ಎಲ್ಲರ ಹಿತಾಸಕ್ತಿಯ ರಕ್ಷಣೆ ಸಾರಿಗೆ ಪ್ರಾಧಿಕಾರದ ಉದ್ದೇಶ: ವೆಂಕಟ್ ರಾಜಾ

KannadaprabhaNewsNetwork |  
Published : Feb 19, 2025, 12:51 AM IST
 ವೆಂಕಟ್ ರಾಜಾ | Kannada Prabha

ಸಾರಾಂಶ

ಕೊಡಗು ಜಿಲ್ಲೆಯಲ್ಲಿ ಬಸ್ಸು ಸಂಚಾರ ಸಂಬಂಧಿಸಿದಂತೆ ಎಲ್ಲರ ಹಿತಾಸಕ್ತಿ ಕಾಪಾಡುವುದು ಸಾರಿಗೆ ಪ್ರಾಧಿಕಾರದ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಯಲ್ಲಿ ಬಸ್ಸು ಸಂಚಾರ ಸಂಬಂಧಿಸಿದಂತೆ ಎಲ್ಲರ ಹಿತಾಸಕ್ತಿ ಕಾಪಾಡುವುದು ಸಾರಿಗೆ ಪ್ರಾಧಿಕಾರದ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾರ್ವಜನಿಕರ ಬೇಡಿಕೆಗೆ ತಕ್ಕಂತೆ ಬಸ್ಸು ಸೇವೆ ಒದಗಿಸಲು ಎಲ್ಲರೂ ಮುಂದಾಗಿದ್ದಾರೆ. ಆ ನಿಟ್ಟಿನಲ್ಲಿ ಯಾರಿಗೂ ತೊಂದರೆ ಆಗದಂತೆ ಗಮನ ಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಖಾಸಗಿ ಬಸ್ಸು ಮಾಲೀಕರಾದ ಪುಟ್ಟಸ್ವಾಮಿ ಮಾತನಾಡಿ ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳು ಎಲ್ಲೆಲ್ಲಿ ಸಂಚಾರ ಮಾಡುತ್ತಿದೆ ಎಂಬ ಬಗ್ಗೆ ನಿಖರ ಮಾಹಿತಿ ಒದಗಿಸಬೇಕು ಎಂದು ಕೋರಿದರು.

‘ಶಕ್ತಿ ಯೋಜನೆಯಿಂದಾಗಿ ಖಾಸಗಿ ಬಸ್ಸು ಮಾಲೀಕರಿಗೆ ತುಂಬಾ ತೊಂದರೆಯಾಗಿದೆ. ತೆರಿಗೆ ಪಾವತಿಸಲು ಸಹ ಕಷ್ಟವಾಗಿದೆ ಎಂದು ಸಭೆಯಲ್ಲಿ ಅಳಲು ತೋಡಿಕೊಂಡರು.’

ಖಾಸಗಿ ಬಸ್ಸ್ ಮಾಲೀಕರ ಸಂಘದ ಅಧ್ಯಕ್ಷರಾದ ರಮೇಶ್ ಜೋಯಪ್ಪ ಅವರು ಮಾತನಾಡಿ ಖಾಸಗಿ ಹಾಗೂ ಸರ್ಕಾರಿ ಬಸ್ಸ್ಗಳ ಸಂಚಾರ ಸಾರ್ವಜನಿಕರ ಬೇಡಿಕೆ ಮತ್ತಿತರರ ಸಂಬಂಧ ಸರ್ವೆ ವರದಿ ಒದಗಿಸುವಂತೆ ಸಭೆಯಲ್ಲಿ ಕೋರಿದರು.

ಸರ್ಕಾರಿ ಮತ್ತು ಖಾಸಗಿ ಬಸ್ಸ್ಗಳ ಸಂಚಾರ ನಡುವಿನ ಸಮಯ ಪಾಲನೆ ಅತಿಮುಖ್ಯ. ಜೊತೆಗೆ ಆರೋಗ್ಯಕರ ಪೈಪೋಟಿ ಇರಬೇಕು, ಆದರೆ ಈ ಕೆಲಸ ಆಗುತ್ತಿಲ್ಲ ಎಂದರು.

