ಕನ್ನಡಪ್ರಭ ವಾರ್ತೆ ಉಡುಪಿಅಯೋಧ್ಯೆ ರಾಮನ ಸೇವೆ ತಮಗೆ ಲಭಿಸಿರುವುದು ಗುರುಗಳಾದ ಶ್ರೀ ವಿಶ್ವೇಶತೀರ್ಥರ ತಪಸ್ಸಿನ ಫಲ. ಅದರ ಸರ್ವ ಕೀರ್ತಿ ರಾಮಮಂದಿರಕ್ಕಾಗಿ ಹೋರಾಡಿದ ದೇಶದ ಸಾಧುಸಂತರಿಗೆ ಅರ್ಪಿಸುತ್ತೇನೆ ಎಂದು ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವಿಶ್ವಸ್ಥರಾದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಹೇಳಿದರು.
ಸಾವಿರಾರು ರಾಮ ಭಕ್ತರ ಪರಿಶ್ರಮ ಹಾಗೂ ಸಹಕಾರದಿಂದ ಅಯೋಧ್ಯೆಯಲ್ಲಿ ನಿರ್ಮಾಣಗೊಂಡ ರಾಮ ಮಂದಿರದಲ್ಲಿ ಬಾಲರಾಮನ ವಿಗ್ರಹ ಪ್ರತಿಷ್ಠಾಪನೆಯನ್ನು ನಮ್ಮ ಗುರುಗಳೂ ಸಹಿತ ಸರ್ವ ಸಂತರ ಪರವಾಗಿ ನೆರವೇರಿಸಿದ್ದೇನೆ. ಆದ್ದರಿಂದ ಅದರ ಕೀರ್ತಿ ಸಮಸ್ತ ಸಂತ ಸಮಾಜಕ್ಕೆ ಸಲ್ಲುತ್ತದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಅದಮಾರು ಶ್ರೀ ಈಶಪ್ರಿಯತೀರ್ಥರು ಆಶೀರ್ವಚನ ನೀಡುತ್ತಾ, ರಾಮಮಂದಿರ ನಿರ್ಮಾಣದ ನಂತರ, ಬಡವರ ಸೇವೆಯ ಮೂಲಕ ರಾಮರಾಜ್ಯ ಸ್ಥಾಪನೆಯಾಗಬೇಕಾಗಿದೆ ಎಂಬ ಶ್ರೀ ವಿಶ್ವಪ್ರಸನ್ನ ತೀರ್ಥರ ಕಲ್ಪನೆ ಅದ್ಭುತ, ಇದಕ್ಕೆ ಎಲ್ಲರೂ ಬದ್ದರಾಗಬೇಕು ಎಂದು ಶ್ಲಾಘಿಸಿದರು.ವಾಗ್ಮಿಗಳಾದ ಪ್ರಕಾಶ್ ಮಲ್ಪೆ ಅವರಿಂದ ‘ಜಗಜ್ಜನನಿ ಭಾರತ’ ಹಾಗೂ ಶ್ರೀಕಾಂತ ಶೆಟ್ಟಿ ಅವರಿಂದ ‘ಅವಿನಾಶಿ ಭಾರತ’ ವಿಷಯ ಬಗ್ಗೆ ವಿಶೇಷ ಉಪನ್ಯಾಸ ನಡೆಯಿತು.ಇದೇ ಸಂದರ್ಭದಲ್ಲಿ ಸಾಧಕರಾದ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಬಿ.ಎಂ. ಸೋಮಯಾಜಿ, ಲೆಕ್ಕಪರಿಶೋಧಕ ವಿ.ಕೆ. ಹರಿದಾಸ್ ಮತ್ತು ಫರಂಗಿಪೇಟೆ ಆಂಜನೇಯ ದೇವಸ್ಥಾನವನ್ನು ಗೌರವಿಸಲಾಯಿತು.ಸಭಾಕಾರ್ಯಕ್ರಮಕ್ಕೂ ಮೊದಲು ಪ್ರಾದೇಶಾಚಾರ್ ಸಂಗೀತ ಕಛೇರಿ ನಡೆಯಿತು. ಸಭಾಂಗಣದ ಹೊರಗೆ ಗೋಪೂಜೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಶ್ರೀಗಳಿಗೆ ಹಾರಾರ್ಪಣೆ ಬದಲಿಗೆ ಅವರ ಗೋಶಾಲೆಗೆ ಗೋಗ್ರಾಸ ನೀಡಲಾಯಿತು.
ಶಾಸಕರಾದ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು. ಶ್ರೀಕೃಷ್ಣ ಸೇವಾ ಬಳಗ ಸಂಚಾಲಕ ಗೋವಿಂದರಾಜ್ ಸ್ವಾಗತಿಸಿದರು. ವಿದ್ವಾಂಸ ಕೃಷ್ಣರಾಜ ಭಟ್ ಕುತ್ಪಾಡಿ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಅಯೋಧ್ಯೆ ಮಂತ್ರಾಕ್ಷತೆ ವಿತರಿಸಲಾಯಿತು.