ಬೆಳ್ಳಿ ಮಹೋತ್ಸವ । ಕಲಾವಿದರಿಗೆ ಅವಕಾಶದ ಅಗತ್ಯವಿದೆ । ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ
ಬೀದರಿನ ಕಲಾವಿದರಿಗೆ ಬೆಂಗಳೂರಿನಲ್ಲಿ ಕಾರ್ಯಕ್ರಮ ಪ್ರದರ್ಶನ ಮಾಡಲು ಅವಕಾಶ ಮಾಡುವ ಅಗತ್ಯವಿದೆ. ಇದರಿಂದ ಅವರಲ್ಲಿರುವ ಕೀಳರಿಮೆ ದೂರಾಗುತ್ತದೆ ಎಂದು ಹಿರಿಯ ರಂಗ ಕಲಾವಿದರಾದ ಶ್ರೀನಿವಾಸ ಜಿ.ಕಪ್ಪಣ್ಣ ಹೇಳಿದರು.
ಇಲ್ಲಿನ ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಹಮ್ಮಿಕೊಂಡ ನೂಪುರ ನೃತ್ಯ ಅಕಾಡೆಮಿಯ ಬೆಳ್ಳಿ ಮಹೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಜಿಲ್ಲೆಯ ಕಲಾವಿದರಲ್ಲೂ ಅಪಾರವಾದ ಪ್ರತಿಭೆಯಿದೆ. ಇಲ್ಲಿನ ಸಾಹಿತ್ಯ, ಸಂಗೀತ, ನೃತ್ಯಗಳು ವಚನಗಳು ಸಾಂಸ್ಕೃತಿಕವಾಗಿ ಶ್ರೇಷ್ಠವಾಗಿವೆ. ನೃತ್ಯಕಲೆ ಉಳಿದೆಲ್ಲಾ ಕಲೆಗಳಿಗಿಂತ ಸಭಿಕರನ್ನು ಹೆಚ್ಚು ಆಕರ್ಷಿಸುವ ಕಲೆಯಾಗಿದೆ ಎಂದು ಹೇಳಿದರು.ಬೀದರ್‌ನಲ್ಲೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಹೆಚ್ಚಿಸಿ ಇಲ್ಲಿನ ಕಲಾಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಶಾಸ್ತ್ರೀಯ ನೃತ್ಯ ಶಾಲೆ ಆರಂಭಿಸಿ ಇಲ್ಲಿಯ ವಿದ್ಯಾರ್ಥಿಗಳ ತಂಡ ಕಟ್ಟಿ ಅವರಿಗೆ ವಿದೇಶಗಳಲ್ಲೂ ಪ್ರದರ್ಶನ ನೀಡುವ ಮಟ್ಟಿಗೆ ತಯಾರು ಮಾಡಿದ ನೂಪುರ ನೃತ್ಯ ಅಕಾಡೆಮಿಯ ಸಾಧನೆ ಅನನ್ಯವಾದುದು ಎಂದರು.
ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು ಸಾನಿಧ್ಯ ವಹಿಸಿ ಮಾತನಾಡಿ, ಬೀದರ ಜಿಲ್ಲೆಗೆ ಉಷಾ ಪ್ರಭಾಕರ ಅವರ ಕೊಡುಗೆ ಅಪಾರವಾದುದಾಗಿದೆ. ಅವರ ಪತಿ ಪ್ರಭಾಕರ್ ಅವರ ಬೆನ್ನಿಗೆ ಗಟ್ಟಿಯಾಗಿ ನಿಂತದ್ದೂ ಮಾದರಿಯಾಗಿದೆ ಎಂದರು.
ನೂಪುರ ನೃತ್ಯ ಅಕಾಡೆಮಿಯ 25 ವರ್ಷಗಳ ಚೈತ್ರಯಾತ್ರೆಯ ವಿವರಗಳನ್ನು ಸಭೆಗೆ ಪರಿಚಯಿಸಲಾಯಿತು.
ರೇಕುಳಗಿ ಶಂಭುಲಿಂಗೇಶ್ವರ ಕೇತ್ರದ ಡಾ ಮಂತ್ರ ಮಹರ್ಷಿ ಸದ್ಗುರೂಜಿ ಆಶೀರ್ವದಿಸಿದರು. ವಿವಿಧ ಕ್ಷೇತ್ರದ ಸಾಧಕರಾದ ಎಂ.ಜಿ.ದೇಶಪಾಂಡೆ, ರೂಪಾ ಪಾಟೀಲ, ರಾಜೇಂದ್ರಸಿಂಗ್ ಪವಾರ, ಸದಾನಂದ ಜೋಷಿ, ರೇಖಾ ಅಪ್ಪಾರಾವ್ ಸೌದಿ, ರಶ್ಮಿ ಶರ್ಮಾ ಅವರಿಗೆ ಅಕಾಡೆಮಿಯಿಂದ ಸನ್ಮಾನಿಸಲಾಯಿತು.
ಸಿದ್ರಾಮಪ್ಪ ಮಾಸಿಮಾಡೆ. ಸಂಜೀವಕುಮಾರ ಅತಿವಾಳೆ, ವಿಜಯಕುಮಾರ ಸೋನಾರೆ, ಸಿದ್ರಾಮ ಸಿಂದೆ, ಡಾ.ಆರತಿ ರಘು, ಪೂಜಾ ಜಾರ್ಜ್, ವೀಣಾ ಶೆಣೈ, ಕಾಜಲ್ ಈಶ್ವರಸಿಂಗ್ ಠಾಕೂರ್, ಬಸವರಾಜ ರುದನೂರು, ಪ್ರಭಾಕರ, ರಘುರಾಮ ಉಪಾಧ್ಯ ಇದ್ದರು.