ಖಾಸಗಿ ಬಸ್ ಮಾಲೀಕರು ತಮ್ಮ ಅಹವಾಲು ಮಂಡಿಸಿ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ 151 ಖಾಸಗಿ ಬಸ್ ಸಂಚಾರ ಇದ್ದಾಗಿಯೂ ಪುನ: ಕೆಎಸ್‌ಆರ್‌ಟಿಸಿ ಅವರು ಕೋರಿರುವ 64 ಮಾರ್ಗಗಳನ್ನು ಮಂಜೂರು ಮಾಡಿದಲ್ಲಿ ಸಂಪೂರ್ಣ ನಷ್ಟವಾಗುವುದರೊಂದಿಗೆ ಅನಾರೋಗ್ಯಕರ ಪೈಪೋಟಿ ಏರ್ಪಡಲಿದೆ ಎಂದು ತಿಳಿಸಿದರು.

ಯಾವುದೇ ಖಾಸಗಿ ವಾಹನಗಳ ಸಂಚಾರ ಸಾಧ್ಯವಿಲ್ಲವೆಂದೂ, ಇದರಿಂದ ಕೆಎಸ್‌ಆರ್‌ಟಿಸಿ ವಾಹನಗಳಿಗೆ ರಹದಾರಿ ಮಂಜೂರು ಮಾಡದಂತೆ ಕೋರಿರುತ್ತಾರೆ. ಸರ್ಕಾರ ಈಗಾಗಲೇ ಸಂಚರಿಸುತ್ತಿರುವ ಎಲ್ಲಾ ಖಾಸಗಿ ಬಸ್‌ಗಳನ್ನು ಸೇವ್ಡ್ ಆಪರೇರ‍್ಸ್ ಎಂದು ತಿಳಿಸಿರುವುದರಿಂದ ಸರ್ಕಾರದ ತೀರ್ಮಾನದಂತೆ ಖಾಸಗಿ ಬಸ್ ಸಂಚಾರಕ್ಕೆ ಅವಕಾಶ ಮಾಡಬೇಕು ಎಂದು ಖಾಸಗಿ ಬಸ್ ಮಾಲೀಕರ ಪರವಾಗಿ ವಕೀಲರು ಕೋರಿದರು.

ಈ ಸಂಬಂಧ ಮಡಿಕೇರಿ ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕರು ಸಭೆಯಲ್ಲಿ ವಿನಂತಿಸಿ ಕುಶಾಲನಗರದಲ್ಲಿ ಹೊಸದಾಗಿ ಡಿಪೋ ಆರಂಭ ಆಗುವುದರಿಂದ ಶೀಘ್ರವಾಗಿ ರಹದಾರಿ ಮಂಜೂರು ಮಾಡಿದಲ್ಲಿ ಸರ್ವಿಸ್ ಪ್ರಾರಂಬಿಸಿ, ಸಾರ್ವಜನಿಕರಿಗೆ ಸೇವೆ ನೀಡಲಾಗುವುದೆಂದು ವಿವರಿಸಿದರು.

ಈ ಎಲ್ಲಾ ವಿವರಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸರ್ಕಾರವು ನೀಡಿರುವ ಆದೇಶಗಳು, ಘನ ನ್ಯಾಯಾಲಯದ ಆದೇಶಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಸಾರಿಗೆ ಇಲಾಖೆ ವತಿಯಿಂದ ನೀಡಲಾದ ವರದಿ ಪರಿಶೀಲಿಸಲಾಗಿದೆ. ಖಾಸಗಿ ಬಸ್ ಮಾಲೀಕರ ಅಹವಾಲುಗಳನ್ನು ಸಭೆಯು ಪರಿಗಣನೆಗೆ ತೆಗೆದುಕೊಂಡಿದೆ. ಈಗಾಗಲೇ ಶಕ್ತಿ ಯೋಜನೆ ಜಾರಿಯಲ್ಲಿದ್ದು, ಕೆಎಸ್‌ಆರ್‌ಟಿಸಿ ಮಜಲು ವಾಹನಗಳ ಅಗತ್ಯತೆಯೂ ಇದೆ. ಆದ್ದರಿಂದ ನಿಯಮಗಳಿಗೆ ಅನುಸಾರವಾಗಿ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ವಿ.ನಾಗರಾಜಾಚಾರ್, ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕರಾದ ಮೆಹಬೂಬ್ ಆಲಿ, ಜನಾರ್ಧನ ಪ್ರಭು, ವಕೀಲರಾದ ನಾಗೇಶ್, ಸಾರಿಗೆ ಇಲಾಖೆಯ ಡಿ.ಕೆ.ರೀಟಾ ಹಾಗೂ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ರೈಲ್ವೆ ಬಡ್ತಿ ಪರೀಕ್ಷೆ ಕನ್ನಡದಲ್ಲೂ ನಡೆಸಲು ಸೋಮಣ್ಣ ತಾಕೀತು