ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಆರೋಗ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಮೂಲಕ ಪಡೆಯಲಾದ ಗುತ್ತಿಗೆದಾರ ಸಂಸ್ಥೆಯ ಅವಧಿ ಮುಗಿದರೂ ಸಹ ಅವರನ್ನೇ ಮೂರು ವರ್ಷಗಳ ಕಾಲ ಮುಂದುವರೆಸಲು ಕಾನೂನಿನಲ್ಲಿ ಅವಕಾಶ ನೀಡಿದ್ದು ಯಾರು ಎಂದು ಆರೋಗ್ಯ ಇಲಾಖೆ ಅಧಿಕಾರಿಯನ್ನು ಪ್ರಶ್ನಿಸಿದ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಈ ಕುರಿತು ಸೂಕ್ತ ತನಿಖೆಯ ಅಗತ್ಯತೆ ಪ್ರತಿಪಾದಿಸಿದರು. ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಆರೋಗ್ಯ ಇಲಾಖೆಯ ಅನುಸರಣ ವರದಿಯ ಸಮಗ್ರ ಚರ್ಚೆಯ ಸಂದರ್ಭದಲ್ಲಿ ಇಲಾಖೆಯ ಲೋಪಗಳನ್ನು ಪಟ್ಟಿ ಮಾಡಿದ ಸಚಿವರು, ಹೊರಗುತ್ತಿಗೆ ಸಂಸ್ಥೆಯ ನೇಮಕ ಮತ್ತು ಸಿಬ್ಬಂದಿ ಆಯ್ಕೆಯಲ್ಲಿನ ದೋಷಗಳನ್ನು ಸರಿಪಡಿಸದೆ ಹೋದರೆ ಇಲಾಖೆಯ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿ ಮಾಡುವುದಾಗಿ ಎಚ್ಚರಿಕೆ ನೀಡಿದರು.ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕವಾದ ಸಿಬ್ಬಂದಿಯ ಗುತ್ತಿಗೆ ಸಂಸ್ಥೆಯನ್ನು ಮೂರು ವರ್ಷಗಳ ಕಾಲ ಮುಂದುವರೆಸಿದ ವರದಿ ನೀಡುವುದು ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳಲು ಸೂಚಿಸಿದರು.
ಹೊಸ ವ್ಯವಸ್ಥೆ ಜಾರಿಗೆ:ಹೊರಗುತ್ತಿಗೆ ನೇಮಕದಲ್ಲಿನ ಲೋಪದೋಷ ಪಟ್ಟಿ ಮಾಡಿದ ಸಚಿವ ತಿಮ್ಮಾಪೂರ ಅವರಿಗೆ ಸಾಥ್ ನೀಡಿದ ಶಾಸಕ ಜೆ.ಟಿ. ಪಾಟೀಲ, ಬಿ.ಬಿ. ಚಿಮ್ಮನಕಟ್ಟಿ, ಉಮಾಶ್ರೀ ಅವರು ನೇಮಕದಲ್ಲಿನ ಭ್ರಷ್ಟಾಚಾರ ಕಡಿವಾಣಕ್ಕೆ ಸಲಹೆ ನೀಡಿದರು.
