ಕಾಯಕ ತತ್ವದ ಮಹತ್ವ ಸಾರಿದ ನುಲಿಯ ಚಂದಯ್ಯ

KannadaprabhaNewsNetwork |  
Published : Aug 10, 2025, 01:30 AM IST
ಚಿತ್ರದುರ್ಗ ಸುದ್ದಿ | Kannada Prabha

ಸಾರಾಂಶ

ನುಲಿಯ ಚಂದಯ್ಯ ಜಯಂತಿಯಲ್ಲಿ ಕನ್ನಡ, ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ ಹೇಳಿಕೆ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕಾಯಕನಿಷ್ಠ ಯೋಗಿ ಶಿವಶರಣ ನುಲಿಯ ಚಂದಯ್ಯನವರು ಶ್ರೇಷ್ಠ ವಚನಕಾರರಾಗಿದ್ದು, ತಮ್ಮ ವಚನಗಳ ಮೂಲಕ ಕಾಯಕದ ಮಹತ್ವ ಸಾರಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ‘ನುಲಿಯ ಚಂದಯ್ಯ ಜಯಂತಿ’ ಆಚರಣೆ ಸಮಾರಂಭದಲ್ಲಿ ನುಲಿಯ ಚಂದಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಕಾಯಕ ಹಾಗೂ ದಾಸೋಹದ ಮೂಲಕ ಸಮಾಜಕ್ಕೆ ಬೆಳಕು ನೀಡಿದವರಲ್ಲಿ ನುಲಿಯ ಚಂದಯ್ಯರೂ ಒಬ್ಬರಾಗಿದ್ದು, ನುಲಿಯ ಚಂದಯ್ಯನವರು ಸುಮಾರು 48 ವಚನಗಳನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದು ಹೇಳಿದರು.

ನುಲಿಯ ಚಂದಯ್ಯನವರು ಚಿತ್ರದುರ್ಗ ಜಿಲ್ಲೆಯಲ್ಲಿ ಓಡಾಡಿದ ಕುರುಹುಗಳು, ಪುರಾವೆಗಳು ಲಭ್ಯವಿದ್ದು, ಸಮಾಜದ ಅಂಕುಡೊಂಕು ತಿದ್ದುವಲ್ಲಿ ಹಾಗೂ ಸಮಾಜ ಸುಧಾರಣೆಯಲ್ಲಿ ಅವರ ವಚನಗಳು ದಾರಿದೀಪವಾಗಿವೆ ಎಂದು ತಿಳಿಸಿದ ಅವರು, ತಳ ವರ್ಗಗಳು ಬಹಳ ಮುಖ್ಯವಾಗಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮುಖ್ಯವಾಹಿನಿಗೆ ಬರಬೇಕು ಎಂದು ಸಲಹೆ ನೀಡಿದರು.

ಆಕಾಶವಾಣಿಯ ಡಾ.ನವೀನ್ ಮಸ್ಕಲ್ ಉಪನ್ಯಾಸ ನೀಡಿ, ಕಾಯಕನಿಷ್ಠೆ ಹಾಗೂ ಪ್ರಾಮಾಣಿಕತೆಗೆ ದೊಡ್ಡ ಹೆಸರು ನುಲಿಯ ಚಂದಯ್ಯನವರು ಕೊರಮ ಸಮಾಜದ ಸಾಂಸ್ಕೃತಿಕ ಅಸ್ಮಿತೆಯ ಸಂಕೇತವಾಗಿ, ಆರಾಧಕರಾಗಿ ಜನಮನ್ನಣೆ ಪಡೆದಿದ್ದಾರೆ ಎಂದು ಹೇಳಿದರು.

ಗುರು, ಲಿಂಗ, ಜಂಗಮ ತತ್ವವನ್ನು ಜಗತ್ತಿಗೆ ಪಸರಿಸಿ, ನುಡಿದಂತೆ ನಡೆದ ವಚನಕಾರ ನುಲಿಯ ಚಂದಯ್ಯನವರು ಬಸವಣ್ಣನವರ ಕಾಯಕವೇ ಕೈಲಾಸ ಆಶಯವನ್ನು ಅಕ್ಷರಶಃ ತನ್ನ ಬದುಕಿನಲ್ಲಿ ಅನುಸರಿಸಿದ ನುಲಿಯ ಚಂದಯ್ಯನವರ ಬದುಕು ಇಡೀ ಸಮಾಜ ಹಾಗೂ ಜಗತ್ತಿಗೆ ಮಾದರಿ ಹಾಗೂ ಅನುಕರಣೀಯ. ಪ್ರತಿಯೊಬ್ಬ ವ್ಯಕ್ತಿಯೂ ಬದುಕಿನಲ್ಲಿ ಯಶಸ್ವಿ ಪಡೆಯಬೇಕಾದರೆ ಪ್ರಾಮಾಣಿಕವಾಗಿ ಮುನ್ನಲೆಗೆ ಬರಬೇಕಾದರೆ ಕಾಯಕನಿಷ್ಠೆ ಬಹಳ ಪ್ರಮುಖ ಪಾತ್ರವಹಿಸಲಿದೆ ಎಂದರು.

ಕೊರಮ ಸಮಾಜದ ಅಧ್ಯಕ್ಷ ಕೃಷ್ಣಪ್ಪ ಮಾತನಾಡಿ, 12ನೇ ಶತಮಾನದಲ್ಲಿ ಕಾಯಕಕ್ಕೆ ಒತ್ತು ನೀಡುವ ಮೂಲಕ ಕೊರಮ ಸಮುದಾಯದ ಸಾಂಸ್ಕೃತಿಕ ಪ್ರತಿನಿಧಿಯಾಗಿ ಕಾಯಕದ ಮಹತ್ವ ಸಾರಿದ ನುಲಿಯ ಚಂದಯ್ಯನವರು ಕಾಯಕದಲ್ಲಿಯೇ ದೇವರನ್ನು ಕಂಡ ಮಹಾಶರಣರಾಗಿದ್ದಾರೆ ಎಂದು ಹೇಳಿದರು.

ಜಿಲ್ಲಾಡಳಿತದ ವತಿಯಿಂದ ನುಲಿಯ ಚಂದಯ್ಯ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದ್ದು, ಸಮಾಜದ ವತಿಯಿಂದ ಇದೇ ಆ.22 ರಂದು ಚಿತ್ರದುರ್ಗ ನಗರದಲ್ಲಿ ರಾಜ್ಯಮಟ್ಟದ ನುಲಿಯ ಚಂದಯ್ಯ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದವರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕೊರಮ ಸಮಾಜದ ಮುಖಂಡರಾದ ಮಹಾದೇವಪ್ಪ, ಅಂಜಿನಮೂರ್ತಿ, ಮಂಜುನಾಥ್, ಮಂಜಣ್ಣ, ಮೂರ್ತಪ್ಪ, ಜಯಶೀಲಾ, ಬಸಣ್ಣ ಸೇರಿದಂತೆ ಮತ್ತಿತರರು ಇದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