ಕನ್ನಡಪ್ರಭ ವಾರ್ತೆ ಹಿರಿಯೂರು ತಾಲೂಕಿನ ಬಬ್ಬೂರು ಫಾರಂ ಸಮಿಪದಲ್ಲಿರುವ ಜಮೀನೊಂದರಲ್ಲಿ ಆಕಸ್ಮಿಕ ಬೆಂಕಿ ಅವಘಡದಿಂದಾಗಿ ಫಸಲಿಗೆ ಬಂದಿದ್ದ ಸುಮಾರು 850 ಅಡಿಕೆ ಮರ ಹಾಗೂ 45 ತೆಂಗಿನ ಗಿಡಗಳು ಸಂಪೂರ್ಣ ಸುಟ್ಟು ಹೋಗಿರುವ ಘಟನೆ ಮಂಗಳವಾರ ನಡೆದಿದೆ. ಬಬ್ಬೂರು ಗ್ರಾಮದ ದೊಡ್ಡಣ್ಣ ಹಾಗೂ ರಾಮಣ್ಣ ಸಹೋದರರ ಜಂಟಿ ಖಾತೆಯಲ್ಲಿರುವ ಸುಮಾರು 1.20 ಎಕರೆ ಜಮೀನಿನಲ್ಲಿ ಆಕಸ್ಮಿಕ ಬೆಂಕಿಯ ಅವಘಡದಿಂದ ಫಸಲಿಗೆ ಬಂದಿದ್ದ ಅಡಿಕೆ,ತೆಂಗು ಸೇರಿದಂತೆ ಡ್ರಿಪ್, ಪೈಪ್‍ಲೈನ್, ವಿದ್ಯುತ್ ವೈರ್,ಕೇಸಿಂಗ್ ಪೈಪ್, ಕೃಷಿ ಯಂತ್ರೋಪಕರಣಗಳು ಸಂಪೂರ್ಣ ಸುಟ್ಟು ಹೋಗಿವೆ. ಈ ಘಟನೆಯಿಂದ ರೈತರು ಕಂಗಾಲಾಗಿದ್ದು ನಾವು ಕಷ್ಟಪಟ್ಟು ಕೃಷಿ ಮಾಡಿಕೊಂಡು ಬರುತ್ತಿದ್ದು ಸುಮಾರು 7 ವರ್ಷದ ಫಸಲಿಗೆ ಬೆಂಕಿ ಬಿದ್ದಿದ್ದು ಗಿಡಗಳೆಲ್ಲಾ ಸುಟ್ಟು ಹೋಗಿವೆ. ಇದರಿಂದ ನಮಗೆ ದಿಕ್ಕು ತೋಚದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸರ್ಕಾರದಿಂದ ಪರಿಹಾರ ದೊರಕಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.