ಬ್ಯಾಡಗಿ: ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ದುಷ್ಕರ್ಮಿಗಳು ಏತ ನೀರಾವರಿ ಯೋಜನೆಯಡಿ ಕೆರೆಗಳನ್ನು ತುಂಬಿಸುವ ಪೈಪ್ ಲೈನ್ ಒಡೆಯುವುದು, ವಾಲ್ ತಿರುವಿಕೊಳ್ಳುವುದು, ಜಾಕವೆಲ್ ಹಾಳು ಮಾಡುವ ಕೃತ್ಯದಲ್ಲಿ ತೊಡಗಿದ್ದು, ಪೊಲೀಸರು ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಆಗ್ರಹಿಸಿದ್ದಾರೆ.
ಏತ ನೀರಾವರಿ ಯೋಜನೆಯಡಿ ಶೇ. 50ರಷ್ಟು ನೀರು ಮಾತ್ರ ಕಾಲುವೆಗಳ ಮೂಲಕ ತುಂಬಿಸಿಕೊಳ್ಳಬೇಕು. ಇನ್ನುಳಿದ ಶೇ. 50ರಷ್ಟು ನೀರು ಮಳೆಯಾಶ್ರಿತ ನೀರಿನಿಂದ ಭರ್ತಿ ಮಾಡಿಕೊಳ್ಳುವ ನಿಯಮವಿದೆ. ಆದರೆ ಕೆಲವು ದುಷ್ಕರ್ಮಿಗಳು ತಮ್ಮ ಗ್ರಾಮದ ಕೆರೆ ತುಂಬಿಸಿಕೊಳ್ಳುವ ದುರುದ್ದೇಶದಿಂದ ಪೈಪ್‌ಲೈನ್‌ಗಳನ್ನು ಅಲ್ಲಲ್ಲಿ ಒಡೆಯುತ್ತಿದ್ದು ಕೂಡಲೇ ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿದರು.
ಮುಂಗಾರು ಹಂಗಾಮಿನಲ್ಲಿ ಸುಮಾರು 120ರಿಂದ 150 ದಿನಗಳಲ್ಲಿ ತುಂಗಾ ಮೇಲ್ದಂಡೆ ಯೋಜನೆಯಡಿ 16 ಕೆರೆ ಹಾಗೂ ಏತ ನೀರಾವರಿ ಯೋಜನೆಯಡಿ ಜಿಲ್ಲೆಯ ಸುಮಾರು 552 ಕೆರೆಗಳನ್ನು ತುಂಗಭದ್ರಾ, ವರದಾ ಮತ್ತು ಕುಮದ್ವತಿ ನದಿಗಳಿಂದ ಪ್ರತಿ ವರ್ಷನೀರು ತುಂಬಿಸುವ ಯೋಜನೆಯಿಂದ ಜಿಲ್ಲೆಯ ಸುಮಾರು 8400 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ, ಹಾನಗಲ್ ತಾಲೂಕಿನ ಧರ್ಮ ಜಲಾಶಯ ಯೋಜನೆಯಡಿ ತಾಲೂಕಿನ 98 ಕೆರೆಗಳಿಗೆ ನೀರು ತುಂಬಿಸಿ 769 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ, ರಟ್ಟಿಹಳ್ಳಿ ತಾಲೂಕಿನ ಮದಗ ಮಾಸೂರು ಕೆರೆ ಯೋಜನೆ ಕುಮದ್ವತಿ ನದಿ ಅಣೆಕಟ್ಟಿನಿಂದ 715 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ರೈತ ಸಂಘದ ನಿರಂತರ ಹೋರಾಟದ ಫಲವಾಗಿ ಈ ಯೋಜನೆಗಳು ಕಾರ್ಯಗತವಾಗಿವೆ. ಅದರೆ ಕೆಲವರು ರೈತ ಸಂಘದ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ಪೈಪ್‌ಲೈನ್ ಒಡೆಯುವುದು, ಜಾಕವೆಲ್ ಹಾಳು ಮಾಡುತ್ತಿದ್ದಾರೆ ಎಂದರು.ರೈತ ಸಂಘದ ಮಾಧ್ಯಮ ಪ್ರತಿನಿಧಿ ಶಿವಯೋಗಿ ಹೊಸಗೌಡ್ರ, ತಾಲೂಕಾಧ್ಯಕ್ಷ ರುದ್ರಗೌಡ ಕಾಡನಗೌಡ್ರ, ಮುಖಂಡರಾದ ಗಂಗಣ್ಣ ಎಲಿ, ಮೌನೇಶ ಕಮ್ಮಾರ ಇನ್ನಿತರರಿದ್ದರು.