- ಅಸ್ಸಾಂನಲ್ಲಿ ಯಾತ್ರೆಗೆ ಅಡ್ಡಿ, ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ । ಬಿಜೆಪಿ ವಿರುದ್ಧ ಆಕ್ರೋಶ
ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಅಸ್ಸಾಂ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿರುವುದನ್ನು ಖಂಡಿಸಿ ಮಂಗಳವಾರ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ತಾಲೂಕು ಕಚೇರಿಯಿಂದ ಮೆರವಣಿಗೆಯಲ್ಲಿ ಹೊರಟ ಕಾರ್ಯಕರ್ತರು ಹನುಮಂತಪ್ಪ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಚ್.ಡಿ. ತಮ್ಮಯ್ಯ, ರಾಹುಲ್‌ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ನ್ಯಾಯ ಯಾತ್ರೆ ಅಸ್ಸಾಂನಲ್ಲಿ ಸಾಗುತ್ತಿದ್ದಾಗ ರಾಹುಲ್‌ಗಾಂಧಿಯವರ ಜನಪ್ರಿಯತೆಯನ್ನು ಸಹಿಸದೇ ಬಿಜೆಪಿ ಕಾರ್ಯಕರ್ತರು ತಡೆ ಒಡ್ಡಿ ಹಲ್ಲೆಗೆ ಯತ್ನ ನಡೆಸಿರುವುದನ್ನು ಖಂಡಿಸಿದರು.
ಯಾವ ದೇವಸ್ಥಾನಕ್ಕಾಗಲೀ ಯಾತ್ರೆ ಮಾಡುವುದಕ್ಕಾಗಲೀ ತಡೆಯಬಾರದೆಂಬ ನಿಯಮವಿದ್ದರೂ ಅಲ್ಲಿನ ಅಸ್ಸಾಂ ರಾಜ್ಯ ಸರ್ಕಾರ ಯಾತ್ರೆ ತಡೆಯುವ ಕೆಲಸಕ್ಕೆ ಮುಂದಾಗಿರುವುದು ಸಾಮಾನ್ಯ ಜ್ಞಾನವೂ ಇಲ್ಲ ಎಂದು ಟೀಕಿಸಿದರು.
ಇದೇ ವರ್ತನೆಯನ್ನು ಬಿಜೆಪಿ ಮುಂದುವರೆಸಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸುತ್ತಾರೆಂದು ಎಚ್ಚರಿಸಿದರು.
ಇತಿಹಾಸ ಪ್ರಸಿದ್ದ ದೇವಾಲಯ ಒಂದಕ್ಕೆ ಭೇಟಿ ನೀಡಿ ರಾಹುಲ್‌ಗಾಂಧಿ ದೇವರ ದರ್ಶನಕ್ಕೆ ಮುಂದಾದಾಗ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿ ಹಲ್ಲೆ ಯತ್ನ ಮಾಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆ ಕಗ್ಗೊಲೆಯಾಗಿದೆ. ರಾಹುಲ್ ಗಾಂಧಿಯವರ ರಕ್ಷಣೆ ಮತ್ತು ದೇವಸ್ಥಾನ ಪ್ರವೇಶಕ್ಕೆಅನುಮತಿ ನಿರಾಕರಿಸಿರುವುದು ಅಸ್ಸಾಂ ರಾಜ್ಯದಲ್ಲಿ ಗೂಂಡಾ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ.ಡಿ.ಎಲ್. ವಿಜಯ್‌ಕುಮಾರ್ ಮಾತನಾಡಿ, ರಾಷ್ಟ್ರಪಿತ ಮಹಾತ್ಮಗಾಂಧಿಯವರು ಸ್ವಾತಂತ್ರ್ಯ ಹೋರಾಟದ ಮೂಲಕ ಜನರ ಸಮಸ್ಯೆಗಳನ್ನು ಪರಿಹರಿಸಿದ ಮಾದರಿಯಲ್ಲಿ ರಾಹುಲ್‌ಗಾಂಧಿಯವರು ಭಾರತ್ ಜೋಡೋ ನ್ಯಾಯ ಯಾತ್ರೆ ಮೂಲಕ ಜನಸಾಮಾನ್ಯರ ಸಮಸ್ಯೆಗಳನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಲು ಮುಂದಾಗಿರುವುದನ್ನು ಸಹಿಸದ ಬಿಜೆಪಿ ಇಂತಹ ಹೀನ ಕೃತ್ಯಕ್ಕೆ ಇಳಿದಿದೆ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಪಿ. ಮಂಜೇಗೌಡ, ಮಹಡಿಮನೆ ಸತೀಶ್, ಬಿ.ಎಚ್ ಹರೀಶ್, ಮಹಿಳಾ ಘಟಕದ ಅಧ್ಯಕ್ಷೆ ಸೌಂದರ್ಯ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಸಿ. ಶಿವಾನಂದಸ್ವಾಮಿ, ನಗರಾಧ್ಯಕ್ಷ ತನೂಜ್‌ಕುಮಾರ್, ಮಾಜಿ ಸಿಡಿಎ ಅಧ್ಯಕ್ಷ ಸೈಯದ್ ಹನೀಫ್, ಸಿ.ಸಿ. ಮಧು, ಕೆ. ಭರತ್, ಹಿರೇಮಗಳೂರು ರಾಮಚಂದ್ರ, ಸೋಮಶೇಖರ್ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು. 23 ಕೆಸಿಕೆಎಂ 1