ಜಿಪಂ ಸಿಇಒ ಶಶಿಧರ ಕುರೇರ ಮಾತನಾಡಿ, ಸರ್ಕಾರ ಹೊರಗುತ್ತಿಗೆ ನೇಮಕಕ್ಕೆ ಪರಿಹಾರ ನೀಡಿದ್ದು, ಜಿಲ್ಲೆಯಲ್ಲಿನ ಹೊರಗುತ್ತಿಗೆ ನೌಕರರ ನೇಮಕವನ್ನು ಸಹಕಾರ ಸಂಸ್ಥೆಗಳಲ್ಲಿ ನೋಂದಾಯಿಸಿ ಆ ಮೂಲಕವೇ ಕಾರ್ಮಿಕ ಇಲಾಖೆಯ ಮಾರ್ಗಸೂಚಿ ಪಾಲನೆ ಮಾಡಿ ನೇಮಕ ಮಾಡಿಕೊಳ್ಳುವ ನಿಟ್ಟಿನಲ್ಲಿ ಸಿದ್ಧತೆ ನಡೆದಿದೆ ಎಂದು ತಿಳಿಸಿದರು.ಅಪೂರ್ಣ ಮಾಹಿತಿ ಸಚಿವರು ಗರಂ:
ಜಿಲ್ಲೆಯಲ್ಲಿ ಎಚ್ಐವಿ ಪೀಡಿತರ ಸಂಖ್ಯೆ, ಹೊಸದಾಗಿ ದೇವದಾಸಿಯರ ಸಮೀಕ್ಷೆ ಹಾಗೂ ಎಚ್ಐವಿಯಿಂದ ಏಡ್ಸ್ ಆಗಿ ಪರಿವರ್ತನೆಯಾದ ಪ್ರಕರಣಗಳ ಮಾಹಿತಿಯನ್ನು ಸಚಿವ ತಿಮ್ಮಾಪೂರ ಜಿಲ್ಲಾ ಆರೋಗ್ಯಾಧಿಕಾರಿಗೆ ಕೇಳಿದಾಗ ಅಪೂರ್ಣ ಮಾಹಿತಿ ನೀಡಿದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.ಜಿಲ್ಲೆಯಲ್ಲಿ 80640 ಎಚ್ಐವಿ ಪೀಡಿತರಿದ್ದು, ಕಳೆದ ವರ್ಷ 90 ಎಚ್ಐವಿ ಸೋಂಕಿತ ಗರ್ಭಿಣಿಯರ ಹೆರಿಗೆಯಾಗಿದ್ದು, 86 ಮಕ್ಕಳ ಜನನವಾಗಿದೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡಿದ್ದರಿಂದ ಅವರಲ್ಲಿ ಸೋಂಕು ಕಂಡು ಬಂದಿಲ್ಲವೆಂದು ಮಾಹಿತಿ ನೀಡಿದ ಅಧಿಕಾರಿಗಳನ್ನು ಪ್ರಶ್ನಿಸಿದ ಸಚಿವರು ಏಡ್ಸ್ ನಿಯಂತ್ರಣಕ್ಕಾಗಿ ಕೈಗೊಂಡ ಕ್ರಮಗಳ ಬಗ್ಗೆ ಅಸಮಧಾನ ವ್ಯಕ್ತಿಪಡಿಸಿದರು.
ಚರ್ಚೆಗೆ ಗ್ರಾಸವಾದ ಸಂತಾನಹರಣ ಶಸ್ತ್ರಚಿಕಿತ್ಸೆ:ವಿಧಾನ ಪರಿಷತ್ ಸದಸ್ಯೆ ಉಮಾಶ್ರಿ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಸಂತಾನಹರಣ ಶಸ್ತ್ರ ಚಿಕಿತ್ಸೆಯಲ್ಲಿ ಪುರುಷ ಮತ್ತು ಮಹಿಳೆಯರಲ್ಲಿ ತಾರತಮ್ಯವಾಗುತ್ತಿದೆ. ಇದು ಮಹಿಳೆಯರಿಗೆ ಆಗುವ ಮಾನಸಿಕ ಯಾತನೆಯಾಗಿದೆ ಈ ಬಗ್ಗೆ ಮಾಹಿತಿ ಕೇಳಿದರು. ಜಿಲ್ಲೆಯಲ್ಲಿ ಕಳೆದ ವರ್ಷ 5676 ಮಹಿಳೆಯರಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆಯಾಗಿದ್ದರೆ, 56 ಜನ ಪುರುಷರಿಗೆ ಮಾತ್ರ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು. ಈ ವೇಳೆ ಉಮಾಶ್ರೀ ಹಾಗೂ ಶಾಸಕರ ನಡುವೆ ಸ್ವಾರಸ್ಯಕರ ಚರ್ಚೆ ನಡೆಯಿತು.
