ವಕ್ಫ್‌ ಆಸ್ತಿ ಕಬಳಿಕೆ ಕುರಿತು ಮೌನವಾಗಿರಲು ಆಮಿಷವೊಡ್ಡಿದ್ದು ಕಾಂಗ್ರೆಸ್‌ : ಮಾಣಿಪ್ಪಾಡಿ

KannadaprabhaNewsNetwork |  
Published : Dec 16, 2024, 12:47 AM ISTUpdated : Dec 16, 2024, 07:24 AM IST
ಮಾಣಿಪ್ಪಾಡಿ | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪ ಸುಳ್ಳು. ಬಿ.ವೈ.ವಿಜಯೇಂದ್ರ ಅವರು ನನಗೆ 150 ಕೋಟಿ ರು. ಆಫರ್‌ ನೀಡಿರಲಿಲ್ಲ. ವಕ್ಫ್‌ ಆಸ್ತಿ ಅಕ್ರಮದ ವರದಿ ಮುಚ್ಚಿ ಹಾಕಲು ಕಾಂಗ್ರೆಸ್‌ನಿಂದಲೇ ನನಗೆ ಕೋಟಿ ಕೋಟಿ ಆಫರ್‌ ಬಂದಿತ್ತು.

 ಮಂಗಳೂರು :  ವಕ್ಫ್‌ ಆಸ್ತಿ ಕಬಳಿಕೆ ಕುರಿತು ಮೌನವಾಗಿರಲು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್‌ ಮಾಣಿಪ್ಪಾಡಿ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು 150 ಕೋಟಿ ರು. ಆಮಿಷವೊಡ್ಡಿದ್ದರು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಿಬಿಐ ತನಿಖೆ ಮಾಡಿಸಲಿ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಕ್ಕೆ ಸ್ವತಃ ಮಾಣಿಪ್ಪಾಡಿ ತಿರುಗೇಟು ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪ ಸುಳ್ಳು. ಬಿ.ವೈ.ವಿಜಯೇಂದ್ರ ಅವರು ನನಗೆ 150 ಕೋಟಿ ರು. ಆಫರ್‌ ನೀಡಿರಲಿಲ್ಲ. ವಕ್ಫ್‌ ಆಸ್ತಿ ಅಕ್ರಮದ ವರದಿ ಮುಚ್ಚಿ ಹಾಕಲು ಕಾಂಗ್ರೆಸ್‌ನಿಂದಲೇ ನನಗೆ ಕೋಟಿ ಕೋಟಿ ಆಫರ್‌ ಬಂದಿತ್ತು. ವರದಿ ಸಲ್ಲಿಕೆ ನಂತರ ಕಾಂಗ್ರೆಸ್‌ನ ಅನೇಕರು ನನಗೆ ಈ ಆಫರ್‌ ಮಾಡಿದ್ದರು. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಿ, ಎಲ್ಲವೂ ಹೊರಗೆ ಬರುತ್ತೆ ಎಂದಿದ್ದಾರೆ.

ವಕ್ಫ್‌ ಆಸ್ತಿ ಕಬಳಿಕೆ ಕುರಿತು ಮೌನವಾಗಿರಲು ವಿಜಯೇಂದ್ರ 150 ಕೋಟಿ ರು. ಆಮಿಷವೊಡ್ಡಿದ್ದಾರೆಂದು ಮಾಣಿಪ್ಪಾಡಿ ಮಾಡಿರುವ ಆರೋಪ ಸಂಬಂಧ ಪ್ರಧಾನಿ ತಕ್ಷಣ ಸಿಬಿಐ ತನಿಖೆಗೆ ಆದೇಶಿಸಬೇಕು. ಬಿಜೆಪಿ ಸರ್ಕಾರದಲ್ಲೇ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಮಾಣಿಪ್ಪಾಡಿಯವರು ವಿಜಯೇಂದ್ರ ಸಂಬಂಧಿಸಿ ಬರೆದಿರುವ ಪತ್ರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದರು.

ಮಂಗಳೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಣಿಪ್ಪಾಡಿ, ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ 2012ರಲ್ಲಿ ವಕ್ಫ್‌ ಆಸ್ತಿ ಅಕ್ರಮದ ಬಗ್ಗೆ ವರದಿ ನೀಡಿದ್ದೆ. ಆಗ ಯಡಿಯೂರಪ್ಪ ಸಿಎಂ ಆಗಿದ್ದರು. ನಮ್ಮ ಸರ್ಕಾರ ಇದ್ದಾಗಲೇ ವರದಿಯನ್ನು ನಿರ್ಲಕ್ಷ್ಯ ಮಾಡಿದ್ದೇಕೆ ಎಂದು ಕೇಳಿದ್ದೆ. ಆಗ ವಿಜಯೇಂದ್ರ ಅವರು ಈ ಕುರಿತ ಹೋರಾಟವನ್ನು ಬಿಟ್ಟುಬಿಡಿ ಎಂದಿದ್ದರು. ಈ ವಿಚಾರಕ್ಕೆ ನನ್ನ ಹಾಗೂ ವಿಜಯೇಂದ್ರ ನಡುವೆ ವಾಕ್ಸಮರ ಏರ್ಪಟ್ಟಿತ್ತು. ಆದರೆ, ಈ ಬಗ್ಗೆ ಮೌನ ವಹಿಸಲು 150 ಕೋಟಿ ರು. ಆಫರ್ ಮಾಡಿರಲಿಲ್ಲ. ಈ ಕುರಿತ ಸಿಎಂ ಆರೋಪ ಸುಳ್ಳು ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಅವರು ನೈಜ ವಿಚಾರವನ್ನು ಮುಚ್ಚಿಹಾಕಲು 150 ಕೋಟಿ ರು. ಆಫರ್‌ ವಿಷಯವನ್ನು ಹೇಳತೊಡಗಿದ್ದಾರೆ. ಇದರ ಬದಲು ಸಿದ್ದರಾಮಯ್ಯ ಅವರಿಗೆ ಅಲ್ಪಸಂಖ್ಯಾತರ ಮೇಲೆ ಕಾಳಜಿ ಇದ್ದರೆ ನನ್ನ ವರದಿಯನ್ನು ಸಿಬಿಐಗೆ ಹಸ್ತಾಂತರ ಮಾಡಲಿ. ನಾನು 7 ಸಾವಿರ ಪುಟಗಳ ವರದಿ ನೀಡಿದ್ದೆ. ಸಿಬಿಐ ತನಿಖೆ ಮಾಡಿದರೆ ಸಾವಿರಾರು ಪುಟಗಳಿಗೆ ವಿಸ್ತರಿಸಲಿದೆ. ಅಷ್ಟೊಂದು ಅಕ್ರಮಗಳು ನಡೆದಿವೆ. ರಾಜ್ಯದಲ್ಲಿ ಒಟ್ಟು 54 ಸಾವಿರ ಎಕರೆ ವಕ್ಫ್‌ ಆಸ್ತಿಯಲ್ಲಿ 27 ಸಾವಿರ ಎಕರೆಯಷ್ಟು ಒತ್ತುವರಿ ಆಗಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಾವಣಗೆರೆ, ಬಾಗಲಕೋಟೆ ಕ್ಷೇತ್ರ ನಮ್ದೆ : ಡಿ.ಕೆ.ಶಿವಕುಮಾರ್‌
ಟಿಬಿ ಡ್ಯಾಂ ಹಿನ್ನೀರಿನ ಕೈಗಾರಿಕೆ ಲೈಸೆನ್ಸ್‌ ರದ್ದತಿಗಾಗಿ ಹೋರಾಟ