ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಕಿರಂಗೂರು ಬನ್ನಿ ಮಂಟಪದಲ್ಲಿ ವಜ್ರ ಖಚಿತ ವೈರಮುಡಿ ಪೆಟ್ಟಿಗೆಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಪೂಜೆ ಸಲ್ಲಿಸಿದರು.ಮೇಲುಕೋಟೆಯಲ್ಲಿ ವೈರಮುಡಿ ಉತ್ಸವ ಹಿನ್ನೆಲೆ ಮಂಡ್ಯ ಜಿಲ್ಲಾ ಖಜಾನೆಯಿಂದ ಆಗಮಿಸಿದ ವೈರಮುಡಿ-ರಾಜಮುಡಿ ತಿರುವಾಭರಣ ಪೆಟ್ಟಿಗೆಗಳಿಗೆ ಶಾಸಕ ರಮೇಶ ಬಂಡಿಸಿದ್ದೇಗೌಡ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ತಹಸೀಲ್ದಾರ್ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಸ್ವಾಗತ ಕೋರಿದರು. ನಂತರ ವೈರಮುಡಿ-ರಾಜಮುಡಿ ತಿರುವಾಭರಣ ಪೆಟ್ಟಿಗೆಗಳನ್ನು ಶಾಸಕ ರಮೇಶ ಬಂಡಿಸಿದ್ದೇಗೌಡ, ಎಡೀಸಿ ಶಿವಾನಂದಮೂರ್ತಿ ಹೊತ್ತು ಸಾಗಿದರು.
ಗಡಿ ಗ್ರಾಮ ಕೋಡಿಶೆಟ್ಟಿಪುರ ಬಳಿ ಆಗಮಿಸುತ್ತಿದ್ದಂತೆ ಭಕ್ತರು ವೈರಮುಡಿ ಉತ್ಸವದ ವಜ್ರ ಕಿರೀಟ ಹೊತ್ತ ವಾಹನವನ್ನು ಸ್ವಾಗತಿಸಿ, ಪೂಜೆ ಸಲ್ಲಿಸಿದರು. ನಂತರ ಗಣಂಗೂರು, ಗೌಡಹಳ್ಳಿ, ಗೌರಿಪುರ ಕೆ.ಶೆಟ್ಟಹಳ್ಳಿ ಸೇರಿ ರಸ್ತೆ ಉದ್ದಕ್ಕೂ ಆಯಾ ಗ್ರಾಮಗಳ ಬಳಿ ಭಕ್ತರು ಪೂಜೆ ಸಲ್ಲಿಸಿದರು.ಬಳಿಕ ಕಿರಂಗೂರು ಬಳಿಯ ಬನ್ನಿ ಮಂಟಪ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ, ಪಾಂಡವಪುರ ಮಾರ್ಗವಾಗಿ ಮೇಲುಕೋಟೆಗೆ ಕೊಂಡೊಯ್ಯಲಾಯಿತು. ರಸ್ತೆ ಯುದ್ದಕ್ಕೂ ಅಲ್ಲಲ್ಲಿ ಪೂಜೆ ಸಲ್ಲಿಸಿ ಭಕ್ತರಿಗೆ ಮಜ್ಜಿಗೆ, ಪಾನಕ, ಕೋಸಂಬರಿ ಸೇರಿದಂತೆ ಇತರೆ ಪ್ರಸಾದ ವಿತರಿಸಿ ಬೀಳ್ಕೊಡಿಗೆ ನೀಡಿದರು.
ಶ್ರೀಲಕ್ಷ್ಮೀಜನಾರ್ದನಸ್ವಾಮಿ ದೇಗುಲಕ್ಕೆ ಚಿತ್ರನಟಿ ಭವ್ಯ ಭೇಟಿಕನ್ನಡಪ್ರಭ ವಾರ್ತೆ ಮಂಡ್ಯ
ವೈರಮುಡಿ ಬ್ರಹ್ಮೋತ್ಸವದಲ್ಲಿ ಪಾಲ್ಗೊಳ್ಳುವ ಸಲುವಾಗಿ ಮಂಡ್ಯಕ್ಕೆ ಭೇಟಿ ನೀಡಿದ್ದ ಚಿತ್ರನಟಿ ಭವ್ಯ ಅವರು ಸೋಮವಾರ ಬೆಳಗ್ಗೆ ನಗರದ ಶ್ರೀಲಕ್ಷ್ಮೀಜನಾರ್ದನಸ್ವಾಮಿ ದೇಗುಲಕ್ಕೆ ತೆರಳಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಪತಿ ಮುಖೇಶ್ ಪಟೇಲ್ ಅವರೊಂದಿಗೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ವೈರಮುಡಿ ಬ್ರಹ್ಮೋತ್ಸವ ವೀಕ್ಷಣೆಗೆ ತೆರಳುತ್ತಿದ್ದೆನು. ವೈರಮುಡಿ, ರಾಜಮುಡಿಗೆ ಶ್ರೀ ಲಕ್ಷ್ಮೀಜನಾರ್ದನಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಕೆ ಹಿನ್ನೆಲೆಯಲ್ಲಿ ಇಲ್ಲಿಗೆ ಪತಿಯೊಂದಿಗೆ ಆಗಮಿಸಿದ್ದೇನೆ. ನಾಡಿನಲ್ಲಿ ಉತ್ತಮ ಮಳೆಯಾಗಿ ಎಲ್ಲೆಡೆ ಸಮೃದ್ಧಿ ನೆಲೆಸಲಿ. ರೈತರು ಬೆಳೆದ ಬೆಳೆ ಅವರ ಕೈಸೇರುವಂತಾಗಲಿ. ನಾಡಿನ ಜನರಿಗೆ ಒಳ್ಳೆಯದಾಗಲೆಂದು ಪ್ರಾರ್ಥಿಸಿದ್ದೇನೆ ಎಂದರು.