ಕನ್ನಡಪ್ರಭ ವಾರ್ತೆ, ತುಮಕೂರು ಮಹಿಳೆಯರಲ್ಲಿ ದೈಹಿಕ ಶ್ರಮದ ಚಟುವಟಿಕೆ ಕಡಿಮೆಯಾಗುತ್ತಿರುವುದರಿಂದ ಸ್ಥೂಲಕಾಯ ಇನ್ನಿತರೆ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದೆ ಎಂದು ಬೆಂಗಳೂರಿನ ಹೆಸರಾಂತ ಮಕ್ಕಳ ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿರವರು ಅಭಿಪ್ರಾಯಪಟ್ಟಿದ್ದಾರೆ.ನಗರದ ಶಿರಾ ರಸ್ತೆಯ ಶ್ರೀದೇವಿ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಶ್ರೀದೇವಿ ಸಮೂಹ ವಿದ್ಯಾಸಂಸ್ಥೆಯ ಅಂಗವಾಗಿ ಶ್ರೀದೇವಿ ಎಂಜಿನಿಯರಿಂಗ್ ಕಾಲೇಜಿನ ಆಡಿಟೋರಿಯಂ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.
ಮಹಿಳೆ ಎಂದರೆ ಪ್ರಕೃತಿ, ಮಾತೆ ಎಂದರೆ ಸಂಸ್ಕೃತಿ, ಮಹಿಳೆಗೆ ತಾಯಿ ಸ್ಥಾನ, ದೇವರ ಸ್ಥಾನ, ನೀಡಿರುವ ಜಗತ್ತಿನ ಏಕೈಕ ದೇಶ ಭಾರತ. ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ನಮ್ಮ ಸಂಸ್ಕೃತಿ, ಆಚಾರ, ವಿಚಾರ ಮರೆಯುತ್ತಿರುವುದು ನಿಜಕ್ಕೂ ವಿಷಾದನೀಯ ಬೆಳವಣಿಗೆ ಎಂದರು. ತುಮಕೂರಿನ ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಆಯುಕ್ತೆ (ಕಂದಾಯ ಇಲಾಖೆಯ) ಸುಪ್ರಿಯಾ ಬನಗರ್‌ರವರು ಮಾತನಾಡಿ ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯರಿಗೆ ಸಿಕ್ಕಿರುವ ಆದ್ಯತೆಯಂತೆ ರಾಜಕೀಯ ಕ್ಷೇತ್ರದಲ್ಲೂ ಹೆಚ್ಚಿನ ಪ್ರಾಧಾನ್ಯತೆ ಸಿಗಬೇಕು ಎಂದು ಹೇಳಿದರು. ನೇತ್ರತಜ್ಞೆ ಡಾ.ಲಾವಣ್ಯ ಮಾತನಾಡುತ್ತಾ ಮಹಿಳೆಯರು ಆರೋಗ್ಯ ಕಾಪಾಡಿಕೊಳ್ಳಲು ದಿನದಲ್ಲಿ ಒಂದು ಗಂಟೆ ಸಮಯವನ್ನು ವ್ಯಾಯಾಮಕ್ಕೆ ಮೀಸಲಿಡಬೇಕು. ಮಹಿಳೆಯರು ಆರೋಗ್ಯವಂತರಾದರೆ ಕುಟುಂಬ, ಸಮಾಜ, ದೇಶ ಆರೋಗ್ಯವಾಗಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀದೇವಿ ವೈದ್ಯಕೀಯ ನಿರ್ದೇಶಕರಾದ ಡಾ.ರಮಣ್ ಆರ್ ಹುಲಿನಾಯ್ಕರ್‌ರವರು ಮಾತನಾಡಿ, ಇಂದು ಎಲ್ಲ ರಂಗದಲ್ಲಿ ಮಹಿಳೆಯರು ಮುಂದೆ ಬರುತ್ತಿದ್ದಾರೆ. ಇದಕ್ಕೆ ಪ್ರತಿಯೊಬ್ಬರ ಸಹಕಾರ ಪ್ರೋತ್ಸಾಹ ಅಗತ್ಯವಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಬೆಂಗಳೂರಿನ ಹೆಸರಾಂತ ಹಿರಿಯ ಮಕ್ಕಳ ಹೃದ್ರೋಗ ತಜ್ಞ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ, ತುಮಕೂರಿನ ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಆಯುಕ್ತೆ (ಕಂದಾಯ ಇಲಾಖೆಯ) ಸುಪ್ರಿಯಾ ಬನಗರ್‌ರವರಿಗೆ ಸನ್ಮಾನಿಸಿ ಗೌರವಿಸಲಾಗಿತ್ತು.ಸಮಾರಂಭದಲ್ಲಿ ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್, ರೂಪಾನಟೇಶ್, ಡಾ.ರೇಖಾಗುರುಮೂರ್ತಿ, ಪ್ರಸನ್ನಕುಮಾರ್.ವೈ.ಆರ್. ಹಾಗೂ ವಿವಿಧ ಕಾಲೇಜಿನ ಪ್ರಾಂಶುಪಾಲರು, ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ದಂದಿ , ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.