ಶಿವಮೊಗ್ಗ: ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ವೃದ್ಧಾಪ್ಯ ಸಮಸ್ಯೆಯಾಗಿರಲಿಲ್ಲ. ಕುಟುಂಬ ಪದ್ಧತಿಯಲ್ಲಿ ವಯೋವೃದ್ಧರಿಗೆ ಗೌರವ ಸಿಗುತ್ತಿತ್ತು. ಅವರ ಜೀವಿತದ ಕೊನೆಯ ಹಂತದಲ್ಲಿ ಪಾಲನೆ ದೊರಕುತ್ತಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ವೃದ್ಧರನ್ನು ಕುಟುಂಬದ ಸದಸ್ಯರು ಕಡೆಗಣಿಸುತ್ತಿರುವುದು ಹೆಚ್ಚಾಗುತ್ತಿದೆ. ವೃದ್ಧರನ್ನು ಹೃದಯವಂತಿಕೆಯಿಂದ ಪೋಷಿಸುವುದು ಅಗತ್ಯ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರತಿ ತಿವಾರಿ ಪ್ರತಿಪಾದಿಸಿದರು.ಸ್ನೇಹಾಶ್ರಯ ಹರ್ಬನ್ ಅಂಡ್ ರೂರಲ್ ಡೆವಲಪ್ಮೆಂಟ್ ಸೊಸೈಟಿಯಿಂದ ಸೋಮವಾರ ಇಲ್ಲಿನ ವೆಂಕಟೇಶನಗರದ ವೆಂಕಟೇಶ್ವರ ದೇವಸ್ಥಾನ ಎದುರಿರುವ ಸ್ನೇಹಾಶ್ರಯ ವೃದ್ಧರ ಕುಟೀರದ ನೂತನ ಶಾಖೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಗಣ ಹೋಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಿರಿಯರು ಕುಟುಂಬದ ವಿವೇಕ, ಅನುಭವದ ಪ್ರತೀಕ. ಈ ಹಿರಿಯರ ಬಗ್ಗೆ ಕುಟುಂಬದ ಸದಸ್ಯರು ಹೆಮ್ಮೆಯ ಮನೋಭಾವ ಬೆಳೆಸಿಕೊಳ್ಳಬೇಕು. ಆಗ ಅವರ ಆರೈಕೆ ಮಾಡಲು ಸಾಧ್ಯ. ವೃದ್ಧಾಪ್ಯ ಮತ್ತು ಸಾವು ಪ್ರತಿ ಮನುಷ್ಯನಿಗೂ ಬಂದೇ ಬರುತ್ತದೆ. ಇಂದು ನಾವು ವೃದ್ಧರನ್ನು ನಿರ್ಲಕ್ಷಿಸಿದರೆ ನಾಳೆ ನಾವು ವೃದ್ಧಾರಾದಾಗ ಕೆಟ್ಟ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂಬ ಬಗ್ಗೆ ಅರಿವಿರಬೇಕು ಎಂದು ಹೇಳಿದರು.
ವಯೋವೃದ್ಧರ ಸೇವೆ ದೇವರ ಸೇವೆಗಿಂತಲು ಮಿಗಿಲು. ಜೀವನದ ಸಂಧ್ಯಾ ಕಾಲದಲ್ಲಿ ವಯೋವೃದ್ಧ ತಂದೆ, ತಾಯಿಗೆ ಸಿಗಬೇಕಾದ ಪ್ರೀತಿ ಮತ್ತು ಆರೈಕೆ ಇಲ್ಲವಾಗಿದೆ. ವಯೋವೃದ್ಧ ಪೋಷಕರನ್ನು ನೋಡಿಕೊಳ್ಳುವುದು ಮಕ್ಕಳ ಜವಾಬ್ದಾರಿ. ಬದುಕು ಯಾರಿಗೂ ಶಾಶ್ವತವಲ್ಲ. ಆದರೆ, ಬದುಕಿನಲ್ಲಿ ನಮ್ಮ ನಡೆ ಪ್ರಮುಖವಾಗುತ್ತದೆ. ಹೊತ್ತು- ಹೆತ್ತು, ಸಾಕಿ ಬೆಳೆಸಿದ ತಂದೆ- ತಾಯಿಯನ್ನು ಮಕ್ಕಳು ಚೆನ್ನಾಗಿ ನೋಡಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.ಇತ್ತೀಚಿನ ವರ್ಷಗಳಲ್ಲಿ ವೃದ್ಧಾಶ್ರಮ ಸಂಸ್ಕೃತಿ ಹೆಚ್ಚುತ್ತಿದೆ. ವೃದ್ಧಾಶ್ರಮವನ್ನು ತ್ಯಾಗ ಮತ್ತು ಸೇವಾ ಮನೋಭಾವದಿಂದ ನಡೆಸಬೇಕೇ ಹೊರತು ಲಾಭದಾಯಕ ದೃಷ್ಟಿಕೋನದಲ್ಲಿ ನೋಡಬಾರದು. ಸ್ನೇಹಾಶ್ರಯ ವೃದ್ಧರ ಕುಟೀರದ ಮಾಲತಿ ಅವರು ಸೇವಾಮನೋಭಾವದಿಂದ ವೃದ್ಧರ ಕುಠೀರ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಸ್ನೇಹಾಶ್ರಯ ಹರ್ಬನ್ ಅಂಡ್ ರೂರಲ್ ಡೆವಲಪ್ಮೆಂಟ್ ಸೊಸೈಟಿ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಸಂಸ್ಥಾಪಕ ಅಧ್ಯಕ್ಷರಾಗಿರುವ ಮಾಲತಿ, ವ್ಯವಸ್ಥಾಪಕ ಹರೀಶ್, ನಿವೃತ್ತ ಶಿರಸ್ತೇದಾರ್ ಅಂಜನಿ ರಾಮ್ ತಿವಾರಿ ಮತ್ತಿತರರು ಭಾಗವಹಿಸಿದ್ದರು.