ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ನಡೆಗೆ ಆಕ್ಷೇಪ

KannadaprabhaNewsNetwork | Published : Mar 19, 2025 12:45 AM

ಸಾರಾಂಶ

ಕನ್ನಡಪ್ರಭ ವಾರ್ತೆ ಸಿಂದಗಿ ಪುರಸಭೆಯ ಯಾವುದೇ ಕಾರ್ಯ ಕಲಾಪಗಳಿಗೆ ನಮ್ಮ ಅಭಿಪ್ರಾಯ ಕೇಳುತ್ತಿಲ್ಲ. ಕುಟುಂಬ ಮತ್ತು ಸ್ವ-ಆಸ್ತಿಯ ಗಣಕೀಕೃತ ಉತಾರ ಮಾಡಿಕೊಳ್ಳುವಾಗ ಪುರಸಭೆ ಖಾತೆಗೆ ಜಮೆ ಮಾಡಬೇಕಾದ ತೆರಿಗೆ ಹಣ ಪಾವತಿ ಮಾಡಿಲ್ಲ. ಜೊತೆಗೆ ನಕಲಿ ಚಲನ್ ಸೃಷ್ಟಿಸಿ ಪುರಸಭೆಗೆ ತೆರಿಗೆ ಹಣವನ್ನೇ ಸಂದಾಯ ಮಾಡಿಲ್ಲ. ಇದಕ್ಕೇನು ಉತ್ತರ ನೀಡುತ್ತಾರೆ ಎಂದು ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ವಿರುದ್ಧ ಸದಸ್ಯ ಶಾಂತವೀರ ಮನಗೂಳಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಪುರಸಭೆಯ ಯಾವುದೇ ಕಾರ್ಯ ಕಲಾಪಗಳಿಗೆ ನಮ್ಮ ಅಭಿಪ್ರಾಯ ಕೇಳುತ್ತಿಲ್ಲ. ಕುಟುಂಬ ಮತ್ತು ಸ್ವ-ಆಸ್ತಿಯ ಗಣಕೀಕೃತ ಉತಾರ ಮಾಡಿಕೊಳ್ಳುವಾಗ ಪುರಸಭೆ ಖಾತೆಗೆ ಜಮೆ ಮಾಡಬೇಕಾದ ತೆರಿಗೆ ಹಣ ಪಾವತಿ ಮಾಡಿಲ್ಲ. ಜೊತೆಗೆ ನಕಲಿ ಚಲನ್ ಸೃಷ್ಟಿಸಿ ಪುರಸಭೆಗೆ ತೆರಿಗೆ ಹಣವನ್ನೇ ಸಂದಾಯ ಮಾಡಿಲ್ಲ. ಇದಕ್ಕೇನು ಉತ್ತರ ನೀಡುತ್ತಾರೆ ಎಂದು ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ವಿರುದ್ಧ ಸದಸ್ಯ ಶಾಂತವೀರ ಮನಗೂಳಿ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟಣದ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಹಾಗೂ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ ಕಾರ್ಯವೈಖರಿಗೆ ಅಸಮಾಧಾನಗೊಂಡು ಪುರಸಭೆಯ 16 ಜನ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಗೊತ್ತುವಳಿ ಮಂಡಿಸುವ ಸಲುವಾಗಿ ವಿಶೇಷ ಸಾಮಾನ್ಯ ಸಭೆ ಕರೆಯುವಂತೆ ಮನವಿ ಸಲ್ಲಿಸಲಾಗಿದೆ. ಅವಿಶ್ವಾಸ ಪತ್ರದಲ್ಲಿ 16 ಸದಸ್ಯರು, ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಹಾಗೂ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ ಅವರು ತಮ್ಮ ಅಧಿಕಾರಾವಧಿಯಲ್ಲಿ ಸದಸ್ಯರ ಅಭಿಪ್ರಾಯಗಳಿಗೆ ಸ್ಪಂದಿಸದೇ ಹಾಗೂ ಗಣನೆಗೆ ತೆಗದುಕೊಳ್ಳದೇ ಸ್ವ-ಇಚ್ಚೆಯಂತೆ ಆಡಳಿತ ನಡೆಸುತ್ತಿದ್ದಾರೆ. ಪ್ರಸ್ತುತ ಅಧ್ಯಕ್ಷರ ಮೇಲೆ ಯಾವುದೇ ರೀತಿಯ ವಿಶ್ವಾಸ ಉಳಿದಿಲ್ಲ. ಆದ್ದರಿಂದ ನಾವುಗಳು ಸ್ವ-ಇಚ್ಚೆಯಿಂದ ಸಹಿ ಮಾಡಿದ್ದು, ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಅರ್ಜಿ ಸಲ್ಲಿಸುತ್ತಿದ್ದೇವೆ ಎಂದು ತಿಳಸಿದರು.

ಅನುದಾನ ಇಟ್ಟುಕೊಂಡು ತೆರವು ಕಾರ್ಯಾಚರಣೆ ಕೈಗೊಳ್ಳಬೇಕು. ಅನುದಾನ ತರುವವರೆಗೂ ತೆರವು ಕಾರ್ಯಾಚರಣೆ ಮಾಡಬೇಡಿ ಎಂದು ಶಾಸಕರು ಕಿವಿಮಾತು ಹೇಳಿದ್ದರು, ಅವರ ಮಾತಿಗೂ ಬೆಲೆ ನೀಡದೆ ಸ್ವ-ನಿರ್ಧಾರದ ಮೂಲಕ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ. ಆ ನೆಪದಲ್ಲಿ ಶ್ರೀಮಂತರಿಂದ ಹಣ ಪಡೆದು ಅವರ ಅಂಗಡಿಗಳನ್ನು ತೆರವುಗೊಳಿಸದೇ ಬಡವರ ಮನೆ ಮತ್ತು ಅಂಗಡಿಗಳನ್ನು ತೆರವುಗೊಳಿಸಿ ಅವರ ಹೊಟ್ಟೆಯ ಮೇಲೆ ಹೊಡೆಯಲಾಗುತ್ತಿದೆ. ತಮ್ಮ ಕಟ್ಟಡಗಳಿರುವ ಸ್ಥಳವನ್ನು ತೆರವುಗೊಳಿಸದೇ ಅಗಲಿಕರಣ ಮಾಡಲಿಲ್ಲ ಏಕೆ ಎಂದು ಶಾಂತವೀರ ಮನಗೂಳಿ ಪ್ರಶ್ನಿಸಿದರು.

ಈ ವೇಳೆ ಪುರಸಭೆ ಸದಸ್ಯರಾದ ಉಮಾದೇವಿ ಸುಲ್ಪಿ, ಕಲಾವತಿ ಕಡಕೋಳ, ಖೈರುನಬಿ ನಾಟೀಕಾರ, ತಹಸಿನ್ ಮುಲ್ಲಾ, ಬಸಮ್ಮ ಸಜ್ಜನ, ಭಾಗವ್ವ ಡೋಣೂರ, ಭಾಷಾಸಾಬ ತಾಂಬೋಳ್ಳಿ, ಗೊಲ್ಲಾಳಪ್ಪ ಬಂಕಲಗಿ, ನಾಮ ನಿರ್ದೇಶಿತ ಸದಸ್ಯರಾದ ಸಿದ್ದು ಮಲ್ಲೇದ, ಸಾಯಬಣ್ಣ ಪುರದಾಳ, ಅಬ್ದುಲ್‌ ರಹಿಮ್ ದುದನಿ, ಚನ್ನಪ್ಪ ಗೋಣಿ ಸೇರಿದಂತೆ ಇತರರು ಇದ್ದರು.

Share this article