಕುಲಪತಿಗಳು ಅಧಿಕಾರ ಸ್ವೀಕರಿಸಿದಾಗಿನಿಂದಲೂ ವಿಶ್ವವಿದ್ಯಾಲಯದಲ್ಲಿ ಅಧಿಕಾರಿ ವರ್ಗದವರ ಆಂತರಿಕ ಕಚ್ಚಾಟದಲ್ಲೇ ತೊಡಗಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಕಳೆದ 5 ತಿಂಗಳ ಹಿಂದೆ ಪರೀಕ್ಷೆ ಬರೆದಿದ್ದ 1, 3 ಮತ್ತು 5ನೇ ಸೆಮಿಸ್ಟರ್‌ಗಳ ಫಲಿತಾಂಶ ಪ್ರಕಟಿಸಿಲ್ಲ. ಇತ್ತೀಚೆಗೆ ನಡೆದ ಪರೀಕ್ಷೆಗಳ ಮೌಲ್ಯಮಾಪನವನ್ನು ಉಪನ್ಯಾಸಕರಿಗೆ ಮೌಲ್ಯಮಾಪನದ ಗೌರವಧನ ನೀಡದೇ ಇರುವುದರಿಂದ ಉಪನ್ಯಾಸಕರು ಮೌಲ್ಯಮಾಪನ ಬಹಿಷ್ಕರಿಸಿದ್ದಾರೆ ಎಂದರು.
ಅಲ್ಲದೇ 3 ವರ್ಷಗಳಿಂದ ಯಾವುದೇ ಪರೀಕ್ಷೆಗಳ ಅಂಕಪಟ್ಟಿಯನ್ನು ವಿತರಿಸದೇ ಅಂಕಪಟ್ಟಿಗಳನ್ನು ಮುದ್ರಿಸಲು ಟೆಂಡರ್ ಕರೆಯುವುದಾಗಿ ಹೇಳುತ್ತಲೇ ಬರಲಾಗುತ್ತಿದೆ. ಇದರಿಂದಾಗಿ ಪದವಿ ಪೂರೈಸಿದ ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸಕ್ಕೆ ಹೋಗಲು, ಉದ್ಯೋಗ ಕಂಡುಕೊಳ್ಳಲು ಆಗುತ್ತಿಲ್ಲ. ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಪಾಸಿಂಗ್ ಸರ್ಟಿಫಿಕೇಟ್ ಅಥವಾ ಪದವಿ ಪ್ರಮಾಣ ಪತ್ರ ನೀಡುತ್ತಿಲ್ಲ. ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ನೀಡುವಂತೆ ಜಿನ್ಯುಯೆನ್ ಸರ್ಟಿಫಿಕೇಟ್ ಕೊಡದೇ ಇರುವುದರಿಂದಾಗಿ ಕುವೆಂಪು ವಿವಿಯಲ್ಲಿ ವ್ಯಾಸಂಗ ಮಾಡಿದವರಿಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗ ಸಿಗುವುದು ಕಷ್ಟವಾಗುತ್ತಿದೆ. ವಿಶ್ವವಿದ್ಯಾಲಯದ ಆಂತರಿಕ ಕಚ್ಚಾಟದಿಂದಾಗಿ ಕಳೆದೆರಡು ವರ್ಷಗಳಿಂದ ಘಟಿಕೋತ್ಸವ ಸಮಾರಂಭ ಸಹ ಏರ್ಪಡಿಸದೇ ವಿವಿಯ ಮಾನ ಹರಾಜಿಗಿಡಲಾಗಿದೆ ಎಂದು ಆರೋಪಿಸಿದರು.ಕಳೆದ ಬಾರಿ ವಿವಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದ ಫಲಿತಾಂಶ ಸಾಕಷ್ಟು ಗೊಂದಲಕ್ಕೀಡುಮಾಡಿತ್ತು. ನೂರಾರು ವಿದ್ಯಾರ್ಥಿಗಳ ಫಲಿತಾಂಶ ಒಂದು ಬಾರಿ ಪಾಸ್ ಎಂದು ತೋರಿಸಿದ್ದರೆ ಮತ್ತೊಂದು ಬಾರಿ ಫೇಲ್ ಎಂದು ತೋರಿಸುತ್ತಿತ್ತು. ಇದರಿಂದಾಗಿ ವಿದ್ಯಾರ್ಥಿಗಳು ಆತಂಕಕ್ಕೊಳಗಾಗಿದ್ದಾರೆ.ಶುಲ್ಕದ ಹೆಸರಿನಲ್ಲಿ ಏಕಾಏಕಿ ಸಾವಿರಾರು ರುಪಾಯಿ ಪರೀಕ್ಷಾ ಶುಲ್ಕ, ಪ್ರವೇಶ ಶುಲ್ಕದ ಹೆಸರಿನಲ್ಲಿ ಬಡ ಮತ್ತು ಮದ್ಯಮ ವರ್ಗದ ವಿದ್ಯಾರ್ಥಿಗಳಿಂದ ಸುಲಿಗೆಗೆ ಇಳಿದಿರುವುದು ಖಂಡನೀಯ ಎಂದರು.
ಎನ್‌ಎಸ್‌ಯುಐನ ಜಿಲ್ಲಾಧ್ಯಕ್ಷ ವಿಜಯ್, ಕಾರ್ಯಾಧ್ಯಕ್ಷ ರವಿ ಕಟಿಕೆರೆ, ನಗರಾಧ್ಯಕ್ಷ ರವಿ, ಯುವ ಮುಖಂಡರಾದ ಮುರುಗೇಶ್, ,ಆದಿತ್ಯ ಸುಭಾನ್, ಚಂದ್ರೋಜಿ ರಾವ್, ವರುಣ್, ಅಭಿ, ಫರಾಜ್, ಸೃಜನ್, ಚೇತನ್, ಧನುಷ್, ಸೃಜನ್ ಲೋಹಿತ್, ಆಕಾಶ್, ಹಾಲಸ್ವಾಮಿ, ವಿಕಾಸ್ ಯೂಸುಫ್, ರಿಹಾನ್, ಸಾದ್ ಉಲ್ಲಾ, ಇಸ್ಮಾಯಿಲ್, ಅರ್ಮಾನ್, ರಯಾನ್, ಅಡೀಬ್, ರಿಜ್ವಾನ್, ಆಶಿಕ್ ಮತ್ತಿತರರು ಇದ್ದರು.