ಅಲ್ಪಸಂಖ್ಯಾತ ಇಲಾಖೆಯ ಭಾಗವಾಗಿರುವ ವಕ್ಫ್ ಅಧಿಕಾರಿಯ ಕಾರ್ಯವೈಖರಿ ಕುರಿತು ಅಸಮಧಾನ ವ್ಯಕ್ತಪಡಿಸಿದ ಶಾಸಕ ಜೆ.ಟಿ. ಪಾಟೀಲ ಅವರು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯ ಕರ್ತವ್ಯಲೋಪದ ಕುರಿತು ಶಾಸಕ ಎಚ್.ವೈ ಮೇಟಿ ಪ್ರಸ್ತಾಪಿಸಿ ಕ್ರಮಕ್ಕೆ ಒತ್ತಾಯಿಸಿದರು.ಕೃಷಿ ಇಲಾಖೆಯ ಪರಿಕರಗಳ ವಿತರಣೆಯ ಲೋಪದೋಷಗಳನ್ನು ಸಭೆಯಲ್ಲಿ ಶಾಸಕ ಪಿ.ಎಚ್.ಪೂಜಾರ ಪ್ರಸ್ತಾಪಿಸಿದರೆ. ಪರಿಕರಗಳ ಹಂಚಿಕೆಯ ಮಾನದಂಡವನ್ನು ಸಭೆಗೆ ತಿಳಿಸಲು ಸಚಿವರು ಸೂಚಿಸಿದರು.
ಜೆಜೆಎಂ ತನಿಖೆಗೆ ಸಚಿವರ ಸೂಚನೆ:ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಕೈಗೊಂಡ ಕಾಮಗಾರಿಗಳಲ್ಲಿ ಗುಣಮಟ್ಟದ ಕುರಿತು ದೂರುಗಳು ಬಂದಿರುವ ಕಾಮಗಾರಿಗಳನ್ನು ತಪಾಸಣೆ ಕೈಗೊಂಡು ಸಂಬಂಧಿಸಿದ ಅಧಿಕಾರಿ ಹಾಗೂ ಗುತ್ತಿಗೆದಾರರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಜಿಪಂ ಸಿಇಒ ಶಶಿಧರ ಕುರೇರ ಅವರನ್ನು ಪ್ರಶ್ನಿಸಿದ ಶಾಸಕ ಜೆ.ಟಿ.ಪಾಟೀಲ ಅವರಿಗೆ ಬೆಂಬಲವಾಗಿ ನಿಂತ ಸಚಿವ ಆರ್.ಬಿ. ತಿಮ್ಮಾಪೂರ ಅವರು ಕೂಡಲೇ ಕಾಮಗಾರಿಗಳಲ್ಲಿನ ಗುಣಮಟ್ಟದ ದೋಷಗಳ ಕುರಿತು ಸಮಗ್ರ ತನಿಖೆಗೆ ಆದೇಶಿಸಿದರು.
ಜಲಜೀವನ್ ಮಿಷನ್ ತುರ್ತು ಕುಡಿಯುವ ನೀರಿನ ಕಾಮಗಾರಿಯಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ನಡೆಯುತ್ತಿದೆ. ಈ ಕೂಡಲೇ ಕಾಮಗಾರಿಗಳನ್ನು ಪರಿಶೀಲಿಸಿ ಅಗತ್ಯವಾದರೆ ಸಂಬಂಧಿಸಿದ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಲು ಸೂಚಿಸಿದ ಸಚಿವರು. ತನಿಖೆ ನಡೆಸಿ ವರದಿ ನೀಡಲು ಆದೇಶಿಸಿದರು.ಸಭೆಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕರಾದ ಸಿದ್ದು ಸವದಿ, ಪಿ.ಎಚ್.ಪೂಜಾರ, ಭೀಮಸೇನ ಚಿಮ್ಮನಕಟ್ಟಿ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಉಮಾಶ್ರೀ. ಜಿಲ್ಲಾಧಿಕಾರಿ ಸಂಗಪ್ಪ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.