ಕನ್ನಡಪ್ರಭ ವಾರ್ತೆ ಬಳ್ಳಾರಿ
ತುಂಗಭದ್ರಾ ಜಲಾಶಯದ ಎಚ್‌ಎಲ್‌ಸಿ ಕಾಲುವೆಗೆ ನ. 20ರ ವರೆಗೆ ನೀರು ಪೂರೈಸಬೇಕು ಎಂದು ಆಗ್ರಹಿಸಿ ತುಂಗಭದ್ರಾ ರೈತ ಸಂಘದಿಂದ ನಗರದಲ್ಲಿ ಸೋಮವಾರ ಬೈಕ್ ರ್‍ಯಾಲಿ ಹಮ್ಮಿಕೊಳ್ಳಲಾಗಿತ್ತು.ನಗರದ ಅಲ್ಲೀಪುರ ಮಹಾದೇವತಾತ ದೇವಸ್ಥಾನದಿಂದ ಬೈಕ್ ರ್‍ಯಾಲಿ ಆರಂಭಿಸಿದ ನೂರಾರು ರೈತರು, ತುಂಗಭದ್ರಾ ಬೋರ್ಡ್ ಕಚೇರಿವರೆಗೆ ತೆರಳಿ ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್ ಬಸವರಾಜ್ ಅವರಿಗೆ ಮನವಿ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಜೆ. ಪುರುಷೋತ್ತಮಗೌಡ, ಎಚ್‌ಎಲ್‌ಸಿ ಕಾಲುವೆ ನೀರನ್ನೇ ನಂಬಿಕೊಂಡು ರೈತರು ಹೆಚ್ಚಿನ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯನ್ನು ಬೆಳೆದಿದ್ದಾರೆ. ಜಲಾಶಯದ ನೀರಿನ ಕೊರತೆಯಿಂದ ನ. 10ರ ವರೆಗೆ ನೀರು ಕೊಡುವುದಾಗಿ ತುಂಗಭದ್ರಾ ಬೋರ್ಡ್‌ನ ಸಭೆಯಲ್ಲಿ ತಿಳಿಸಲಾಗಿತ್ತು. ಆದರೆ, ನ. 10ರ ವರೆಗೆ ನೀರು ಕೊಡುವುದರಿಂದ ರೈತರಿಗೆ ಯಾವುದೇ ಅನುಕೂಲವಾಗುವುದಿಲ್ಲ. ಸಮರ್ಪಕ ನೀರು ಸಿಗದೇ ಹೋದರೆ ಲಕ್ಷಾಂತರ ರು. ಖರ್ಚು ಮಾಡಿ ಬೆಳೆದಿರುವ ಕೋಟ್ಯಂತರ ಮೌಲ್ಯದ ಬೆಳೆ ಹಾನಿಯಾಗುವ ಸಾಧ್ಯತೆ ಇದೆ. ಹೀಗಾಗಿ ನ. 20ರ ವರೆಗಾದರೂ ನೀರು ಕೊಡಬೇಕು. ಬಳಿಕ ಜಲಾಶಯದಲ್ಲಿನ ನೀರು ಸಂಗ್ರಹ ನೋಡಿಕೊಂಡು ರೈತರ ಬೆಳೆಗಳಿಗೆ ನೀರು ಕೊಡುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ನೀರಿನ ಅಭಾವದಿಂದ ಜಿಲ್ಲೆಯ ರೈತರ ಬೆಳೆಗಳು ಹಾಳಾಗುತ್ತಿರುವ ಕುರಿತು ಜಲ ಸಂಪನ್ಮೂಲ ಸಚಿವರು, ಉಪ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯದ ನೀರಾವರಿ ನಿಗಮ ನಿಯಮಿತದ ನಿರ್ದೇಶಕರಾದ ಮಲ್ಲಿಕಾರ್ಜುನ ಗುಂಗ್ಲೆ ಅವರನ್ನು ಭೇಟಿ ಮಾಡಿ ರೈತರ ಬೆಳೆ ರಕ್ಷಣೆಗೆ ಕಾಲುವೆಗೆ ಸಮರ್ಪಕವಾಗಿ ನೀರು ಕೊಡಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ. ಹೀಗಾಗಿ ತುಂಗಭದ್ರಾ ಬೋರ್ಡ್ ನ ಅಧಿಕಾರಿಗಳು ನವೆಂಬರ್ 20ರ ವರೆಗಾದರೂ ನೀರು ಕೊಡಬೇಕು. ರೈತರ ವಿಚಾರದಲ್ಲಿ ರೈತರು ಮಾನವೀಯತೆ ಮೆರೆಯಬೇಕು ಎಂದು ಪುರುಷೋತ್ತಮಗೌಡ ಆಗ್ರಹಿಸಿದರು.
ರೈತ ಮುಖಂಡರಾದ ಶಿವಯ್ಯ, ರಂಜಾನ್ ಸಾಬ್, ಪಿ. ಸತ್ಯನಾರಾಯಣ, ಕೆ.ಸಿದ್ಧರಾಮಪ್ಪ, ಆಗಲೂರಪ್ಪ, ಹನುಮಯ್ಯ, ಮಧುಬಾಬು, ಶ್ರೀನಿವಾಸರಾವ್, ಕೆ.ರಾಂಬಾಬು, ಪಿ. ರವಿಕುಮಾರ್, ವೆಂಕಟೇಶ್ವರರಾವ್, ಅಯ್ಯಪ್ಪ, ತಿಪ್ಪಯ್ಯ, ಗಾದಿಲಿಂಗಪ್ಪ, ಬಸವರಾಜ್, ಶಿವಕುಮಾರ್, ಶ್ರೀನಿವಾಸ್, ತಿಪ್ಪೇರುದ್ರಗೌಡ ಮತ್ತಿತರರು ಭಾಗವಹಿಸಿದ್ದರು.ಹೊಸಪೇಟೆ ರಸ್ತೆಯ ಅಲ್ಲೀಪುರ ಮಹಾದೇವತಾತ ದೇವಸ್ಥಾನದಿಂದ ಘೋಷಣೆಗಳೊಂದಿಗೆ ಬೈಕ್ ರ್‍ಯಾಲಿ ನಡೆಸಿದ ರೈತರು, ಬೆಳೆಗಳ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಸಂಕಷ್ಟದಲ್ಲಿರುವ ರೈತರನ್ನು ಪಾರು ಮಾಡಬೇಕು ಎಂದು ಆಗ್ರಹಿಸಿದರು.